ನಾವು ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆ; ಆದರೆ, ಹೆಚ್ಚು ಆಟವಾಡಲು ಸಾಧ್ಯವಿಲ್ಲ. ನಮಗೆ ಸಮಯ ಮೀರಿದೆ. ಹಸಿರುಮನೆ ಹೊರಸೂಸುವಿಕೆಯನ್ನು ನಿಯಂತ್ರಿಸುವುದು ಅತೀ ತುರ್ತಿನ ಸಂದರ್ಭವಾಗಿದೆ
ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿರುವ ಲಾಸ್ ಏಂಜಲೀಸ್‌ನಲ್ಲಿ ಸಂಭವಿಸಿದ ಭೀಕರ ಕಾಡ್ಗಿಚ್ಚಿನಲ್ಲಿ ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. 16,000 ಎಕರೆ ಭೂಮಿ ದಹನವಾಗಿದೆ. 1,000ಕ್ಕೂ ಹೆಚ್ಚು ಮನೆ-ಕಟ್ಟಡಗಳು ಸುಟ್ಟುಹೋಗಿವೆ. ಹತ್ತಾರು ಸಾವಿರ ಮಂದಿ ಆಸ್ತಿ, ಪಾಸ್ತಿ ಕಳೆದುಕೊಂಡಿದ್ದಾರೆ. ಹಾಲಿವುಡ್ ನಟ-ನಟಿಯರು, ಸಂಗೀಕಾರರು ಹಾಗೂ ಇತರ ಸೆಲೆಬ್ರಿಟಿಗಳು ಬದುಕುಳಿದರೆ ಸಾಕೆಂದು ಮನೆ ತೊರೆದು ಓಡಿಹೋಗಿದ್ದಾರೆ. ಸುಮಾರು 70,000 ಜನರನ್ನು ರಕ್ಷಣಾ ಪಡೆಗಳು ಸ್ಥಳಾಂತರ ಮಾಡಿವೆ.
ಲಾಸ್ ಏಂಜಲೀಸ್ ತನ್ನ ಇತಿಹಾಸದಲ್ಲಿಯೇ ಅತ್ಯಂತ ಬೃಹತ್ ಕಾಡ್ಗಿಚ್ಚನ್ನು ಎದುರಿಸುತ್ತಿದೆ. ಲಾಸ್ ಏಂಜಲೀಸ್ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದ್ದರೂ, ಸಂಪೂರ್ಣವಾಗಿ ಬೆಂಕಿ ನಂದಿಸಲಾಗಿಲ್ಲ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿಲ್ಲ. ಪಾಲಿಸೇಡ್ಸ್, ಈಟನ್ ಮತ್ತು ಹರ್ಸ್ಟ್ ಪ್ರದೇಶಗಳಲ್ಲಿ ಗಾಳಿಯ ವೇಗ ತುಂಬಾ ಹೆಚ್ಚಾಗಿದ್ದು, ಬೆಂಕಿ ಇನ್ನೂ ವ್ಯಾಪಿಸುತ್ತಲೇ ಇದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳದೊಂದಿಗೆ ಕೆಲಸ ಮಾಡಲು ಅಗ್ನಿಶಾಮಕದ ನಿವೃತ್ತ ಅಧಿಕಾರಿ-ಸಿಬ್ಬಂದಿಗಳನ್ನೂ ಕರೆಯಲಾಗಿದೆ. ಜೊತೆಗೆ, ನೀರು ಮತ್ತು ಅಗ್ನಿಶಾಮಕದ ಕೊರತೆಯೂ ಎದುರಾಗಿದೆ. ಪರಿಸ್ಥಿತಿ ಉದ್ವಿಗ್ನವಾಗಿದೆ, ಹೊಗೆಯ ಇಡೀ ಪ್ರದೇಶವನ್ನು ಆವರಿಸಿಕೊಂಡಿದೆ.
ಕ್ಯಾಲಿಫೋರ್ನಿಯಾ ಮತ್ತು ಲಾಸ್ ಏಂಜಲೀಸ್‌ಗಳಲ್ಲಿ ಕಾಡ್ಗಿಚ್ಚು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಪ್ರತಿ ವರ್ಷವೂ ಇಂತಹ ಕಾಡ್ಗಿಚ್ಚಿನ ಘಟನೆಗಳು ನಡೆಯುತ್ತಲೇ ಇವೆ. ಕಳೆದ ವರ್ಷ, 2024ರ ಜುಲೈನಲ್ಲಿ ಉತ್ತರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದ ಬುಟ್ಟೆ ಕೌಂಟಿಯ ಓರೊವಿಲ್ಲೆ ನಗರ ಮತ್ತು ಪಲೆರ್ಮೊ ಪಟ್ಟಣದ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯು 14 ಚದುರ ಕಿ.ಮೀ ವ್ಯಾಪಿಸಿಕೊಂಡಿತ್ತು. ಪರಿಣಾಮ, 30,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರ ಮಾಡಲಾಗಿತ್ತು.
ಕ್ಯಾಲಿಪೋರ್ನಿಯಾ ಪ್ರದೇಶದಲ್ಲಿ ಕಾಡ್ಗಿಚ್ಚು ಪ್ರತಿವರ್ಷ ಸಂಭವಿಸುತ್ತಿರುವುದಕ್ಕೆ ನಾನಾ ಕಾರಣಗಳಿವೆ. ಅವುಗಳಲ್ಲಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯೂ ಒಂದು. ಜಾಗತಿಕ ತಾಪಮಾನ ಗಣನೀಯವಾಗಿ ಹೆಚ್ಚುತ್ತಿದೆ. ಬಿಸಿ ಗಾಳಿ ಬೀಸಲಾರಂಭಿಸಿದೆ. ಎಲ್-ನೀನೊ ಮತ್ತೆ-ಮತ್ತೆ ಎದುರಾಗುತ್ತಿದೆ. ಪರಿಣಾಮ, ಬಿಸಿಲು ಹೆಚ್ಚಾಗಿದೆ. ಇದು ಅರಣ್ಯ ಪ್ರದೇಶಗಳಲ್ಲಿ ಮತ್ತಷ್ಟು ಶಾಖವನ್ನು ಹೆಚ್ಚಿಸುತ್ತಿದೆ. ಹಸಿರುಮನೆ ಹೊರ ಸೂಸುಕಿವೆ ಮತ್ತು ತಾಪಮಾನದ ಏರಿಕೆಯಿಂದಾಗಿ ಕಾಡ್ಗಿಚ್ಚುಗಳು ಸಂಭವಿಸುತ್ತಿವೆ.

ತಾಪಮಾನ ಹೆಚ್ಚಳದಿಂದಾಗಿ ಅರಣ್ಯ ಪ್ರದೇಶದಲ್ಲಿ ಶುಷ್ಕತೆ ಕಡಿಮೆಯಾಗಿ ಒಣ ಪರಿಸ್ಥಿತಿಯು ಹೆಚ್ಚುತ್ತಿದೆ. ಈ ವರ್ಷ ಚಳಿ ಕಡಿಮೆಯಿದ್ದು, ಧಗೆಯ ವಾತಾವರಣೆ ಹೆಚ್ಚುತ್ತಿದೆ. ಪರಿಣಾಮವಾಗಿ ಜನವರಿಯಿಂದಲೇ ಹೆಚ್ಚು ಬಿಸಿಲು ಕಾಣಿಸಿಕೊಳ್ಳುತ್ತಿದೆ. ಭೂಮಿಯು ಬಿಸಿಯಾಗುತ್ತಿದೆ. ಕಾಡ್ಗುಚ್ಚುಗಳ ಆತಂಕವನ್ನು ಹೆಚ್ಚಿಸಿದೆ.
ಬಿಸಿಲಿನ ನಡುವೆ ಬೀಸುತ್ತಿರುವ ಬಿಸಿ ಗಾಳಿಯು ಬೆಂಕಿಯನ್ನು ಮತ್ತಷ್ಟು ವೇಗವಾಗಿ ಹಬ್ಬಿಸುತ್ತಿದೆ. ಡೀಪ್ ಸ್ಕೈನ ಹವಾಮಾನ ತಜ್ಞ ಮ್ಯಾಕ್ಸ್ ಡುಗನ್-ನೈಟ್ ಅವರು, “ಲಾಸ್ ಏಂಜಲೀಸ್‌ನಂತಹ ಸ್ಥಳಗಳಲ್ಲಿ ಇನ್ನು ಮುಂದೆ ಕಾಡ್ಗಿಚ್ಚುಗಳಿಗೆ ಅಂತ್ಯವಿಲ್ಲ” ಎಂದು ಹೇಳಿದರು.
ಜೊತೆಗೆ, ದಕ್ಷಿಣ ಕ್ಯಾಲಿಫೋರ್ನಿಯಾವು ಅಸಾಧಾರಣ ಬೇಸಿಗೆಯನ್ನು ಎದುರಿಸುತ್ತಿದೆ. ಈ ವರ್ಷ ಬೇಸಿಗೆ ಮತ್ತಷ್ಟು ಹೆಚ್ಚಗಿದೆ. ಮಳೆ ಕೊರತೆಯೂ ಎದುರಾಗಿದೆ. ಮಳೆಯ ಕೊರತೆಯಿಂದಾಗಿ ಭೂಮಿಯು ಒಣಗಿದೆ ಮತ್ತು ಬಿಸಿಲಿನಿಂದ ಸುಡುತ್ತಿದೆ. ಚಳಿಗಾಲದಲ್ಲಿ ಇರಬೇಕಾದ ಶುಷ್ಕತೆ ಈಗಾಗಲೇ ಕಾಣೆಯಾಗಿದೆ. ಮರ-ಗಿಡಗಳು ಒಳಗುತ್ತಿವೆ. ಬಿಸಿಲಿನ ತಾಪಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿವೆ.
ಡೀಪ್ ಸ್ಕೈ ರಿಸರ್ಚ್ನ ವರದಿಯ ಪ್ರಕಾರ, ಅಮೆರಿಕದ ಪ್ರತಿಯೊಂದು ಭಾಗದಲ್ಲೂ ತೀವ್ರವಾದ ಬೆಂಕಿಯ ಹವಾಮಾನ ಪರಿಸ್ಥಿತಿಗಳು ಹೆಚ್ಚುವ ಸಾಧ್ಯತೆಗಳಿವೆ. ಉತ್ತರ ಡಕೋಟಾ ಮತ್ತು ಮಿನ್ನೇಸೋಟದ ಭಾಗಗಳಂತಹ ಕೆಲವು ಪ್ರದೇಶಗಳು ಮಾತ್ರ ಬೆಂಕಿ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಆದರೆ, ಕ್ಯಾಲಿಫೋರ್ನಿಯಾ ಸೇರಿದಂತೆ ಹೆಚ್ಚಿನ ಪ್ರದೇಶಗಳು ಗಮನಾರ್ಹ ಕಾಡ್ಗಿಚ್ಚುಗಳನ್ನು ಎದುರಿಸುತ್ತವೆ ಎಂದು ಹೇಳಿದೆ.
“ಕಾಳ್ಗಿಚ್ಚು ಅಪಾಯಗಳು ಇನ್ನು ಮುಂದೆ ಬೆಂಕಿ ಪೀಡಿತ ಪ್ರದೇಶಗಳಿಗೆ ಸೀಮಿತವಾಗಿಲ್ಲ. ಐತಿಹಾಸಿಕವಾಗಿ ಕಡಿಮೆ ಕಾಡ್ಗಿಚ್ಚನ್ನು ಎದುರಿಸಿದ್ದ ಪ್ರದೇಶಗಳೂ ಕೂಡ ಮುಂದಿನ ದಿನಗಳಲ್ಲಿ ಬೆಂಕಿಯ ಜ್ವಾಲೆಯನ್ನು ಎದುರಿಸಬೇಕಾಗಿದೆ. ಬದಲಾಗುತ್ತಿರುವ ಹವಾಮಾನದಿಂದ ಹೆಚ್ಚು ಅಪಾಯಕ್ಕೆ ಸಿಕ್ಕಿಕೊಳ್ಳುತ್ತಿವೆ ಎಂದೂ ವರದಿ ಹೇಳಿದೆ.
ಐತಿಹಾಸಿಕವಾಗಿ, ಅತ್ಯಂತ ವಿನಾಶಕಾರಿ ಕಾಡ್ಗಿಚ್ಚುಗಳನ್ನು ಕಳೆದ 10 ವರ್ಷಗಳಲ್ಲಿ ಅಮೆರಿಕದ ಎದುರಿಸಿದೆ. ಅಲ್ಲದೆ, ಕಳೆದ 15 ವರ್ಷಗಳಲ್ಲಿ ವಿನಾಶಕಾರಿ ಕಾಡ್ಗಿಚ್ಚಿನಿಂದ ಅಮೆರಿಕವು 18.9 ಶತಕೋಟಿ ಡಾಲರ್‌ನಷ್ಟು ನಷ್ಟ ಅನುಭವಿಸಿದೆ.

ಹೀಗಿದ್ದರೂ, ಅಲ್ಲಿನ ಸರ್ಕಾರಗಳು ಎಚ್ಚೆತ್ತುಕೊಂಡಿಲ್ಲ. ಪರಿಣಾಮ, ಇದೀಗ ಮತ್ತೊಂದು ಕಾಡ್ಗಿಚ್ಚು ಎದುರಾಗಿದೆ. ಆ ಕಾಡ್ಗಿಚ್ಚು ಸುಮಾರು 1 ಲಕ್ಷ ಜನರ ಬದುಕನ್ನು ಅತಂತ್ರಗೊಳಿಸಿದೆ. ಭಾರೀ ವೇಗವಾಗಿ ಬೀಸುತ್ತಿರುವ ಪಾಲಿಸೇಡ್ಸ್ ಪ್ರದೇಶದಲ್ಲಿ ಬೆಂಕಿಯು ಮನೆಯಿಂದ ಮನೆಗೆ ವ್ಯಾಪಿಸಿಕೊಳ್ಳುತ್ತಂತೆ ಮಾಡಿದೆ. ಲಾಸ್ ಏಂಜಲೀಸ್ ಕೌಂಟಿ ಅಗ್ನಿಶಾಮಕ ಮುಖ್ಯಸ್ಥ ಆಂಥೋನಿ ಮರೋನ್ ಪ್ರಕಾರ, ಅವರ ಸಿಬ್ಬಂದಿಗಳು ವಿಪತ್ತುಗಳ ಪ್ರಮಾಣ ಮತ್ತು ವೇಗವನ್ನು ನಿಯಂತ್ರಿಸುವಲ್ಲಿ ಅಸಹಾಯಕಾರಿದ್ದಾರೆ. ನಮಗೆ ಅಗತ್ಯವಿರುವಷ್ಟು ಅಗ್ನಿಶಾಮಕ ಸಿಬ್ಬಂದಿಗಳಿಲ್ಲ. ನಾವು ಸಾಧ್ಯವಾದಷ್ಟು ಶ್ರಮವಹಿಸಿ ಬೆಂಕಿ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಲಾಸ್ ಏಂಜಲಿಸ್ನ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶದಲ್ಲಿ ಸುಂದರವಾದ ಬೆಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಹಾಲಿವುಡ್ ಸೆಲೆಬ್ರಿಟಿಗಳು ಬಹುಕೋಟಿ ಡಾಲರ್ ಮೌಲ್ಯದ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರ ನೂರಾರು ಮನೆಗಳು ಸುಟ್ಟು ನಾಶವಾಗಿವೆ. ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್ ಅವರ ವಾಸಿಸುವ ಪ್ರದೇಶಗಳಲ್ಲಿಯೂ ಬೆಂಕಿಜ್ವಾಲೆ ಅವರಿಸಿಕೊಂಡಿದ್ದು, ಕಾರುಗಳು, ಮನೆಗಳು ಮತ್ತು ಮರಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಲ್ಟಾಡೆನಾ ಪ್ರದೇಶದಲ್ಲಿ ವಾಸಿಸುತ್ತಿದ್ದ ಗಾಯಕಿ ಮತ್ತು ‘ದಿಸ್ ಈಸ್ ಅಸ್’ ಸಿನಿಮಾದ ನಟಿ ಮ್ಯಾಂಡಿ ಮೂರ್ ಅವರು ತಾವು ತನ್ನ ಮಕ್ಕಳೊಂದಿಗೆ ಬೆಂಕಿಯಿಂದ ತಪ್ಪಿಸಿಕೊಂಡು ಸಮತಟ್ಟಾದ ಪ್ರದೇಶಕ್ಕೆ ಓಡಿಹೋಗಿದ್ದೇನೆಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಈ ವರದಿ ಓದಿದ್ದೀರಾ?: ಸಾರಿಗೆ ದರ ಏರಿಕೆ ಖಂಡನೀಯ, ಜೀವ ಹಿಂಡುವ ಜಿಎಸ್‌ಟಿ ಬಗ್ಗೆ ಬಿಜೆಪಿ ಏಕೆ ಬಾಯಿ ಬಿಡುತ್ತಿಲ್ಲ?
ಎಮ್ಮಿ ಪ್ರಶಸ್ತಿ ವಿಜೇತ ನಟ ಜೇಮ್ಸ್ ವುಡ್ಸ್ ಅವರು ತಾವು ನೆಲೆಸಿರುವ ಪೆಸಿಫಿಕ್ ಪಾಲಿಸೇಡ್ಸ್ ಮನೆಯ ಬಳಿ ಮರಗಳು ಮತ್ತು ಪೊದೆಗಳನ್ನು ಆವರಿಸುತ್ತಿರುವ ಬೆಂಕಿಜ್ವಾಲೆಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. “ಇಷ್ಟು ದಿನ ಬೆಟ್ಟಗಳಲ್ಲಿ ನಮ್ಮ ಸುಂದರವಾದ ಪುಟ್ಟ ಮನೆಯನ್ನು ಹೊಂದಿದ್ದೆವು. ಅದನ್ನು ಈಗ ಕಳೆದುಕೊಂಡಿದ್ದೇವೆ. ಪ್ರೀತಿಪಾತ್ರರನ್ನು ಕಳೆದುಕೊಂಡಂತೆ ಭಾಸವಾಗುತ್ತಿದೆ” ಎಂದು ಹೇಳಿಕೊಂಡಿದ್ದಾರೆ.
ಇಷ್ಟೊಂದು ಭಯಾನಕವಾದಿ ಕಾಡ್ಗಿಚ್ಚುಗಳನ್ನು ಅಮೆರಿಕಾ ಸುಮಾರು 30 ವರ್ಷಗಳಿಂದ ನಿರಂತರವಾಗಿ ಎದುರಿಸುತ್ತಿದೆ. ಆದರೂ, ಅಲ್ಲಿನ ಸರ್ಕಾರಗಳು ಗಂಭೀರವಾಗಿಲ್ಲ. ಕಾಡ್ಗಿಚ್ಚನ್ನು ನಿಯಂತ್ರಿಸಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಪರಿಸರ ರಕ್ಷಣೆಗೆ ಒತ್ತುಕೊಡುತ್ತಿಲ್ಲ ಎಂಬ ಆರೋಪಗಳಿವೆ.
ಪರಿಸರ ರಕ್ಷಣೆಗೆ ಅಮೆರಿಕ ಮಾತ್ರವಲ್ಲ, ಇಡೀ ಜಗತ್ತು ಎಚ್ಚೆತ್ತುಕೊಳ್ಳಬೇಕಿದೆ. ತಾಪಮಾನ ನಿಯಂತ್ರಣಕ್ಕೆ ಮುಂದಾಗಬೇಕಿದೆ. ಹಾಗಾಗಿಯೇ, ”ನಾವು ಬೆಂಕಿಯೊಂದಿಗೆ ಆಟವಾಡುತ್ತಿದ್ದೇವೆ; ಆದರೆ, ಹೆಚ್ಚು ಆಟವಾಡಲು ಸಾಧ್ಯವಿಲ್ಲ. ನಮಗೆ ಸಮಯ ಮೀರಿದೆ. ಹಸಿರುಮನೆ ಹೊರಸೂಸುವಿಕೆಯ ಅಂತರವನ್ನು ನಿಯಂತ್ರಿಸುವುದು ಅತೀ ತುರ್ತಿನ ಸಂದರ್ಭವಾಗಿದೆ” ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೋ ಗುಟೆರೆಸ್ ಇತ್ತೀಚೆಗೆ ಹೇಳಿದ್ದರು. ಈಗಲೂ ಸಮಯವಿದೆ. ಜಗತ್ತು ಎಚ್ಚೆತ್ತುಕೊಳ್ಳಲಿದ್ದರೆ, ಕ್ಯಾಲಿಪೋರ್ನಿಯಾ, ಲಾಸ್ ಏಂಜಲೀಸ್ನಲ್ಲಿ ಎದುರಾಗುತ್ತಿರುವ ಬೃಹತ್ ಕಾಡ್ಗಿಚ್ಚುಗಳು ಇಡೀ ಜಗತ್ತನ್ನು ಆವರಿಸುತ್ತವೆ. ವ್ಯಾಪಿಸುತ್ತವೆ.