ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸವು ಮಾ.1ರಿಂದ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಾಕ್ಕೆ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಿಂದ ಉಮ್ರಾ ಯಾತ್ರೆ ನಿರ್ವಹಿಸಲು ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ, ಯಾತ್ರಿಕರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರವು, ಮೆಕ್ಕಾದ ಪವಿತ್ರ ಮಸೀದಿಯ ಆವರಣದಲ್ಲೇ ಮೊದಲ ಬಾರಿಗೆ ‘ಮೊಬೈಲ್ ಬಾರ್ಬರ್’ ಸೇವೆಯನ್ನು ಆರಂಭಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮೆಕ್ಕಾ ಹಾಗೂ ಮದೀನಾದ ಪವಿತ್ರ ಮಸೀದಿಗಳ ವ್ಯವಹಾರ ನೋಡಿಕೊಳ್ಳುವ ಸೌದಿ ಅರೇಬಿಯಾದ ಅಧಿಕಾರಿಗಳು, ‘ಮಸ್ಜಿದ್ ಅಲ್ ಹರಮ್‌ನಲ್ಲಿ ಮೊದಲ ಬಾರಿಗೆ ಎಂಬಂತೆ ಮೊಬೈಲ್ ಕ್ಷೌರ ಅಂಗಡಿಯನ್ನು ಪ್ರಾರಂಭಿಸಿದ್ದೇವೆ. ರಮಝಾನ್ ಉಪವಾಸ ಹಿಡಿದು ಬರುವ ಯಾತ್ರಿಕರಿಗೆ ದೀರ್ಘ ದೂರ ನಡೆಯುವುದನ್ನು ತಪ್ಪಿಸಲು ನೆರವಾಗುವ ಉದ್ದೇಶದಿಂದ ಈ ಸೇವೆಯನ್ನು ಉಚಿತವಾಗಿ ಆರಂಭಿಸಲಾಗಿದೆ’ ಎಂದು ತಿಳಿಸಿದ್ದಾರೆ.
The Presidency for the Affairs of the Two Holy Mosques has introduced a free mobile Barbar service for Umrah Pilgrims around Masjid Al Haram pic.twitter.com/4CxCiaN1Nj
— Inside the Haramain (@insharifain) March 2, 2025
ಮುಸ್ಲಿಮರು ಮೆಕ್ಕಾದಲ್ಲಿ ಪವಿತ್ರಾ ಉಮ್ರಾ ಯಾತ್ರೆಯನ್ನು ಮುಗಿಸಿ, ಮದೀನಾ ಕಡೆಗೆ ಹೋಗುವುದಕ್ಕೂ ಮುನ್ನ ಸಂಪೂರ್ಣ ಕೇಶಮುಂಡನ ಅಥವಾ ಕೂದಲು ಕತ್ತರಿಸುವ ಸಂಪ್ರದಾಯವಿದೆ. ಯಾತ್ರೆಯ ಭಾಗವಾಗಿ ಮುಸ್ಲಿಮರು ಈ ಪ್ರಕ್ರಿಯೆಯನ್ನು ನಡೆಸುತ್ತಾರೆ. ಆದರೆ, ಈ ಸೇವೆಯನ್ನು ಪಡೆದುಕೊಳ್ಳಬೇಕಾದರೆ ಮಸೀದಿಯ ಹೊರಗಡೆ ಬರಬೇಕಿತ್ತು. ರಮಝಾನ್ ಉಪವಾಸ ಹಿಡಿದು, ನಡೆಯುವುದನ್ನು ತಪ್ಪಿಸಿ, ದಣಿವಾಗದಂತೆ ನೋಡಿಕೊಳ್ಳಲು ಮೆಕ್ಕಾದ ಮಸೀದಿಯಲ್ಲಿ ಇದೇ ಮೊದಲ ಬಾರಿಗೆ ‘ಮೊಬೈಲ್ ಬಾರ್ಬರ್’ ಸೇವೆಯನ್ನು ಆರಂಭಿಸಲಾಗಿದೆ.
ಈ ನೂತನ ಸೇವೆಯು ಯಾತ್ರಿಕರಿಗೆ ಸ್ಥಳದಲ್ಲೇ ಹೇರ್ ಕಟ್ ಸೇವೆಗಳನ್ನು ನೀಡುವ ಮೂಲಕ ದೀರ್ಘ ನಡಿಗೆ ಮತ್ತು ದೀರ್ಘ ಸರತಿ ಸಾಲುಗಳನ್ನು ತಪ್ಪಿಸಲು ಅನುವು ಮಾಡಿಕೊಡುತ್ತಿದೆ. ಈ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
First time in Masjid Al Haram!
— The Holy Mosque (@theholymosques) March 2, 2025
The Affairs of Two Holy Mosques has launched the Mobile Barbershop, which helps pilgrims avoid walking long distances. pic.twitter.com/943nAAJJJc
ಸೌದಿ ಅರೇಬಿಯಾ ಸರ್ಕಾರವು ಆರಂಭಿಸಿರುವ ಈ ‘ಮೊಬೈಲ್ ಬಾರ್ಬರ್’ ಸೇವೆಯನ್ನು ನೀಡಲು ಈಗಾಗಲೇ ತರಬೇತಿ ಪಡೆದ ಸಿಬ್ಬಂದಿ ಆರೋಗ್ಯಕರ ಮತ್ತು ಪರಿಣಾಮಕಾರಿ ರೀತಿಯಲ್ಲಿ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಮೆಕ್ಕಾದಲ್ಲಿ ಕ್ಷೌರದ ಸೇವೆಗೆ 10 ಸೌದಿ ರಿಯಾಲ್(ಭಾರತದ ರೂಪಾಯಿ ಮೌಲ್ಯ 200ರಿಂದ 250₹) ನೀಡಬೇಕಿದೆ. ಈಗ ಉಚಿತ ಸೇವೆ ಆರಂಭಿಸಿರುವುದಕ್ಕೆ ಉಮ್ರಾ ಯಾತ್ರಿಕರು ಸಂತಸ ವ್ಯಕ್ತಪಡಿಸಿದ್ದಾರೆ.
ರಮಝಾನ್ ತಿಂಗಳಿಗೆ ಮಾತ್ರ ಸೀಮಿತಗೊಳಿಸಲು ವಿನಂತಿ
‘ಸೌದಿ ಅರೇಬಿಯಾ ಸರ್ಕಾರ ಆರಂಭಿಸಿರುವ ಈ ಉಚಿತ ಸೇವೆಯು ಒಳ್ಳೆಯದೇ. ಆದರೆ, ಈ ಉಚಿತ ಸೇವೆಯಿಂದ ಮಸೀದಿಯ ಹೊರಗಡೆ ಇರುವ ಕ್ಷೌರದ ಅಂಗಡಿಗಳ ವ್ಯಾಪಾರಸ್ಥರಿಗೆ ಹಾಗೂ ನೌಕರರಿಗೆ ಉದ್ಯೋಗ ಇಲ್ಲದಂತಾಗಬಹುದು. ಹಾಗಾಗಿ, ಈ ಸೇವೆಯನ್ನು ರಮಝಾನ್ ಉಪವಾಸದ ತಿಂಗಳಲ್ಲಿ ಮಾತ್ರವೇ ನೀಡಿ’ ಎಂದು ನೆಟ್ಟಿಗರು ಸೋಷಿಯಲ್ ಮೀಡಿಯಾಗಳಲ್ಲಿ ಸೌದಿ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.
