ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಾರ್ಕ್ಸ್ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ಅವರು ಶೇ.43.31 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.ದಿಸ್ಸನಾಯಕೆ ಅವರು ನ್ಯಾಷನಲ್ ಪೀಪಲ್ಸ್ ಪವರ್ (ಎನ್ಪಿಪಿ) ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಕ್ಸ್ವಾದಿ ಜನತಾ ವಿಮುಕ್ತಿ ಪೆರೆಮುನಾ (ಜೆವಿಪಿ) ಪಕ್ಷದಿಂದ ಕಣಕ್ಕಿಳಿದಿದ್ದರು.
ಪ್ರತಿಪಕ್ಷದ ನಾಯಕ ಸಜಿತ್ ಪ್ರೇಮದಾಸ ಶೇ. 22ರಷ್ಟು ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮೂರನೇ ಸ್ಥಾನದಲ್ಲಿದ್ದಾರೆ.
ಚುನಾವಣಾ ಆಯೋಗದ ಪ್ರಕಾರ, ಅರ್ಹ 1.70 ಕೋಟಿ ಜನರಲ್ಲಿ ಸುಮಾರು 75 ಪ್ರತಿಶತದಷ್ಟು ಜನರು ಶನಿವಾರ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ.
55 ವರ್ಷದ ದಿಸ್ಸನಾಯಕೆ ಅವರ ಪಕ್ಷವು ಶ್ರೀಲಂಕಾ ಸಂಸತ್ನಲ್ಲಿ ಮೂರು ಸ್ಥಾನಗಳನ್ನು ಹೊಂದಿದೆ. ಭ್ರಷ್ಟಾಚಾರ ವಿರೋಧಿ ಕಠಿಣ ಕ್ರಮಗಳು ಮತ್ತು ಜನಸ್ನೇಹಿ ನೀತಿಗಳನ್ನು ರೂಪಿಸುವುದಾಗಿ ದಿಸ್ಸನಾಯಕೆ ಚುನಾವಣೆ ಪ್ರಚಾರದ ವೇಳೆ ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಡಿನೋಟಿಫಿಕೇಷನ್ ಹಗರಣ: ಲೋಕಾಯುಕ್ತ ತನಿಖೆ ತೆವಳುತ್ತಿರುವುದೇಕೆ?
ದಿಸ್ಸನಾಯಕೆ ಅವರ ಪಕ್ಷ ಸರ್ಕಾರದ ಜನರ ವಿರೋಧಿ ತೆರಿಗೆ ಮತ್ತು ಆರ್ಥಿಕ ನೀತಿಗಳ ವಿರುದ್ಧ ಹೋರಾಟ ನಡೆಸಿ ಶ್ರೀಲಂಕಾ ಜನತೆಯ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ.
2022ರಲ್ಲಿ ಶ್ರೀಲಂಕಾದಲ್ಲಿ ತೀವ್ರ ಅರ್ಥಿಕ ಬಿಕ್ಕಟ್ಟು ಉಂಟಾಗಿ ಹಣದುಬ್ಬರ ಗಗನಕ್ಕೇರಿತ್ತು. ಜನರಿಗೆ ಅಗತ್ಯ ವಸ್ತುಗಳ ಕೊರತೆ ಉಂಟಾಗಿ ಪರದಾಡುವಂತಾಗಿತ್ತು. ಆಗ ಸರ್ಕಾರದ ವಿರುದ್ದ ಹೋರಾಟ ರೂಪಿಸಿದ್ದರ ಹಿಂದೆ ದಿಸ್ಸನಾಯಕೆ ಅವರ ಪಾತ್ರ ದೊಡ್ಡದಿತ್ತು. ಅವರು ನೇರವಾಗಿ ದಂಗೆಯೇಳದಿದ್ದರೂ, ಜನರು ಹೋರಾಟ ಕೈಗೊಂಡಿದ್ದರ ಹಿಂದೆ ಅವರ ಪ್ರೇರೇಪಣೆಯಿತ್ತು ಎಂದು ವರದಿಗಳು ಹೇಳಿವೆ.
