ಮೈಕ್ರೋಸಾಫ್ಟ್ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆಯುಂಟಾದ ಕಾರಣ ಕಂಪ್ಯೂಟರ್‌ನಲ್ಲಿ ಮೈಕ್ರೋಸಾಫ್ಟ್ ಅವಲಂಬಿಸಿದ್ದ ಹಲವು ಸೇವೆಗಳಿಗೆ ತೊಂದರೆಯುಂಟಾಗಿದೆ. ವಿಶ್ವದಾದ್ಯಂತ ವಿಮಾನ, ಬ್ಯಾಂಕ್, ಷೇರು ಮಾರುಕಟ್ಟೆ, ಪಾವತಿ ಸೇವೆ ಹಾಗೂ ತುರ್ತು ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೈಕ್ರೋಸಾಫ್ಟ್, “ನಮ್ಮ ದುರಸ್ತಿ ಕಾರ್ಯಚಟುವಟಿಕೆಗಳು ನಡೆಯುತ್ತಿರುವುದರಿಂದ ಹಲವು ಸೇವೆಗಳಲ್ಲಿ ಸುಧಾರಣೆಯಾಗುತ್ತಿರುವುದು ಮುಂದುವರಿದಿದೆ” ಎಂದು ತಿಳಿಸಿದೆ.
ಮೈಕ್ರೋಸಾಫ್ಟ್‌ನಲ್ಲಿ ಭದ್ರತಾ ಪರಿಹಾರಕ್ಕಾಗಿ ಒದಗಿಸಿರುವ ಸೈಬರ್ ಸೆಕ್ಯೂರಿಟಿ ವೇದಿಕೆಯಾದ ಕ್ರೌಡ್‌ಸ್ಟ್ರೈಕ್ ಫಾಲ್ಕಾನ್ ವೈಫಲ್ಯದಿಂದಾಗಿ ತಾಂತ್ರಿಕ ದೋಷ ಸಂಭವಿಸಿದೆ. ಈ ಸಮಸ್ಯೆಯನ್ನು ಹಲವು ಗಂಟೆಗಳ ಕಾಲ ಪರಿಹರಿಸಲು ಸಮಯವುಂಟಾದ ಕಾರಣ ಹಲವು ಸೇವೆಗಳಲ್ಲಿ ವ್ಯತ್ಯಯವುಂಟಾಗಿದೆ.
ಈ ಸುದ್ದಿ ಓದಿದ್ದೀರಾ? ಅಮೆರಿಕ | ಚುನಾವಣೆಯಿಂದ ಹಿಂದೆ ಸರಿಯಿರಿ; ಜೋ ಬೈಡನ್‌ಗೆ ಒಬಾಮಾ ಸೇರಿ ಪ್ರಮುಖ ನಾಯಕರ ಒತ್ತಾಯ
ಭಾರತದಲ್ಲೂ ಕೂಡ ವಿಮಾನ ಕಾರ್ಯಾಚರಣೆಗಳು, ಪಾವತಿ ವ್ಯವಸ್ಥೆಗಳು ಹಾಗೂ ವಾಣಿಜ್ಯ ಚಟುವಟಿಕೆ ಸೇರಿದಂತೆ ಹಲವು ಸೇವೆಗಳಲ್ಲಿ ಸಮಸ್ಯೆಯುಂಟಾಗಿದೆ. ಹಲವು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳು ವಿಳಂಬವಾಗಿ ಪ್ರಯಾಣಿಕರು ಬಹು ದೂರದವರೆಗಿನ ಸರದಿ ಸಾಲಿನಲ್ಲಿ ಕಾಯುತ್ತಿದ್ದಾರೆ. ಇಂಡಿಗೋ, ಆಕಾಸ ಹಾಗೂ ಸ್ಪೈಸ್‌ಜೆಟ್ ಸೇರಿ ಹಲವು ವಿಮಾನ ನಿಲ್ದಾಣಗಳಲ್ಲಿ ಬುಕ್ಕಿಂಗ್ ಹಾಗೂ ಆಗಮನ ಸೇವೆಗಳಿಗೆ ತೊಂದರೆಯಾಗಿದೆ.
ವಿಮಾನ ನಿಲ್ದಾಣದಲ್ಲಿ ತೊಂದರೆಯುಂಟಾಗಿರುವ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದ್ದು, ಸಮಸ್ಯೆಯನ್ನು ಪರಿಹರಿಸಲು ಮೈಕ್ರೊಸಾಫ್ಟ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಇಂಗ್ಲೆಂಡ್, ಅಮೆರಿಕ, ಜರ್ಮನಿ, ನೆದರ್‌ಲ್ಯಾಂಡ್ಸ್, ಸ್ಪೇನ್ ಸೇರಿದಂತೆ ಹಲವು ದೇಶಗಳ ವಿಮಾನ ನಿಲ್ದಾಣಗಳಲ್ಲಿ ಸಮಸ್ಯೆಯುಂಟಾಗಿದೆ.
ಭಾರತದ ಬಿಎಸ್‌ಸಿ, ಎನ್‌ಎಸ್‌ಸಿ, ಲಂಡನ್ ಸ್ಟಾಕ್ ಎಕ್ಸ್‌ಚೇಂಚ್ ಸೇರಿದಂತೆ ಹಲವು ದೇಶಗಳ ಷೇರು ಮಾರುಕಟ್ಟೆಗಳಲ್ಲಿ ವ್ಯತ್ಯಯವುಂಟಾಗಿದೆ.
ಟಿವಿ ಪ್ರಸಾರ ಸ್ಥಗಿತ
ವಿಶ್ವದಾದ್ಯಂತ ಹಲವು ದೇಶಗಳ ಟಿವಿ ಪ್ರಸಾರ ಸೇವೆಯಲ್ಲಿಯೂ ಸ್ಥಗಿತವುಂಟಾಗಿದೆ. ಇಂಗ್ಲೆಂಡಿನ ಸ್ಕೈ ನ್ಯೂಸ್, ಸುದ್ದಿ ಮಾಧ್ಯಮ ಅಸೋಸಿಯೇಟೆಡ್ ಪ್ರೆಸ್ ಕೂಡ ತೊಂದರೆ ಅನುಭವಿಸಿದೆ.