ಪಾಕಿಸ್ತಾನದಲ್ಲಿ ನಿಷೇಧಿಸಲ್ಪಟ್ಟಿರುವ ಪ್ರತ್ಯೇಕತಾವಾದಿ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಸಂಘಟನೆಯು ಪ್ರಯಾಣಿಕರಿದ್ದ ಬಸ್ ಮೇಲೆ ಬಾಂಬ್ ದಾಳಿಸಿರುವ ಘಟನೆ ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ದಾಳಿಯಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿದ್ದಾರೆ.
ಕರಾಚಿಯಿಂದ ಟರ್ಬತ್‌ಗೆ ಹೋಗುವ ಬಸ್‌ನ ಬಳಿ ಸುಧಾರಿತ ಸ್ಫೋಟಕ ಸಾಧನ ಸ್ಫೋಟಗೊಂಡಾಗ ಟರ್ಬತ್ ನಗರದ ನ್ಯೂ ಬಹ್ಮನ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.
4 ಮೃತದೇಹಗಳು ಮತ್ತು 32 ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಫೋಟದ ನಿಖರವಾದ ವಿವರಗಳನ್ನು ತನಿಖೆ ಮಾಡಲಾಗುತ್ತಿದೆ. ಆದರರೆ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿ ಎಸ್‌ಎಸ್‌ಪಿ ಜೊಹೈಬ್ ಮೊಹ್ಸಿನ್ ಅವರು ಕುಟುಂಬದೊಂದಿಗೆ ಬಸ್‌ನಲ್ಲಿದ್ದರು. ಇವರನ್ನು ಗುರಿ ಮಾಡಿ ಈ ದಾಳಿ ನಡೆದಿರಬಹುದೆಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಮತ್ತು ಅವರ ಕುಟುಂಬವು ಮದುವೆ ಪಾರ್ಟಿಗಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಬಲೂಚಿಸ್ತಾನ್ ಪ್ರಾಂತ್ಯದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಅವರು ದಾಳಿಯನ್ನು ಖಂಡಿಸಿದ್ದು, ಅಮಾಯಕರನ್ನು ಗುರಿ ಮಾಡುವವರನ್ನು ಮನುಷ್ಯರು ಎಂದು ಕರೆಯಲು ಅರ್ಹರಲ್ಲ ಎಂದಿದದಾರೆ.
ಬಲೂಚ್ ಲಿಬರೇಶನ್ ಆರ್ಮಿ ಎಂಬ ಪ್ರತ್ಯೇಕತಾವಾದಿ ಗುಂಪು ಸ್ಫೋಟದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಬಲೂಚಿಸ್ತಾನ್ ಪಾಕಿಸ್ತಾನದ ಅತಿದೊಡ್ಡ ಪ್ರಾಂತ್ಯವಾಗಿದೆ. ಆದರೆ ಕಡಿಮೆ ಜನಸಂಖ್ಯೆ ಹೊಂದಿದೆ. ಇದು ದೇಶದಲ್ಲಿ ಬಲೂಚ್ ಅಲ್ಪಸಂಖ್ಯಾತ ಜನಾಂಗದ ಕೇಂದ್ರವಾಗಿದೆ. ಇವರ ಪಾಕ್ ಸರ್ಕಾರದಿಂದ ತಾರತಮ್ಯವನ್ನು ಎದುರಿಸುತ್ತಿದ್ದಾರೆ ಎಂದು ಬಲೂಚ್ ಲಿಬರೇಶನ್ ಆರ್ಮಿಯ ಆರೋಪವಾಗಿದೆ.
ಬಲೂಚಿಸ್ತಾನ್ ದೀರ್ಘಾವಧಿಯಿಂದ ದಂಗೆಯನ್ನು ಕಾಣುತ್ತಿದೆ. ಹಲವಾರು ಪ್ರತ್ಯೇಕತಾವಾದಿ ಗುಂಪುಗಳು ದಾಳಿಗಳನ್ನು ನಡೆಸುತ್ತಿವೆ. ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸಿ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡಿವೆ. ಅಲ್ಲಿಂದಲೇ ಕಾರ್ಯನಿರ್ವಹಿಸುತ್ತಿರುವ ಇತರ ಉಗ್ರಗಾಮಿ ಗುಂಪುಗಳನ್ನೂ ಈ ಪ್ರಾಂತ್ಯ ಹೊಂದಿದೆ.