ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಶುಕ್ರವಾರ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಹೊಗೆಯ ಮಂಜು ಆವರಿಸಿಕೊಂಡಿದ್ದು, ಎರಡು ನಗರಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
ಪಂಜಾಬ್ ಪ್ರಾಂತ್ಯದಲ್ಲಿ ಆಕ್ರಮಿಸಿಕೊಂಡಿರುವ ಹೊಯು ಜನರನ್ನು ಉಸಿರುಗಟ್ಟಿಸುತ್ತಿದೆ. ಸುಮಾರು 20 ಲಕ್ಷ ಮಂದಿ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ ಬೆಕ್ಕಟ್ಟನ್ನು ನಿಭಾಯಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಲ್ತಾನ್ ಮತ್ತು ಲಾಹೋರ್ ನಗರಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ ಎಂದು ಸಚಿವ ಮರಿಯುಮ್ ಔರಂಗಜೇಬ್ ತಿಳಿಸಿದ್ದಾರೆ.
“ಹೊಗೆಯು ಪ್ರಸ್ತುತ ರಾಷ್ಟ್ರೀಯ ವಿಪತ್ತಾಗಿ ಪರಿಣಮಿಸಿದೆ. ಇದು ಒಂದು ತಿಂಗಳು ಅಥವಾ ಇನ್ನೂ ಹೆಚ್ಚು ದಿನ ಮುಂದುವರೆಯಬಹುದು. ನಾವು ಮೂರು ದಿನಗಳ ನಂತರ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ. ಬಳಿಕ, ಮುಂದಿನ ಕಾರ್ಯತಂತ್ರಗಳನ್ನು ರೂಪಿಸಿ, ಜಾರಿಗೊಳಿಸುತ್ತೇವೆ” ಎಂದು ಹೇಳಿದ್ದಾರೆ.
“ಅಪಾಯಕಾರಿ ಗಾಳಿಯ ಗುಣಮಟ್ಟದಿಂದಾಗಿ ಶಾಲೆಗಳನ್ನು ಒಂದು ವಾರಗಳ ಮಟ್ಟಿಗೆ ಮುಚ್ಚಲಾಗಿದೆ. ವಿಶ್ವವಿದ್ಯಾನಿಲಯಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿಗಳನ್ನು ನಡೆಸಲು ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
“ಆರೋಗ್ಯ ಬಿಕ್ಕಟ್ಟನ್ನು ನಿಭಾಯಿಸುವ ಉದ್ದೇಶದಿಂದ ವೈದ್ಯಕೀಯ ಸಿಬ್ಬಂದಿಗಳ ರಜೆ ಮತ್ತು ಸಮಯದ ಮಿತಿಯನ್ನು ರದ್ದುಗೊಳಿಸಲಾಗಿದೆ. ದಿನನಿತ್ಯ ಸಂಜೆ 4 ಗಂಟೆಗೆ ರೆಸ್ಟೋರೆಂಟ್‌ಗಳನ್ನು ಮುಚ್ಚಲು ಸೂಚಿಸಲಾಗಿದೆ. ಮುಲ್ತಾನ್ ಮತ್ತು ಲಾಹೋರ್ ನಗರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದ್ದು, ಈ ನಗರಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ವಿವರಿಸಿದ್ದಾರೆ.
ಈ ವರದಿ ಓದಿದ್ದೀರಾ?: ಬಿಸಿ ಗಾಳಿ ಬೀಸುತ್ತಿದೆ – ತಾಪಮಾನ ಏರುತ್ತಿದೆ; ಪ್ರಕೃತಿ ತಿರುಗಿ ಬೀಳಲಿದೆ!
ಲಾಹೋರ್‌ನಲ್ಲಿ 1.1 ಕೋಟಿ ಜನಸಂಖ್ಯೆಯಿದ್ದು, ಅಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು (AQI) 600ರ ಗಡಿ ದಾಟಿದೆ. ಸೂಚ್ಯಂಕವು 300ಕ್ಕಿಂತ ಹೆಚ್ಚು ದಾಟಿದರೆ, ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ.
ಹೆಚ್ಚಿನ ಸಂಖ್ಯೆಯ ವಾಹನಗಳು, ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳು ಹಾಗೂ ಕೃಷಿ ತ್ಯಾಜ್ಯಗಳ ಸುಡುವಿಕೆಯಿಂದ ಹೊಗೆಯು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಆದಾಗ್ಯೂ, ಮುಂದಿನ ದಿನಗಳಲ್ಲಿ ಭಾರೀ ಮಳೆ ಮತ್ತು ಗಾಳಿ ಬೀಸಲಿದ್ದು, ಪಂಜಾಬ್ ಪ್ರಾಂತ್ಯದಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವ ಸಾಧ್ಯತೆ ಇದೆ ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿದೆ.