ಅಮೆರಿಕದಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ಹೋರಾಟ ಮಾಡುವುದರಲ್ಲಿ ಮುಂಚೂಣಿಯಲ್ಲಿದ್ದ ಮಿಲಿಂದ್ ಮಕ್ವಾನಾ (54) ಮೃತಪಟ್ಟಿದ್ದಾರೆ.
ಇತ್ತೀಚೆಗೆ ಮಿಲಿಂದ್ ಅವರು ಕ್ಯಾಲಿಫೋರ್ನಿಯಾದ ಕ್ಯುಪರ್ಟಿನೋ ನಗರದ ಸಿಟಿ ಕೌನ್ಸಿಲ್ ಸಭೆಯಲ್ಲಿ ಜಾತಿ ತಾರತಮ್ಯ ವಿರೋಧಿ ಮಸೂದೆಯ ವಿರುದ್ಧ ಸುದೀರ್ಘ ಭಾಷಣ ಮಾಡಿದ್ದರು. ಸಭೆಯಿಂದ ಆಗಮಿಸಿ ಬಂದ ಅವರು ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದಿದ್ದರು. ಪತ್ನಿ ಪೂರ್ವಿ ಮಕ್ವಾನಾ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಹೃದಯ ಸ್ತಂಭನದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾ ಸ್ಟೇಟ್ ಅಸೆಂಬ್ಲಿಯು ಇತ್ತೀಚೆಗೆ ಜಾತಿ ತಾರತಮ್ಯ ವಿರೋಧಿ ಮಸೂದೆ (SB403) ಜಾರಿಗೆ ತರಲು ಹೊರಟಿತ್ತು. “ಇದು ಅಮೆರಿಕದಲ್ಲಿನ ಭಾರತೀಯ ಮೇಲ್ಜಾತಿ ಹಾಗೂ ದಲಿತರ ನಡುವೆ ತಾರತಮ್ಯ ಮಾಡುತ್ತದೆ’’ ಎಂದು ಮಿಲಿಂದ್ ಅವರು SB403 ವಿರುದ್ಧ ತೀವ್ರ ಧ್ವನಿ ಎತ್ತಿದ್ದರು.
ಮಿಲಿಂದ್ ಅವರು ಸೇವಾ ಇಂಟರ್‌ನ್ಯಾಷನಲ್ ಯುಎಸ್‌ಎನಲ್ಲಿ ಸಕ್ರಿಯ ಸ್ವಯಂ ಸೇವಕರಾಗಿದ್ದರು. ಅಲ್ಲದೇ ಅಮೆರಿಕದಲ್ಲಿ ಭಾರತೀಯ ದಲಿತರ ಹಾಗೂ ಶೋಷಿತರ ಬಗ್ಗೆ ಹೋರಾಟಗಳಲ್ಲಿ, ಸಮಾವೇಶಗಳಲ್ಲಿ, ಚರ್ಚಾಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.

ಮಕ್ವಾನಾ ಅವರು ಅಂಬೇಡ್ಕರ್ ಫುಲೆ ನೆಟ್ವರ್ಕ್ ಆಫ್ ಅಮೆರಿಕನ್ ದಲಿತ್ಸ್ ಅಂಡ್ ಬಹುಜನ್ಸ್ ಸಮಸ್ಥೆಯ (APNADB) ಸದಸ್ಯರೂ ಆಗಿದ್ದರು. ಅಮೆರಿಕದಲ್ಲಿ ನೆಲೆಸಿರುವ ಶೋಷಿತ ಸಮುದಾಯಗಳ ಪರವಾಗಿ ಮಿಲಿಂದ್ ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಹಾಸ್ಯ ಚಕ್ರವರ್ತಿ’ ಶತಮಾನೋತ್ಸವ | ಕನ್ನಡಿಗರ ಆಯಸ್ಸು ಹೆಚ್ಚಿಸಿದ ನರಸಿಂಹರಾಜು ಬದುಕಿದ್ದು ಕೇವಲ 56 ವರ್ಷ!
“ದಲಿತರು ಮತ್ತು ಬಹುಜನರು ಸಹ ಹಿಂದೂಗಳು ಎಂದು ಮಿಲಿಂದ್ ಅವರಿಗೆ ಸ್ಪಷ್ಟವಾದ ನಂಬಿಕೆ ಇತ್ತು. ಅವರು ದಲಿತ ಸಮುದಾಯಗಳಿಗೆ ನ್ಯಾಯ ದೊರಕಿಸುವ ಸಲುವಾಗಿ ಹೆಚ್ಚು ಹೋರಾಟಗಳನ್ನು ನಡೆಸಿದ್ದರು. ಅಲ್ಲದೆ ಎಲ್ಲ ಸಮುದಾಯಗಳ ನಡುವೆ ಪರಸ್ಪರ ನಂಬಿಕೆ ಮತ್ತು ಸಾಮರಸ್ಯವನ್ನು ಬಯಸಿದ್ದರು. ಮಿಲಿಂದ್ ತಮ್ಮ ಜೀವನದುದ್ದಕ್ಕೂ ಶೋಷಿತರ ಪರ ಹೋರಾಡಿದ್ದರು. ಅವರ ನ್ಯಾಯ, ಸಾಮರಸ್ಯದ ಕನಸನ್ನು ಬೆಂಬಲಿಸಲು ಮತ್ತು ಮುಂದುವರಿಸಿಕೊಂಡು ಹೋಗಲು ನಾನು ಅಮೆರಿಕದಲ್ಲಿರುವ ಭಾರತೀಯ ಸಮುದಾಯಗಳಿಗೆ ಮನವಿ ಮಾಡುತ್ತೇನೆ” ಎಂದು ಮಿಲಿಂದ್ ಪತ್ನಿ ಪೂರ್ವಿ ಮಕ್ವಾನಾ ಹಿಂದೂ ಸ್ವಯಂಸೇವಕ ಸಂಘ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2015ರಲ್ಲಿ ತಮಿಳುನಾಡಿನಲ್ಲಿ ಪ್ರವಾಹ ಉಂಟಾದಾಗ ಮಿಲಿಂದ್ ಮಕ್ವಾನಾ ಭೇಟಿ ನೀಡಿ ನೆರೆಯಿಂದ ತೊಂದರೆಗೊಳಗಾದ ಜನರಿಗೆ ಸಹಾಯ ನೀಡಿದ್ದರು.
ದಲಿತ ಸಂಘಟನೆಗಳ ಭಿನ್ನಾಭಿಪ್ರಾಯ
ಮಿಲಿಂದ್ ಬಗ್ಗೆ ದಲಿತ ಸಂಘಟನೆಗಳು ಹಾಗೂ ನಾಯಕರಲ್ಲಿ ಹಲವು ಭಿನ್ನಾಭಿಪ್ರಾಯವಿದೆ. ಮಿಲಿಂದ್ ಈ ಮೊದಲು ಆರ್‌ಎಸ್‌ಎಸ್ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ವಾಸ್ತವವಾಗಿ ಅಮೆರಿಕದಲ್ಲಿ ದಲಿತರು ಹಾಗೂ ಶೋಷಿತರ ಪರವಾಗಿ ಹೋರಾಟ ನಡೆಸಲಿಲ್ಲ. ತಾವು ಮುಂಚೂಣಿ ನಾಯಕರಾಗಲು ದಲಿತ ಹೆಸರನ್ನು ಬಳಸಿಕೊಳ್ಳುತ್ತಿದ್ದರು. ಇವರಿಂದ ದಲಿತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದಲಿತ ನಾಯಕರು ವಿರೋಧ ವ್ಯಕ್ತಪಡಿಸುತ್ತಾರೆ.