ಕತಾರ್ ರಾಜಧಾನಿ ದೋಹಾದಲ್ಲಿ ಗಾಜಾ ಕದನ ವಿರಾಮ ಪ್ರಸ್ತಾಪದ ಬಗ್ಗೆ ಚರ್ಚಿಸುತ್ತಿದ್ದ ಹಮಾಸ್ ನಾಯಕರ ಅನೇಕ ವಸತಿ ಕಟ್ಟಡಗಳ ಮೇಲೆ ಇಸ್ರೇಲ್ ಮಂಗಳವಾರ ರಾತ್ರಿ ವಾಯು ದಾಳಿ ನಡೆಸಿರುವುದಾಗಿ ವರದಿಯಾಗಿದೆ.
3.30ರ ಸುಮಾರಿಗೆ ಲಗ್ತೈಫಿಯಾ ಪ್ರದೇಶದ ವಸತಿ ಪ್ರದೇಶದಲ್ಲಿ ಸರಣಿ ಸ್ಪೋಟಗಳು ಸಂಭವಿಸಿದ್ದು, ದೊಡ್ಡ ಪ್ರಮಾಣದ ಹೊಗೆಯೊಂದಿಗೆ ಸ್ಫೋಟ ಕಾಣಿಸಿಕೊಂಡಿದೆ. ದಾಳಿಯಲ್ಲಿ ಹಮಾಸ್ ಮುಖ್ಯಸ್ಥ ಖಲೀಲ್ ಅಲ್ ಹಯ್ಯ ಅವರ ಮಗ ಹಮೀಮ್ ಅಲ್ ಹಯ್ಯ ಮತ್ತು ಕಚೇರಿ ನಿರ್ದೇಶಕ ಜಿಹಾದ್ ಲಬಾದ್ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ಟಿನಿಯನ್ ಮಾಧ್ಯಮ ವರದಿ ಮಾಡಿದೆ.
ಈ ದಾಳಿಯನ್ನು ಇಸ್ರೇಲ್ ಮಿಲಿಟರಿ ಪಡೆ IDF ಖಚಿತಪಡಿಸಿದೆ. ಹಮಾಸ್ ಉಗ್ರ ಸಂಘಟನೆಯ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು IDF ಮತ್ತು ISA (ಭದ್ರತಾ ಏಜೆನ್ಸಿ) ಈ ದಾಳಿ ನಡೆಸಿರುವುದಾಗಿ ಹೇಳಿದೆ. ಈ ದಾಳಿ ದೋಹಾದಲ್ಲಿ ನಡೆದಿದೆಯೇ ಅಥವಾ ಬೇರೆಲ್ಲಿಯಾದರೂ ನಡೆದಿದೆಯೇ ಎಂಬುದನ್ನು IDF ಸ್ಪಷ್ಟಪಡಿಸಿಲ್ಲ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಪ್ರಸ್ತಾಪವನ್ನು ಒಪ್ಪಿಕೊಳ್ಳಲು ಇದು ಕೊನೆಯ ಅವಕಾಶ ಎಂದು ಹಮಾಸ್ಗೆ ಎಚ್ಚರಿಕೆ ನೀಡಿದ್ದರು. ಆ ಬೆನ್ನಲ್ಲೇ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ವಾಯು ದಾಳಿ ಮಾಡಲಾಗಿದೆ.
ಕತಾರ್ನಲ್ಲಿ ಹಮಾಸ್ ಮೇಲಿನ ದಾಳಿಯ ಬಗ್ಗೆ ಅಮೆರಿಕಕ್ಕೆ ಮುಂಚಿತವಾಗಿ ತಿಳಿಸಲಾಗಿತ್ತು ಮತ್ತು ಈ ಕ್ರಮಕ್ಕೆ ವಾಷಿಂಗ್ಟನ್ನಿಂದ ಸಂಪೂರ್ಣ ಬೆಂಬಲ ದೊರೆತಿದೆ ಎಂದು ಇಸ್ರೇಲಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಮತ್ತೊಂದೆಡೆ, ಕತಾರ್ ಈ ದಾಳಿಯನ್ನು ಎಲ್ಲ ಅಂತರರಾಷ್ಟ್ರೀಯ ಕಾನೂನುಗಳ ಸಂಪೂರ್ಣ ಉಲ್ಲಂಘನೆ ಎಂದು ಬಣ್ಣಿಸಿದೆ.
ಈ ದಾಳಿಯು ತನ್ನ ಸಾರ್ವಭೌಮತ್ವ ಮತ್ತು ಭದ್ರತೆಗೆ ನೇರ ಬೆದರಿಕೆ ಮಾತ್ರವಲ್ಲದೆ, ದೋಹಾದಲ್ಲಿ ವಾಸಿಸುವ ಕತಾರಿಗಳು ಮತ್ತು ವಿದೇಶಿ ನಾಗರಿಕರ ಜೀವಗಳಿಗೆ ಗಂಭೀರ ಅಪಾಯವಾಗಿದೆ ಎಂದು ಕತಾರ್ನ ವಿದೇಶಾಂಗ ಸಚಿವಾಲಯ ಹೇಳಿದೆ.