ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧದ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ ಬೆನ್ನಲ್ಲೇ, ಇರಾನ್ ತನ್ನ ರಾಜಧಾನಿ ತೆಹರಾನ್‌ನಲ್ಲಿ ಬೃಹತ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರದರ್ಶನ ನಡೆಸುವ ಮೂಲಕ ಅಮೆರಿಕಕ್ಕೆ ತನ್ನ ಸೇನಾ ಸನ್ನದ್ಧತೆಯ ತೀಕ್ಷ್ಣ ಸಂದೇಶ ರವಾನಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಂಗಳವಾರ ತಡರಾತ್ರಿ ತೆಹರಾನ್‌ನಲ್ಲಿ ನಡೆದ ರ‍್ಯಾಲಿಗಳಲ್ಲಿ ಇರಾನ್ ತನ್ನ ಅತ್ಯಾಧುನಿಕ ‘ಖೊರ್ರಮ್‌ಶಹರ್-4’ ಮತ್ತು ‘ಫತೇಹ್-110’ ಬ್ಯಾಲಿಸ್ಟಿಕ್ ಕ್ಷಿಪಣಿ ಲಾಂಚರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತು. ಈ ಕ್ಷಿಪಣಿಗಳು ಇಸ್ರೇಲ್ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ಕ್ಲಸ್ಟರ್ ಬಾಂಬ್‌ಗಳನ್ನು ಹೊತ್ತೊಯ್ಯಬಲ್ಲವು ಎಂದು ವರದಿಯಾಗಿದೆ. ಅಮೆರಿಕದೊಂದಿಗಿನ ಮಾತುಕತೆಗಳು ಅನಿಶ್ಚಿತವಾಗಿರುವ ಹೊತ್ತಲ್ಲೇ ಈ ಶಕ್ತಿ ಪ್ರದರ್ಶನ ನಡೆದಿದೆ.
ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ನೌಕಾ ದಿಗ್ಬಂಧನ ಮುಂದುವರಿದಿದೆ. “ಇರಾನ್ ತನ್ನ ಆರ್ಥಿಕ ಮಾರ್ಗಗಳನ್ನು ಕಳೆದುಕೊಳ್ಳುತ್ತಿದೆ, ಅವರು ಶಾಂತಿ ಒಪ್ಪಂದಕ್ಕೆ ಬರುವವರೆಗೂ ಈ ದಿಗ್ಬಂಧನ ತೆರವುಗೊಳಿಸುವುದಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ. ಇರಾನ್‌ನ ಶೇ 90ರಷ್ಟು ತೈಲ ರಫ್ತಾಗುವ ‘ಖಾರ್ಗ್ ದ್ವೀಪ’ದ ಸಂಗ್ರಹಾಗಾರಗಳು ಭರ್ತಿಯಾಗುತ್ತಿದ್ದು, ತೈಲ ಬಾವಿಗಳನ್ನು ಮುಚ್ಚುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಅಮೆರಿಕದ ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.
ಇದನ್ನು ಓದಿದ್ದೀರಾ? ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ
ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ ಅವರು ಮಧ್ಯಸ್ಥಿಕೆ ವಹಿಸಿ ಇಸ್ಲಾಮಾಬಾದ್‌ನಲ್ಲಿ ಶಾಂತಿ ಸಭೆ ನಡೆಸಲು ಮುಂದಾಗಿದ್ದರು. ಇದಕ್ಕೆ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪಾಲ್ಗೊಳ್ಳಬೇಕಿತ್ತು. ಆದರೆ, ಕದನ ವಿರಾಮ ವಿಸ್ತರಣೆಯ ನಿರ್ಧಾರದಿಂದಾಗಿ ವ್ಯಾನ್ಸ್ ಅವರ ಪಾಕಿಸ್ತಾನ ಭೇಟಿಯನ್ನು ಶ್ವೇತಭವನ ಸದ್ಯಕ್ಕೆ ರದ್ದುಗೊಳಿಸಿದೆ. ಇರಾನ್ ಈ ಸಭೆಯನ್ನು ಬಹಿಷ್ಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬಿಕ್ಕಟ್ಟಿನ ನಡುವೆಯೂ ಯುಎಇ ತನ್ನ ಆರ್ಥಿಕತೆ ಸದೃಢವಾಗಿದೆ ಎಂದು ಹೇಳಿಕೊಂಡಿದೆ. ತನ್ನ ಬಳಿ 2 ಟ್ರಿಲಿಯನ್ ಡಾಲರ್(187.16 ಲಕ್ಷ ಕೋಟಿ ರೂಪಾಯಿ) ಹೂಡಿಕೆ ಆಸ್ತಿ ಮತ್ತು 300 ಬಿಲಿಯನ್ ಡಾಲರ್(28.07 ಲಕ್ಷ ಕೋಟಿ ರೂಪಾಯಿ) ವಿದೇಶಿ ವಿನಿಮಯ ಸಂಗ್ರಹವಿದೆ ಎಂದು ತಿಳಿಸುವ ಮೂಲಕ, ಯುದ್ಧದ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಸಂಕಷ್ಟ ಎದುರಿಸಲು ಸಿದ್ಧವಿರುವುದಾಗಿ ಘೋಷಿಸಿದೆ.





