ಪ್ಯಾಲಿಸ್ಟೇನ್‌ನ ದಕ್ಷಿಣ ಗಾಜಾದ ರಫಾ ಪಟ್ಟಣದ ಮೇಲೆ ಇಸ್ರೇಲ್ ಸೇನೆ ಕಳೆದ ಭಾನುವಾರ ವಾಯುದಾಳಿ ನಡೆಸಿದ ಪರಿಣಾಮ 45 ಮಂದಿ ಅಮಾಯಕರು ಮೃತಪಟ್ಟಿದ್ದರು. ಈ ಘಟನೆಯ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯ ರಫಾದ ಮೇಲೆ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಆದೇಶಿಸಿತ್ತು. ವಿಶ್ವದ ಹಲವು ರಾಷ್ಟ್ರಗಳು ಇಸ್ರೇಲ್‌ನ ಹೀನ ಕೃತ್ಯವನ್ನು ಖಂಡಿಸಿದ್ದವು.
ಈ ದುರಂತಕ್ಕೆ ವಿಶ್ವದಾದ್ಯಂತ ಲಕ್ಷಾಂತರ ಮಂದಿ ‘’ಆಲ್ ಐಯ್ಸ್ ಆನ್ ರಫಾ(ಎಲ್ಲರ ಕಣ್ಣು ರಫಾದ ಮೇಲೆ)’ ಅಡಿಬರಹ ನೀಡಿ ಸಂತಾಪ ಸೂಚಿಸಿದ್ದರು. ಬಹುತೇಕರು ತಮ್ಮ ಫೇಸ್‌ಬುಕ್, ವಾಟ್ಸಾಪ್ ಮುಂತಾದ ಖಾತೆಯಲ್ಲಿ ಸ್ಟೇಟಸ್ ಕೂಡ ಹಾಕಿಕೊಂಡಿದ್ದರು.
ಈ ನಡುವೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದಾ ಕೂಡ ತಮ್ಮ ಇನ್‌ಸ್ಟಾ ಖಾತೆಯಲ್ಲಿ ‘ಆಲ್ ಐಯ್ಸ್ ಆನ್ ರಫಾ’ ಎಂಬ ಭಾವಚಿತ್ರವುಳ್ಳ ಅಡಿಬರಹವನ್ನು ಹಾಕಿಕೊಂಡಿದ್ದರು. ಆದರೆ ಕೆಲವು ಬಲಪಂಥೀಯ ಟ್ರೋಲರ್‌ಗಳು ರಿತಿಕಾ ಸ್ಟೇಟಸ್‌ಗೆ ವಿರೋಧ ವ್ಯಕ್ತಪಡಿಸಿದ ನಂತರ ತಮ್ಮ ಸ್ಟೇಟಸ್‌ಅನ್ನು ಅಳಿಸಿಹಾಕಿದ್ದರು.
ರಿತಿಕಾ ರಫಾ ಸ್ಟೇಟಸ್‌ಅನ್ನು ಅಳಿಸಿಹಾಕಿದ ಕ್ರಮದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತವಾಗಿದೆ. ನೀವು ಈ ರೀತಿ ನಾಟಕವಾಡುವ ಬದಲು ಸ್ಟೇಟಸ್‌ಅನ್ನು ಹಾಕಿಕೊಳ್ಳದೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವರು ಕುಟುಕಿದರೆ, ಇನ್ನೂ ಹಲವರು ಇಸ್ರೇಲ್‌ನಿಂದ ಹಲವು ದಶಕಗಳ ಕಾಲ ಪ್ಯಾಲಿಸ್ಟೀನ್ ಜನತೆ ಅನುಭವಿಸಿರುವ ಸಂಕಷ್ಟ ನಿಮಗೇನು ಗೊತ್ತು ಎಂದು ಪ್ರಶ್ನಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಪ್ಯಾಲಿಸ್ಟೀನ್‌ಗೆ ಅಧಿಕೃತ ದೇಶದ ಸ್ಥಾನಮಾನ ನೀಡಿದ ಐರ್ಲೆಂಡ್
ರಫಾ ಮೇಲೆ ನಡೆದ ದಾಳಿಗೆ ಸಂತಾಪ ವ್ಯಕ್ತಪಡಿಸಿ ಬಾಲಿವುಡ್‌ನ ಸೆಲಬ್ರಿಟಿಗಳಾದ ಕರೀನಾ ಕಪೂರ್, ಅಲಿಯಾ ಭಟ್, ವರುಣ್ ಧವನ್, ತೃಪ್ತಿ ದಿಮ್ರಿ, ಸಮಂತ ರುತು ಪ್ರಭು, ಸ್ವಾರಾ ಭಾಸ್ಕರ್, ದಿಯಾ ಮಿರ್ಜಾ ಸೇರಿದಂತೆ ಹಲವು ನಟನಟಿಯರು ಬೆಂಬಲ ವ್ಯಕ್ತಪಡಿಸಿದ್ದರು.
ಕಳೆದ ಭಾನುವಾರ (ಮೇ 26)ದಂದು ಪ್ಯಾಲಿಸ್ಟೀನ್‌ನ ರಫಾದ ಮೇಲೆ ಇಸ್ರೇಲ್ ಸೇನೆ ವಾಯು ದಾಳಿ ನಡೆಸಿದ ಪರಿಣಾಮ 45 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ನವದೆಹಲಿಯಲ್ಲಿ ಇರಾನ್ ರಾಯಭಾರಿ ಕಚೇರಿ ಕೂಡ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ‘’ಆಲ್ ಐಯ್ಸ್ ಆನ್ ರಫಾ(ಎಲ್ಲರ ಕಣ್ಣು ರಫಾದ ಮೇಲೆ)”ಎಂಬ ಅಡಿಬರಹದೊಂದಿಗೆ ಇಸ್ರೇಲ್ ಕೃತ್ಯವನ್ನು ಖಂಡಿಸಿತ್ತು. ಇಸ್ರೇಲ್‌ನ ಮಾರಣಹೋಮದಿಂದ ರಫಾ ಹಾಗೂ ಗಾಜಾದಲ್ಲಿ ಸಾವಿರಾರು ಅಮಾಯಕರು ಮೃತಪಟ್ಟಿರುವುದಲ್ಲದೆ 15 ಲಕ್ಷ ಪ್ಯಾಲಿಸ್ಟೀನ್ ನಾಗರಿಕರು ವಸತಿ ಕಳೆದುಕೊಂಡು ನಿರಾಶ್ರಿತ ಶಿಬಿರದಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಅಡಿಬರಹದೊಂದಿಗೆ ವಿವರಿಸಲಾಗಿತ್ತು.
