ರಷ್ಯಾದ ದಕ್ಷಿಣ ರಾಜ್ಯವಾದ ಡಾಗೆಸ್ತಾನ್‌ನಲ್ಲಿ ಭಾನುವಾರ ಶಸ್ತ್ರಸಜ್ಜಿತ ಉಗ್ರಗಾಮಿಗಳ ದಾಳಿಯಿಂದಾಗಿ 15ಕ್ಕೂ ಹೆಚ್ಚು ಪೊಲೀಸರು ಮತ್ತು ಪಾದ್ರಿ ಸೇರಿದಂತೆ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೋಮವಾರ ಮುಂಜಾನೆ ಡಾಗೆಸ್ತಾನ್‌ನ ಗವರ್ನರ್ ಸೆರ್ಗೆಯ್ ಮೆಲಿಕೋವ್ ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ್ದಾರೆ.
ಬಂದೂಕುಧಾರಿಗಳು ಎರಡು ನಗರಗಳಲ್ಲಿ ಎರಡು ಆರ್ಥೊಡಾಕ್ಸ್ ಚರ್ಚ್‌ಗಳು, ಸಿನಗಾಗ್ ಮತ್ತು ಪೊಲೀಸ್ ಪೋಸ್ಟ್ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಸೋಮವಾರ, ಮಂಗಳವಾರ ಮತ್ತು ಬುಧವಾರ ಈ ಪ್ರದೇಶದಲ್ಲಿ ಶೋಕಾಚರಣೆಯನ್ನು ಘೋಷಿಸಲಾಗಿದೆ.
ಕ್ಯಾಸ್ಪಿಯನ್ ಸಮುದ್ರದಲ್ಲಿರುವ ಡರ್ಬೆಂಟ್ ನಗರದ ಸಿನಗಾಗ್ ಮತ್ತು ಚರ್ಚ್‌ನಲ್ಲಿ ಶಸ್ತ್ರಸಜ್ಜಿತ ಗುಂಪು ಗುಂಡಿನ ದಾಳಿ ನಡೆಸಿದೆ ಎಂದು ಡಾಗೆಸ್ತಾನ್ ಆಂತರಿಕ ಸಚಿವಾಲಯ ತಿಳಿಸಿದೆ.
ಇದನ್ನು ಓದಿದ್ದೀರಾ? ರಷ್ಯಾ-ಉಕ್ರೇನ್ ಯುದ್ಧ ನಿಲ್ಲಿಸಿದ್ದೆ ಎಂದಿದ್ದ ಮೋದಿಗೆ ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲಾಗುತ್ತಿಲ್ಲ: ರಾಹುಲ್ ಗಾಂಧಿ
ಇದಾದ ಬೆನ್ನಲ್ಲೇ ಈ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಘೋಷಿಸಿದ್ದು, ಐವರು ಬಂದೂಕುಧಾರಿಗಳನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಹೇಳಿದೆ. ಇನ್ನು ಈ ದಾಳಿಯಲ್ಲಿ ಎಷ್ಟು ಉಗ್ರಗಾಮಿಗಳು ಭಾಗಿಯಾಗಿದ್ದಾರೆ ಎಂಬುವುದು ಇನ್ನೂ ಸ್ಪಷ್ಟವಾಗಿಲ್ಲ.
ಈ ಗುಂಡಿನ ದಾಳಿಯ ಹೊಣೆಗಾರಿಕೆಯನ್ನು ಸದ್ಯ ಯಾವುದೇ ಸಂಘಟನೆಗಳು ತೆಗೆದುಕೊಂಡಿಲ್ಲ. ಆದರೆ ಈ ಕೃತ್ಯದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರ ತಂದೆ ಡಾಗೆಸ್ತಾನಿ ಅಧಿಕಾರಿಯಾಗಿದ್ದು ಅವರನ್ನು ಬಂಧಿಸಲಾಗಿದೆ ಎಂದು ರಷ್ಯಾದ ಮಾಧ್ಯಮಗಳು ವರದಿ ಮಾಡಿದೆ.