ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ವೊಂದು ಅಪಘಾತಕ್ಕೀಡಾಗಿದ್ದು, 12 ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಬುಧವಾರ ನಡೆದಿದೆ.
ಶಾಲಾ ಮಿನಿಬಸ್ ಮತ್ತೊಂದು ವಾಹನಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ. ಕೂಡಲೇ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ 12 ಮಕ್ಕಳು ಹಾಗೂ ಮಿನಿಬಸ್‌ನ ಚಾಲಕ ಕೂಡ ಸಾವನ್ನಪ್ಪಿದ್ದಾರೆ. ಇತರ ಏಳು ಮಕ್ಕಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸರ್ಕಾರ ಹೇಳಿದೆ.
“ದುರಂತ ಘಟನೆಯಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ನಮ್ಮ ಮಕ್ಕಳ ಸಾವು ಆಘಾತವನ್ನುಂಟುಮಾಡಿದೆ. ಮೃತ ಮತ್ತು ಗಾಯಗೊಂಡ ಮಕ್ಕಳ ಕುಟುಂಬಗಳ ದುಃಖದಲ್ಲಿ ನಾವು ಜೊತೆಗಿದ್ದೇವೆ” ಎಂದು ಗೌಟೆಂಗ್ ಶಿಕ್ಷಣ ಸಚಿವ ಮ್ಯಾಟೊಮ್ ಚಿಲೋನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾವು ಅತ್ಯಂತ ಅಭಿವೃದ್ಧಿ ಹೊಂದಿದ ರಸ್ತೆ ಜಾಲಗಳನ್ನುಹೊಂದಿದೆ. ಅದಾಗ್ಯೂ, ರಸ್ತೆ ಸುರಕ್ಷತೆಯ ವಿಚಾರದಲ್ಲಿ ಕೆಟ್ಟ ದಾಖಲೆಗಳನ್ನು ಹೊಂದಿದೆ.