ಗೌತಮ್ ಗಂಭೀರ್: ಖ್ಯಾತಿಗಿಂತ ಹೆಚ್ಚು ವಿವಾದಗಳನ್ನೇ ಉಸಿರಾಡಿದ ಕ್ರಿಕೆಟಿಗನಿಗೆ ಹೊಣೆಗಾರಿಕೆಯ ಹುದ್ದೆ

Date:

ಕಪಿಲ್‌ ದೇವ್‌, ಅಜಿತ್‌ ವಾಡೇಕರ್, ಪಿ ಆರ್‌ ಮಾನ್‌ಸಿಂಗ್‌, ಗ್ಯಾರಿ ಕ್ರಿಸ್ಟನ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ ಅವರಂಥ ದಿಗ್ಗಜರು ನಿರ್ವಹಿಸಿದ ಬಹುಮುಖ್ಯವಾದ ಹುದ್ದೆ ಗಂಭೀರ್‌ಗೆ ದೊರೆತಿದೆ. ಇದು ಅತ್ಯಂತ ಜವಾಬ್ದಾರಿಯುತವಾದ ಹುದ್ದೆ. ಈ ಹಿನ್ನೆಲೆಯಲ್ಲಿ ದೇಶದ ಕ್ರಿಕೆಟ್ ಏಳಿಗೆಯ ದೃಷ್ಟಿಯಿಂದ ಗಂಭೀರ್‌ ತನ್ನೆಲ್ಲ ಕೀಳರಿಮೆಗಳನ್ನು ಬಿಟ್ಟು ತಂಡವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಹೊಣೆಗಾರಿಕೆಯಿದೆ. ತಳಮಟ್ಟದಿಂದ ಬಂದ, ಉತ್ತಮವಾಗಿ ಆಡುವ ದೇಸೀ ಪ್ರತಿಭೆಗಳಿಗೆ ಅವಕಾಶ ನೀಡಿ ದೊಡ್ಡತನವನ್ನು ಮೆರೆಯಬೇಕಿದೆ.  
 ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನಕ್ಕೆ ರಾಹುಲ್‌ ದ್ರಾವಿಡ್‌ ನಂತರ ಮತ್ಯಾರು ಎಂಬ ಪ್ರಶ್ನೆಗೆ ಬಿಸಿಸಿಐ ಕೊನೆಗೂ ಉತ್ತರ ಪ್ರಕಟಿಸಿದೆ. ನಿರೀಕ್ಷೆಯಂತೆ ಮಾಜಿ ಕ್ರಿಕೆಟಿಗ, ಐಪಿಎಲ್‌ನಲ್ಲಿ ಕೆಕೆಆರ್‌ನ ಮೆಂಟರ್‌ ಆಗಿದ್ದ ಗೌತಮ್‌ ಗಂಭೀರ್‌ ಅವರನ್ನು ಮೂರು ವರ್ಷಗಳವರೆಗೆ ನೇಮಕ ಮಾಡಲಾಗಿದೆ. ಕೇವಲ 42ರ ಅತಿ ಕಿರಿಯ ವಯಸ್ಸಿನಲ್ಲಿಯೇ ಜವಾಬ್ದಾರಿಯುತವಾದ ಉನ್ನತ ಸ್ಥಾನ ಅಲಂಕರಿಸಿದ್ದಾರೆ.

ದೆಹಲಿಯ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ 14ನೇ ಅಕ್ಟೋಬರ್, 1981 ರಂದು ಜನಿಸಿದ ಗೌತಮ್‌ ಗಂಭೀರ್‌ಗೆ ದೊಡ್ಡಮಟ್ಟದ ಹಿನ್ನೆಲೆಯೇನು ಇರಲಿಲ್ಲ. ಹುಟ್ಟಿದ ಮನೆಯಲ್ಲಿ ಬಡತನವಿದ್ದ ಕಾರಣದಿಂದಲೋ ಏನೋ ತನ್ನ ಸೋದರ ಮಾವನ ಮನೆಯಲ್ಲಿ ಬೆಳೆದ ಗಂಭೀರ್ ಅಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿ ಕ್ರಿಕೆಟ್‌ ಬದುಕನ್ನು ಕಟ್ಟಿಕೊಂಡರು. ನನ್ನ ಸೋದರ ಮಾವ ನನ್ನ ವೃತ್ತಿಬದುಕಿನ ಬೆಳವಣಿಗೆಯ ಮೊದಲ ಮಾರ್ಗದರ್ಶಕ ಎಂದು ಗೌತಮ್‌ ಈಗಲೂ ಹೇಳುತ್ತಾರೆ.

2007, 2011 ವಿಶ್ವಕಪ್‌ ಗೆದ್ದ ಟೀಂ ಇಂಡಿಯಾ ಆಟಗಾರ

ಶಿಫಾರಸ್ಸು, ಶ್ರೀಮಂತಿಕೆ ಯಾವುದು ಇರದಿದ್ದ ಗಂಭೀರ್‌ ಕ್ರಿಕೆಟ್‌ನಲ್ಲಿ ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ವಿಜೃಂಭಿಸಲು ಪ್ರತಿಭೆಯೆಂಬ ಮಾನದಂಡ ಮಾತ್ರ ಕಾರಣವಾಯಿತು. 2003ರಲ್ಲಿ ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾದ ಎಡಗೈ ಆಟಗಾರ ಗಂಭೀರ್ ಆರಂಭಿಕನಾಗಿ 2016ರವರೆಗಿನ ಕ್ರಿಕೆಟ್ ಪಯಣದಲ್ಲಿ 58 ಟೆಸ್ಟ್‌ಗಳಲ್ಲಿ 4,154 ರನ್‌, 147 ಪಂದ್ಯಗಳಲ್ಲಿ 5,238 ಹಾಗೂ 37 ಟಿ20 ಪಂದ್ಯಗಳಲ್ಲಿ 932 ರನ್‌ಗಳನ್ನು ಪೇರಿಸಿ ಹಲವು ಪಂದ್ಯಗಳಲ್ಲಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

2011ರಲ್ಲಿ ಭಾರತ ಎರಡನೇ ಬಾರಿ ಏಕದಿನ ವಿಶ್ವಕಪ್‌ ಜಯಿಸಿದ ತಂಡದ ಸದಸ್ಯರಾಗಿ ಟೂರ್ನಿಯಲ್ಲಿ 393 ರನ್‌ ಗಳಿಸಿದ್ದರು. ಅಲ್ಲದೆ ಫೈನಲ್‌ ಪಂದ್ಯದಲ್ಲಿ ಗಂಭೀರ್‌ ಗಳಿಸಿದ 97 ರನ್‌ ತಂಡ ಕಪ್‌ ಗೆಲ್ಲಲು ಪ್ರಮುಖ ಕಾರಣವಾಗಿತ್ತು. 2007ರಲ್ಲಿ ಮೊದಲ ಬಾರಿಗೆ ಭಾರತ ಟಿ20 ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿಯಲು ಗಂಭೀರ್‌ ಅತ್ಯಮೂಲ್ಯ ಕೊಡುಗೆ ನೀಡಿದ್ದರು. 7 ಪಂದ್ಯಗಳಲ್ಲಿ ಮೂರು ಅರ್ಧ ಶತಕಗಳೊಂದಿಗೆ ಟೂರ್ನಿಯಲ್ಲಿ ಎರಡನೇ ಅತ್ಯಧಿಕ ಸ್ಕೋರರ್‌ ಆಗಿ 227 ರನ್‌ ಗಳಿಸಿದ್ದರು.

ಇದಲ್ಲದೆ 2008ರ ಸಾಲಿನಲ್ಲಿ ಅತಿ ಹೆಚ್ಚು ಏಕದಿನ ರನ್‌, ಅತಿ ಹೆಚ್ಚು ಶತಕ ಹಾಗೂ 2009ರ ಸಾಲಿನಲ್ಲಿ ಅತಿಹೆಚ್ಚು ಟೆಸ್ಟ್ ಶತಕಗಳನ್ನು ಬಾರಿಸಿದ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದರು. 41 ವರ್ಷಗಳ ನಂತರ ಭಾರತ ತಂಡ ನ್ಯೂಜಿಲೆಂಡ್‌ ದೇಶದಲ್ಲಿ ಸರಣಿ ಗೆಲುವು ಸಾಧಿಸಲು ಮಹತ್ತರ ಪಾತ್ರ ವಹಿಸಿದ್ದರು. ಅಲ್ಲದೆ 2008ರಲ್ಲಿ ಬಾರ್ಡರ್ – ಗವಾಸ್ಕರ್ ಸರಣಿಯ 5 ಟೆಸ್ಟ್‌ಗಳಲ್ಲಿ ಸತತ ಐದು ಶತಕಗಳೊಂದಿಗೆ ಅತಿ ಹೆಚ್ಚು ರನ್‌ ಗಳಿಸಿದ ಕೀರ್ತಿ ಗಂಭೀರ್ ಅವರದು. ಜಿಂಬಾಬ್ವೆ ವಿರುದ್ಧ 2003ರಲ್ಲಿ ನಡೆದ ಟೆಸ್ಟ್‌ ಸರಣಿಯಲ್ಲಿ ಸತತ ಎರಡು ಶತಕ ಗಳಿಸಿದ್ದು ಗೌತಿಯ ಮತ್ತೊಂದು ಮೈಲಿಗಲ್ಲು.

ಈ ಸುದ್ದಿ ಓದಿದ್ದೀರಾ? ಇಂಡಿಯನ್ ಕ್ರಿಕೆಟ್ ಟೀಮ್‌ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ

ಟೀಂ ಇಂಡಿಯಾದಿಂದ ನಿವೃತ್ತಿ ಪಡೆದ ನಂತರ ಐಪಿಎಲ್‌ನಲ್ಲಿ 2011ರಿಂದ 2017ರವರೆಗೂ ನಾಯಕನಾಗಿ ಕೋಲ್ಕತ್ತಾ ನೈಟ್ ರೈಡರ್‌ ಸಾರಥ್ಯ ವಹಿಸಿದ್ದ ಗಂಭೀರ್ 2012 ಹಾಗೂ 2014ರಲ್ಲಿ ತಂಡ ಟ್ರೋಫಿ ಗೆಲ್ಲಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಕೆಕೆಆರ್‌ ತಂಡದ ಮೆಂಟರ್‌ ಆಗಿ ತಂಡ ಮೂರನೇ ಬಾರಿ ಕಪ್‌ ಜಯಿಸಲು ಮಾರ್ಗದರ್ಶನ ನೀಡಿದ್ದಾರೆ.

ರಾಜಕೀಯಕ್ಕೆ ಪಾದಾರ್ಪಣೆ

ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ಕೀರ್ತಿ ಆಜಾದ್‌, ನವಜೋತ್‌ ಸಿಂಗ್‌ ಸಿಧು ಅವರಂತೆ ಗೌತಮ್‌ ಗಂಭೀರ್‌ ಕೂಡ ಚುನಾವಣಾ ರಾಜಕೀಯಕ್ಕೆ ಕಾಲಿಟ್ಟು ಜಯವನ್ನು ಕಂಡಿದ್ದರು. ಬಲಪಂಥೀಯ ಹಿನ್ನೆಲೆಯುಳ್ಳ ಗಂಭೀರ್‌ಗೆ ಬಿಜೆಪಿ 2019ರಲ್ಲಿ ದೆಹಲಿ ಪೂರ್ವ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿತ್ತು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಸಂಸತ್‌ ಸದಸ್ಯರಾದರೂ ತನ್ನ ಕ್ಷೇತ್ರದತ್ತ ಹೆಚ್ಚು ಕಾಲಿಡದೆ ಕ್ರಿಕೆಟ್‌ ಚಟುವಟಿಕೆಗಳತ್ತ ಹೆಚ್ಚು ಗಮನಹರಿಸಿದ ಕಾರಣ 2024ರ ಚುನಾವಣೆಯಲ್ಲಿ ಟಿಕೆಟ್ ನಿರಾಕರಣೆಯ ಸುಳಿವು ತಿಳಿದು, ಚುನಾವಣೆಗೂ ಮುಂಚೆಯೇ ರಾಜಕೀಯಕ್ಕೆ ಗುಡ್‌ಬೈ ಹೇಳಿದ್ದರು.

ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವ ಗೌತಮ್‌ ಗಂಭೀರ್‌ ಆಟಕ್ಕಿಂತ ಹೆಚ್ಚಾಗಿ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಅನಗತ್ಯ ಸುದ್ದಿಗೆ ಗ್ರಾಸವಾಗಿದ್ದಾರೆ. ತನ್ನ ಮುಂಗೋಪ, ಎದುರಾಳಿ ಹಾಗೂ ತಂಡದ ಸಹ ಆಟಗಾರರ ದೂಷಣೆ, ನೆರೆಯ ರಾಷ್ಟ್ರಗಳನ್ನು ಕೀಳಾಗಿ ಕಾಣುವುದು ಸೇರಿದಂತೆ ಹಲವು ವಿವಾದಗಳಲ್ಲಿ ಭಾಗಿಯಾಗಿದ್ದಾರೆ.

ಪಾಕಿಸ್ತಾನದ ಜೊತೆ ಸದಾ ವಿವಾದ

ಗೌತಮ್‌ ಗಂಭೀರ್ ಟೀಂ ಇಂಡಿಯಾ ಪರ ಆಡುತ್ತಿರುವಾಗಲೂ ಹಾಗೂ ನಿವೃತ್ತಿ ಪಡೆದ ನಂತರವೂ ಪಾಕಿಸ್ತಾನ ಹಾಗೂ ಪಾಕಿಸ್ತಾನ ತಂಡದ ಆಟಗಾರರ ಜೊತೆ ಸದಾ ಜಗಳವಾಡುತ್ತಲೇ ಇದ್ದಾರೆ.

2007ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿತ್ತು. ಈ ಸರಣಿಯ ಪಂದ್ಯವೊಂದರಲ್ಲಿ ಪಾಕ್‌ ಆಟಗಾರ ಶಾಹೀದ್ ಅಫ್ರಿದಿ ಎಸೆತದಲ್ಲಿ ಗಂಭೀರ್ ರನ್ ಗಳಿಸಿದ್ದರು. ಈ ವೇಳೆ ಗಂಭೀರ್, ಅಫ್ರಿದಿ ಅವರನ್ನು ಗುದ್ದುವ ಮೂಲಕ ಜಗಳಕ್ಕಿಳಿದಿದ್ದರು. ಈ ವಾಕ್ಸಮರದಲ್ಲಿ ಇಬ್ಬರೂ ಅಸಭ್ಯ ಪದಗಳನ್ನು ಬಳಸಿದ್ದರು. ಇದಾದ ಬಳಿಕ ಗಂಭೀರ್ ಹಾಗೂ ಅಫ್ರಿದಿ ನಡುವೆ ವೈಮನಸ್ಸು ಮುಂದುವರೆದಿತ್ತು. ಅದು ನಿವೃತ್ತಿಯಾದ ಬಳಿಕ ಕೂಡ ಮುಂದುವರೆಯಿತು. ಅನೇಕ ಬಾರಿ ಗಂಭೀರ್ ಸಾಮಾಜಿಕ ಮಧ್ಯಮದ ಮೂಲಕ ಶಾಹೀದ್‌ ಅಫ್ರಿದಿ ವಿರುದ್ಧ ಕೆಟ್ಟ ಪದ ಪ್ರಯೋಗದ ಮೂಲಕ ವಾಗ್ದಾಳಿ ಮುಂದುವರಿಸಿದ್ದರು. ಒಂದೊಮ್ಮೆ ಗಂಭೀರ್‌ಗೆ ಮಾಧ್ಯಮಗಳ ಮೂಲಕ ತಿರುಗೇಟು ನೀಡಿದ್ದ ಅಫ್ರಿದಿ, ಗೌತಮ್ ಗಂಭೀರ್ ಭಾರತ ತಂಡದಲ್ಲೇ ಯಾರೂ ಇಷ್ಟಪಡದ ವ್ಯಕ್ತಿ ಎಂದು ಹೀಯಾಳಿಸಿದ್ದರು.

ಶ್ರೀಲಂಕಾ ವಿರುದ್ಧ ಪಾಕ್‌ ಸೋತಿದ್ದಕ್ಕೆ ಸಂಭ್ರಮ

2022ರ ಸೆಪ್ಟೆಂಬರ್‌ನಲ್ಲಿ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಜಯಗಳಿಸಿತ್ತು. ಈ ಗೆಲುವಿನೊಂದಿಗೆ ಲಂಕಾ ತಂಡವು ಏಷ್ಯನ್ ಕ್ರಿಕೆಟ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಶ್ರೀಲಂಕಾದ ಈ ಗೆಲುವನ್ನು ಗೌತಮ್ ಗಂಭೀರ್ ಕೂಡ ಸಂಭ್ರಮಿಸಿದ್ದರು. ಇದಷ್ಟೇ ಅಲ್ಲದೆ ಶ್ರೀಲಂಕಾ ಧ್ವಜ ಹಿಡಿದು ಸಂತಸಪಟ್ಟಿದ್ದು ಹೆಚ್ಚು ವಿವಾದವಾಗಿತ್ತು.

ಆ ಸಂದರ್ಭದಲ್ಲಿ ಗೌತಮ್ ಗಂಭೀರ್ ಯಾವುದೇ ತಂಡದ ಬೆಂಬಲಿಗನಾಗಿ ಮೈದಾನದಲ್ಲಿ ಕಾಣಿಸಿಕೊಂಡಿರಲಿಲ್ಲ. ಬದಲಾಗಿ ಕ್ರಿಕೆಟ್ ವೀಕ್ಷಕ ವಿವರಣೆಕಾರನಾಗಿ ಬಂದಿದ್ದರು. ಆದಾಗ್ಯೂ ಒಂದು ತಂಡವನ್ನು ಬೆಂಬಲಿಸಿ ಮೈದಾನದಲ್ಲಿ ಧ್ವಜ ಹಿಡಿದು ಸಂಭ್ರಮಿಸಿದ ಬಗ್ಗೆ ಹಲವು ಕ್ರಿಕೆಟ್ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಪಾಕ್‌ ವಿರುದ್ಧ ದ್ವೇಷಕಾರುವ ಮತ್ತೊಂದು ಬಗೆ ಎಂದು ಟೀಕಿಸಿದ್ದರು.

ಡ್ಯಾನಿಶ್ ಕನೇರಿಯಾ ಪರ ನಿಂತಿದ್ದ ಗಂಭೀರ್

ಪಾಕಿಸ್ತಾನಿ ಆಟಗಾರರು ಡ್ಯಾನಿಶ್ ಕನೇರಿಯಾ ಅವರನ್ನು ಹಿಂದೂ ಎಂಬ ಕಾರಣಕ್ಕೆ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಇದು “ನಾಚಿಕೆಗೇಡು” ಎಂದು ಟೀಕಿಸಿದ್ದರು.

”ಇದು ಪಾಕಿಸ್ತಾನದ ನಿಜವಾದ ಮುಖ. ನಾವು ಮೊಹಮ್ಮದ್ ಅಜರುದ್ದೀನ್ ಅವರನ್ನು ನಮ್ಮ ತಂಡದ ನಾಯಕರನ್ನಾಗಿ ಹೊಂದಿದ್ದೇವೆ ಮತ್ತು ಅವರು 80-90 ಟೆಸ್ಟ್ ಪಂದ್ಯಗಳಲ್ಲಿ ನಮಗೆ ನಾಯಕತ್ವ ವಹಿಸಿದ್ದರು. ಡ್ಯಾನಿಶ್ ಕನೇರಿಯಾ ಅವರನ್ನು ಹಿಂದೂ ಎಂಬ ಕಾರಣಕ್ಕೆ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಪಾಕಿಸ್ತಾನದ ನೈಜತೆಯನ್ನು ತೋರಿಸುತ್ತದೆ” ಎಂದು ವಾಸ್ತವವನ್ನು ಅರಿಯದೆ ನೆರೆಯ ದೇಶದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದ್ದರು. ಗಂಭೀರ್‌ ಈ ಮಾತಿಗೂ ಎಲ್ಲಡೆ ಆಕ್ರೋಶ ವ್ಯಕ್ತವಾಗಿತ್ತು.

ವಿರಾಟ್‌ ಕೊಹ್ಲಿ ನಡುವೆ ವಾಗ್ವಾದ

ಗೌತಮ್‌ ಗಂಭೀರ್‌ ತಮ್ಮದೆ ಸ್ವಂತ ರಾಜ್ಯ ದೆಹಲಿಯ ಮತ್ತೊಬ್ಬ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ವಿರುದ್ಧ ಹಲವು ಬಾರಿ ಕ್ಯಾತೆ ತೆಗೆದಿದ್ದಾರೆ. 2024ರಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಲಖನೌ ಹಾಗೂ ಆರ್‌ಸಿಬಿ ನಡುವೆ ನಡೆದ ಪಂದ್ಯ ಮುಕ್ತಾಯದ ನಂತರ ಆಟಗಾರರ ನಡುವಣ ಹಸ್ತಲಾಘವದ ವೇಳೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಇಬ್ಬರು ಆಟಗಾರರು ಪರಸ್ಪರ ಬೈದಾಡಿಕೊಂಡಿದ್ದರು. ಒಂದು ಹಂತದಲ್ಲಿ ಇಬ್ಬರೂ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.

ಇದೇ ಸಂದರ್ಭದಲ್ಲಿ ಮೈದಾನದಿಂದ ಕೊಠಡಿಗೆ ತೆರಳುವ ವೇಳೆ ಕೊಹ್ಲಿ ಎಂದು ಕೂಗುತ್ತಿದ್ದ ಅಭಿಮಾನಿಗಳಿಗೆ ಮಧ್ಯದ ಬೆರಳನ್ನು ತೋರಿಸಿ ದರ್ಪ ಮೆರೆದಿದ್ದರು. ಅದಲ್ಲದೆ 2013ರಲ್ಲೂ ವಿರಾಟ್​ ಔಟಾದಾಗ ಕೋಲ್ಕತ್ತಾ ತಂಡದ ನಾಯಕನಾಗಿದ್ದ ಗಂಭೀರ್​ ಕಾಲು ಕೆರೆದುಕೊಂಡು ಜಗಳ ಮಾಡಿದ್ದರು.

ಶ್ರೀಶಾಂತ್‌ ಜೊತೆ ಜಗಳ

ಡಿಸೆಂಬರ್ 6, 2023ರಲ್ಲಿ ಸೂರತ್‌ನ ಲಾಲ್‌ಭಾಯ್ ಕಾಂಟ್ರಾಕ್ಟರ್ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ಮತ್ತು ಇಂಡಿಯಾ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಇಂಡಿಯನ್ ಕ್ಯಾಪಿಟಲ್ಸ್ ತಂಡದ ಗೌತಮ್ ಗಂಭೀರ್, ಟೀಂ ಇಂಡಿಯಾದ ಮತ್ತೊಬ್ಬ ಮಾಜಿ ಆಟಗಾರರಾದ ಗುಜರಾತ್ ಜೈಂಟ್ಸ್ ತಂಡದ ಶ್ರೀಶಾಂತ್ ಅವರಿಗೆ “ಫಿಕ್ಸರ್” ಹಾಗೂ ‘ಫ…’ ಮುಂತಾದ ಅಶ್ಲೀಲ ಪದ ಬಳಸಿದ್ದರು. ಇದರಿಂದ ಇವರಿಬ್ಬರ ನಡುವೆ ಜಗಳ ತಾರಕಕ್ಕೇರಿದಾಗ ಸಹ ಕ್ರಿಕೆಟಿಗರು ಮತ್ತು ಅಂಪೈರ್‌ಗಳು ರಕ್ಷಣೆಗೆ ಬರಬೇಕಾಯಿತು.

ಧೋನಿಗೆ ಕೈಕುಲುಕದ ಗಂಭೀರ್

2018ರ ಡಿಸೆಂಬರ್ 23 ರಂದು ಬೆಂಗಳೂರಿನಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿಗಾಗಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ದೆಹಲಿ ತಂಡ ಜಾರ್ಖಂಡ್‌ಅನ್ನು ಮಣಿಸಿ ಸೆಮಿಫೈನಲ್‌ಗೆ ತಲುಪಿತ್ತು. ಆ ಪಂದ್ಯ ಕೊನೆಗೊಂಡ ನಂತರ ಗೌತಮ್ ಗಂಭೀರ್ ಎದುರಾಳಿ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಉದ್ದೇಶಪೂರ್ವಕವಾಗಿ ಕೈಕುಲಕದೇ ನಿರ್ಲಕ್ಷಿಸಿದ್ದರು.

ಸಾಧನೆಯ ನಡುವೆ ಹಲವು ವಿವಾದಗಳನ್ನು ಮೈಗೆ ಮೆತ್ತಿಕೊಂಡಿರುವ ಗೌತಮ್‌ ಗಂಭೀರ್‌ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್‌ ಆಗಿ ಬಿಸಿಸಿಐ ನೇಮಕ ಮಾಡಲಾಗಿದೆ. ಇದಕ್ಕೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಗ ಜೈ ಶಾ ಅಧ್ಯಕ್ಷರಾಗಿರುವುದು ಹಾಗೂ ಬಲಪಂಥೀಯ ಒಲವುಳ್ಳವರೆಂಬ ಕಾರಣವೂ ಇರಬಹುದು.

ಕಪಿಲ್‌ ದೇವ್‌, ಅಜಿತ್‌ ವಾಡೇಕರ್, ಪಿ ಆರ್‌ ಮಾನ್‌ಸಿಂಗ್‌, ಗ್ಯಾರಿ ಕ್ರಿಸ್ಟನ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ ಅವರಂಥ ದಿಗ್ಗಜರು ನಿರ್ವಹಿಸಿದ ಬಹುಮುಖ್ಯವಾದ ಹುದ್ದೆ ಗಂಭೀರ್‌ಗೆ ದೊರೆತಿದೆ. ಇದು ಅತ್ಯಂತ ಜವಾಬ್ದಾರಿಯುತವಾದ ಹುದ್ದೆ. ಈ ಹಿನ್ನೆಲೆಯಲ್ಲಿ ದೇಶದ ಕ್ರಿಕೆಟ್ ಏಳಿಗೆಯ ದೃಷ್ಟಿಯಿಂದ ಗಂಭೀರ್‌ ತನ್ನೆಲ್ಲ ಕೀಳರಿಮೆಗಳನ್ನು ಬಿಟ್ಟು ತಂಡವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಬೇಕಾದ ಹೊಣೆಗಾರಿಕೆಯಿದೆ. ತಳಮಟ್ಟದಿಂದ ಬರುವ ಉತ್ತಮ ಪ್ರದರ್ಶನ ತೋರುವ ಹೊಸ ಪ್ರತಿಭಾನ್ವಿತ ಆಟಗಾರರಿಗೆ ಅವಕಾಶ ನೀಡಿ ದೊಡ್ಡತನ ಮೆರೆಯಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯೂರೋ ಕಪ್ | ನೆದರ್‌ಲೆಂಡ್ಸ್ ಮಣಿಸಿ ಇಂಗ್ಲೆಂಡ್ ಫೈನಲ್‌ಗೆ; ಸ್ಪೇನ್ ವಿರುದ್ಧ ಪೈಪೋಟಿ

ನೆದರ್​ಲೆಂಡ್ಸ್ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಹೆಚ್ಚುವರಿ 91ನೇ ನಿಮಿಷದಲ್ಲಿ ಬದಲಿ ಆಟಗಾರ...

ಕೆಲವೇ ತಿಂಗಳ ಅಂತರದಲ್ಲಿ ಏಳು-ಬೀಳು ಎದುರಿಸಿ ಗೆದ್ದು ಬಂದ ಹಾರ್ದಿಕ್ ಪಾಂಡ್ಯ!

ಅಂದು ಡಿಸೆಂಬರ್ 19, 2023. ಐಪಿಎಲ್ 2024ರ ಪಂದ್ಯಾವಳಿಯ ಹರಾಜಿನ ಸಮಯ....

ಚಾಂಪಿಯನ್ಸ್ ಟ್ರೋಫಿಯ ಪಾಕ್ ಪ್ರವಾಸಕ್ಕೆ ಟೀಂ ಇಂಡಿಯಾ ಪ್ರಯಾಣ ಅಸಂಭವ; ಹೈಬ್ರಿಡ್ ಮಾದರಿ ಸರಣಿ ಸಾಧ್ಯತೆ

ಮುಂದಿನ ವರ್ಷ 2025ರ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಏಕದಿನ ಚಾಂಪಿಯನ್ಸ್‌ ಟ್ರೋಫಿ...

ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಗೆಲುವು: 2-1 ಮುನ್ನಡೆ ಪಡೆದ ಟೀಂ ಇಂಡಿಯಾ

ಟೀಂ ಇಂಡಿಯಾ ತಂಡ ಜಿಂಬಾಬ್ವೆ ವಿರುದ್ಧ 23 ರನ್‌ಗಳ ಗೆಲುವು ಸಾಧಿಸಿದ್ದು,...