ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮವನ್ನು ಸಮರ್ಥಿಸಿಕೊಂಡ ಜನ, ಬಾಪುವಿನ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಜನ ಇಂದು ಯಹೂದಿಗಳ ಅಗ್ರಹಾರವಾದ ಇಸ್ರೇಲಿನ ಮೇಲೆ ದಾಳಿ ಮಾಡುವವರು ಉಗ್ರರೂ; ಇರಾನ್, ಲೆಬನಾನ್ ಮೇಲೆ ದಾಳಿ ಮಾಡುವ ಯಹೂದಿಗಳು ದೇಶ ಭಕ್ತರೂ ಅಂತ ಬಡಬಡಿಸಿಕೊಂಡು ಇಸ್ರೇಲ್ ಪರ ನಿಲ್ಲುವುದು ಹಿಂದುತ್ವವಾದ ಆದ್ದರಿಂದ ದೇಶಭಕ್ತಿ ಅಂತ ಸಮೀಕರಿಸಿಕೊಂಡು ಇಲ್ಲಿ ಬೇರೆಯೇ ತರದ 'ಅವರು' ಮತ್ತು 'ನಾವು' ಎಂಬ ಬೈನರಿ ಸೃಷ್ಟಿಸಿ ತಮ್ಮ ವಿಷ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಈ ಮೂರ್ಖ ಮತ್ತು ವಿಷಕಾರಿ ಬೈಗುಳ ಸ್ಪರ್ಧೆಯಲ್ಲಿ ನಿಜಕ್ಕೂ ಆಗಿದ್ದು ಏನು, ಆಗುತ್ತಿರುವುದು ಏನು, ಮುಂದೇನು ಆಗಬಹುದು ಎಂಬ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ದರ್ದೂ ಯಾರಿಗೂ ಇದ್ದಂಗಿಲ್ಲ.
ಬಾಪು ಇಡೀ ಜಗತ್ತಿಗೆ ಮತ್ತೆ-ಮತ್ತೆ ಪ್ರಸ್ತುತ ಆಗುವುದು ಹೀಗೆಯೇ. ಬಾಪುವಿನ ಶಾಂತಿ ಸಂದೇಶವನ್ನು ಎಲ್ಲರೂ ಅಷ್ಟೇ ಏಕೆ ಗೋಡ್ಸೆ ಭಕ್ತರೂ ಅವಾಗಾವಾಗ ಕೊಂಡಾಡುವುದುಂಟು. ಆದರೆ, ಬಾಪುವಿನ ಶಾಂತಿ ಸೂತ್ರ ಮತ್ತು ವಿಧಾನಗಳು ಅನೇಕರಿಗೆ ಅರ್ಥವೇ ಆಗಿಲ್ಲ. ಹೀಗಾಗಿ ವರ್ಷಕ್ಕೊಮ್ಮೆ ಗುಣಗಾನ ಮಾಡಿ ಮರುಕ್ಷಣ ಎಂದಿನಂತೆ ಯುದ್ಧದಾಹಿ ಹುಚ್ಚಾಟಕ್ಕೆ ಮರಳುವುದು ವಾಡಿಕೆ ಆಗಿಬಿಟ್ಟಿದೆ.
ಎರಡು ವರ್ಷಗಳಿಂದ ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿರುವಾಗಲೇ ಹಮಾಸ್-ಇಸ್ರೇಲ್ ಸಂಘರ್ಷ ಅಂತ ಶುರುವಾಗಿ ಒಂದು ವರ್ಷದ ನಂತರ ಇಂದು ಗಾಂಧೀ ಜಯಂತಿಯ ದಿನ ಇಸ್ರೇಲ್-ಇರಾನ್ ಯುದ್ಧವಾಗಿ ಪರಿಣಮಿಸಿದೆ. ಇರಾನ್ ತನ್ನ ದೇಶದ ಪ್ರಮುಖ ವ್ಯಕ್ತಿಗಳ ಹತ್ಯೆ ಮತ್ತು ವಿಶ್ವಸಂಸ್ಥೆ ಖಂಡಿಸಿದ ಪೇಜರ್ ಬಾಂಬ್ ದಾಳಿಗೆ ಪ್ರತೀಕಾರವಾಗಿ ಕಳೆದ ರಾತ್ರಿ ಸುಮಾರು ನಾಲಕ್ಕು ನೂರು ಕ್ಷಿಪಣಿ ದಾಳಿ ಮಾಡಿ ಇಸ್ರೇಲಿನ ಮೇಲೆ ಯುದ್ಧ ಸಾರಿದೆ. ಎಂದಿನಂತೆ ಅಮೆರಿಕ ಇಸ್ರೇಲಿಗಳ ಬೆನ್ನಿಗೆ ನಿಂತರೆ, ಇರಾಕ್ ಅಮೆರಿಕಕ್ಕೆ ಈ ಯುದ್ಧದಲ್ಲಿ ಭಾಗವಹಿಸಕೂಡದು ಅಂತ ಎಚ್ಚರಿಕೆ ನೀಡಿದೆ. ಅಷ್ಟರಲ್ಲಿಯೇ ಅಮೆರಿಕ ತನ್ನ ಸೈನ್ಯವನ್ನು ಮಧ್ಯ ಪ್ರಾಚ್ಯದಲ್ಲಿ ಹೆಚ್ಚುವರಿ ನಿಯೋಜನೆ ಮಾಡಲು ತೀರ್ಮಾನಿಸಿದೆ.
ಇಲ್ಲಿ ನೋಡಿದರೆ ಹಿಟ್ಲರನ ಜರ್ಮನಿಯಲ್ಲಿ ಯಹೂದಿಗಳ ಮಾರಣಹೋಮವನ್ನು ಸಮರ್ಥಿಸಿಕೊಂಡ ಜನ, ಬಾಪುವಿನ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಜನ ಇಂದು ಯಹೂದಿಗಳ ಅಗ್ರಹಾರವಾದ ಇಸ್ರೇಲಿನ ಮೇಲೆ ದಾಳಿ ಮಾಡುವವರು ಉಗ್ರರೂ; ಇರಾನ್, ಲೆಬನಾನ್ ಮೇಲೆ ದಾಳಿ ಮಾಡುವ ಯಹೂದಿಗಳು ದೇಶ ಭಕ್ತರೂ ಅಂತ ಬಡಬಡಿಸಿಕೊಂಡು ಇಸ್ರೇಲ್ ಪರ ನಿಲ್ಲುವುದು ಹಿಂದುತ್ವವಾದ ಆದ್ದರಿಂದ ದೇಶಭಕ್ತಿ ಅಂತ ಸಮೀಕರಿಸಿಕೊಂಡು ಇಲ್ಲಿ ಬೇರೆಯೇ ತರದ ‘ಅವರು’ ಮತ್ತು ‘ನಾವು’ ಎಂಬ ಬೈನರಿ ಸೃಷ್ಟಿಸಿ ತಮ್ಮ ವಿಷ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಈ ಮೂರ್ಖ ಮತ್ತು ವಿಷಕಾರಿ ಬೈಗುಳ ಸ್ಪರ್ಧೆಯಲ್ಲಿ ನಿಜಕ್ಕೂ ಆಗಿದ್ದು ಏನು, ಆಗುತ್ತಿರುವುದು ಏನು, ಮುಂದೇನು ಆಗಬಹುದು ಎಂಬ ಬಗ್ಗೆ ಯಾರೂ ಚರ್ಚೆ ಮಾಡುತ್ತಿಲ್ಲ ಮತ್ತು ಅದನ್ನು ತಿಳಿದುಕೊಳ್ಳುವ ದರ್ದೂ ಯಾರಿಗೂ ಇದ್ದಂಗಿಲ್ಲ. ಗಡ್ಡಕ್ಕೆ ಬೆಂಕಿ ಹತ್ತಲಿ ನೋಡೋಣ, ಆವಾಗಲೇ ಬಾವಿ ತೋಡಿದರಾಯಿತು ಅನ್ನುವ ಜನ ಅಲ್ಲವೇ ನಾವು?
ಸಾಮ್ರಾಜ್ಯಶಾಹಿ ಮುಗಿದು nation state ಎಂಬ ಕಲ್ಪನೆ ಬಂದ ಮೇಲೆ ನಡೆದ ಯುದ್ಧಗಳೆಲ್ಲವನ್ನೂ ಗಮನಿಸಿದರೆ ಒಂದೇ ಒಂದು ಅಂಶ ಸರ್ವೇಸಾಮಾನ್ಯವಾಗಿ ಕಂಡುಬರುತ್ತದೆ. ಅದೇನೆಂದರೆ ಜಾಗತಿಕ, ಅದರಲ್ಲೂ ಪಾಶ್ಚಾತ್ಯ ದೇಶಗಳಲ್ಲಿ, ಆಯಾ ಯುದ್ಧಗಳ ಮುನ್ನಾದಿನಗಳ ಆರ್ಥಿಕ ಕುಸಿತ. ಮೊದಲ ವಿಶ್ವಯುದ್ಧವಂತೂ ಯುದ್ಧಪೂರ್ವ ಆರ್ಥಿಕ ಸಂಕಷ್ಟಗಳನ್ನು ಇನ್ನೂ ಉಲ್ಬಣಗೊಳಿಸಿ ಇಡೀ ವಿಶ್ವದ ಆರ್ಥಿಕ ವ್ಯವಸ್ಥೆಯೇ ನಷ್ಟವಾಗಿ ಹೋಗುವ ಅಪಾಯಕ್ಕೆ ತಂದಿಕ್ಕಿತು. ಆ ಎಲ್ಲ ನಷ್ಟಗಳನ್ನು ಜರ್ಮನಿಯ ಮೇಲೆ ಹೇರಿ, ಜರ್ಮನಿಯ ಸೈನಿಕ ಬಲ ಮತ್ತು ಪ್ರಾದೇಶಿಕ ಬಲವನ್ನು ಮಿತಿಗೊಳಿಸುವುದಲ್ಲದೇ ಆರ್ಥಿಕ ದಂಡವನ್ನು ವಾರ್ಸೆಲ್ಸ್ ಒಪ್ಪಂದ ಹೇರಿದ್ದಕ್ಕೇ ಹಿಟ್ಲರ್, ಅದನ್ನು ಹೇರಿದವರು ಮತ್ತು ಅದನ್ನು ಒಪ್ಪಿಕೊಂಡ ತನ್ನ ದೇಶದ ನಾಯಕರು ಹಾಗೂ ಅವರ ಚಿಂತನೆ ಎಲ್ಲರನ್ನೂ ಮುಗಿಸಲು ಹೊರಟ. ಈ ಅಧ್ವಾನಕ್ಕೆ ಯಹೂದಿಗಳ ಒಳಸಂಚು ಕಾರಣ ಎಂದು ನಂಬಿದ್ದ ಹಿಟ್ಲರ್, ಯಹೂದಿಗಳಿಗೆ ನರಕ ಏನು ಎಂಬುದನ್ನು ತೋರಿಸಿದ. ಇದೇ ಎರಡನೇ ವಿಶ್ವಯುದ್ಧ. ಮೊದಲನೇ ವಿಶ್ವಯುದ್ಧ ನಡೆದ ಕೇವಲ ಎರಡೇ ದಶಕಗಳಲ್ಲಿ ಶುರುವಾದ ಎರಡನೇ ವಿಶ್ವಯುದ್ಧಕ್ಕೆ ಖರ್ಚು ಮಾಡಲು ಯುರೋಪಿಯನ್ ದೇಶಗಳ ಬಳಿ ಹಣ ಇರಲಿಲ್ಲ. ಮೊದಲ ವಿಶ್ವಯುದ್ಧವೇ ಅವರನ್ನು ದಿವಾಳಿ ಸ್ಥಿತಿಗೆ ತಂದಿಟ್ಟಿತ್ತು. ಮೊದಲ ವಿಶ್ವಯುದ್ಧದ ನಂತರ ಯುದ್ಧೋಪಕರಣಗಳ ಉದ್ಯಮಕ್ಕೆ ಹೆಚ್ಚಿನ ಒತ್ತುಕೊಟ್ಟು ಬೆಳೆಸುತ್ತಿದ್ದ ಅಮೆರಿಕ ತಾನು ಯುವುದೇ ಯುದ್ಧದಲ್ಲಿ ಪಾಲುಗೊಳ್ಳುವುದಿಲ್ಲ ಅಂತ ಸಂಸದೀಯ ತೀರ್ಮಾನ ಕೂಡ ಮಾಡಿತ್ತು.

ಇಲ್ಲಿ ನೋಡಿದರೆ ಭೂಮಿಯ ತೊಂಬತ್ತು ಪರ್ಸೆಂಟ್ ದೇಶಗಳನ್ನು ಆಳುವ ಬ್ರಿಟಿಷ್ ಸರ್ಕಾರ ಹಿಟ್ಲರ್ ವಾರ್ ಮಷೀನಿನೊಂದಿಗೆ ಸೆಣಸಿ ಆರ್ಥಿಕವಾಗಿ ಕುಸಿದು ಹೋಗಿತ್ತು. ಆಗಲೇ ಅಮೆರಿಕ ತಾನು ನೇರವಾಗಿ ಯುದ್ಧಕ್ಕೆ ಬರಲಾರೆ, ಬೇಕಾದರೆ ಶಸ್ತ್ರಾಸ್ತಗಳನ್ನು ಕಂತಿನ ಮೇಲೆ ದುಡ್ಡು ಕೊಡುವ ಕರಾರಿನ ಮೇಲೆ ನಿಮಗೆ ಕೊಡಬಲ್ಲೆ ಅಂತ ಬ್ರಿಟಿಷರೊಡನೆ lend lease ಒಪ್ಪಂದ ಮಾಡಿಕೊಳ್ಳುತ್ತದೆ. ಆ ಮೂಲಕ ತನ್ನ ವ್ಯಾಪಾರವನ್ನು ಅಗಾಧ ಪ್ರಮಾಣದಲ್ಲಿ ಬೆಳೆಸಿಕೊಂಡು ಸದೃಢಗೊಳ್ಳುತ್ತದೆ.
ಎರಡನೇ ವಿಶ್ವಯುದ್ಧದ ನಂತರ ಬ್ರೆಟನ್ ವುಡ್ಸ್ ಎಂಬ ಹೋಟೆಲಿನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಇನ್ನು ಮೇಲೆ ಡಾಲರ್ ಕರೆನ್ಸಿಗೂ ಚಿನ್ನದ ರಿಸರ್ವ್‌ಗೂ ಯಾವುದೇ ಸಂಬಂಧ ಇರುವುದಿಲ್ಲ. ಆದರೆ, ಜಗತ್ತಿನ ಬೇರೆ ಕರೆನ್ಸಿಗಳು gold reserveಗೆ ಲಿಂಕ್ ಆಗಿರಬೇಕು ಅಂತ ಒಂದು ಠರಾವು ಪಾಸು ಮಾಡಿಸುತ್ತದೆ. ಹಾಗೆಯೇ ತೈಲ ಉತ್ಪಾದನಾ ದೇಶಗಳ ಮೇಲೆ ಇನ್ನೊಂದು ಕರಾರು ಹೇರುತ್ತದೆ. ಅದೇನೆಂದರೆ, ಜಗತ್ತಿನ ಯಾವುದೇ ದೇಶ ನಿಮ್ಮ ತೈಲ ಖರೀದಿಗೆ ಬಂದರೆ ನೀವು ಅವರವರ ದೇಶದ ಕರೆನ್ಸಿಯನ್ನು ಸ್ವೀಕರಿಸಕೂಡದು. ನೀವು ಅವರಿಂದಲೂ ಕೂಡ ಡಾಲರ್ ಅನ್ನೇ ತೆಗೆದುಕೊಳ್ಳಬೇಕು ಅಂತ. ಅಲ್ಲಿಗೆ ಯಾವುದೇ ದೇಶಕ್ಕೆ ತೈಲ ಬೇಕಾದರೆ ಮೊದಲು ಅದು ಅಮೆರಿಕ ಮುಂದೆ ಡಾಲರ್ ಕೊಡಿ ಸ್ವಾಮೀ ಅಂತ ಬೇಡಬೇಕು. ಎಷ್ಟಾದರೂ ನನ್ನ gold reserveಗೆ ಲಿಂಕ್ ಆದ ಕರೆನ್ಸಿ ತಗೊಳ್ಳಿ, ಬದಲಾಗಿ ನಿಮ್ಮ gold reserveಗೆ ಲಿಂಕ್ ಆಗದ ಡಾಲರ್ ಕೊಡಿ ಸ್ವಾಮೀ ಅಂತ ಕೇಳಿಕೊಳ್ಳಬೇಕು.
ಹೀಗೆ ಇಡೀ ಜಗತ್ತನ್ನೇ ತನ್ನ ಆರ್ಥಿಕ ವಸಾಹತು ಮಾಡಿಕೊಂಡ ಅಮೆರಿಕ, ಐಎಂಎಫ್, ವಿಶ್ವಬ್ಯಾಂಕ್, ಅಷ್ಟೇ ಏಕೆ ಎಲ್ಲ ದೇಶಗಳ ರಿಸರ್ವ್ ಬ್ಯಾಂಕುಗಳ ತೀರ್ಮಾನಗಳನ್ನೂ ತನ್ನ ಪ್ರಭಾವದ ಅಡಿಯಲ್ಲಿ ತಂದುಕೊಂಡಿತು. ಆದರೆ, ಇದಕ್ಕೆ ಠಕ್ಕರ್ ಕೊಡುವ ಛಾತಿ ಇದ್ದಿದ್ದು ಸೋವಿಯತ್ ಸಂಘಕ್ಕೆ ಮಾತ್ರ. ಯಾಕೆಂದರೆ ಎಷ್ಟೇ ಖರ್ಚು ಮಾಡಿದರೂ ಎಷ್ಟೇ ಯುದ್ಧ ಮಾಡಿದರೂ ಗೆಲ್ಲಲಾಗದೆ ಪೆಕರುಗಳಾಗಿದ್ದ ಅಮೆರಿಕ ಮತ್ತವರ ಯುರೋಪಿಯನ್ ಸಂಗಡಿಗರಿಗೆ ಎರಡನೇ ವಿಶ್ವಯುದ್ಧವನ್ನು ಗೆದ್ದು ಕೊಟ್ಟಿದ್ದೇ ಸೋವಿಯೆತ್ ಸಂಘ. ಸೋವಿಯೆತ್ ಸಂಘದ ಈ ದೈತ್ಯ ಬಲವೇ ಪಾಶ್ಚಾತ್ಯರ ನಿದ್ದೆಗೆಡಿಸಿರಲು ಸಾಕು. ಇದರ ಫಲವಾಗಿಯೇ ಶೀತಲ ಸಮರ, arms race ಶುರುವಾಗಿ ಅಮೆರಿಕ ತಾನು ಇಡೀ ಜಗತ್ತಿನ ಶೋಷಣೆ ಮಾಡಿ ಗಳಿಸಿದ ಹಣವನ್ನೆಲ್ಲ ಈ ಹೊಸ ಸವಾಲನ್ನು ಎದುರಿಸಲು ಖರ್ಚು ಮಾಡಬೇಕಾಯಿತು. ಹೀಗಾಗಿ ವಿಯೆತ್ನಾಮ್ ವಾರ್ ನಡೆಯಿತು, ಆಫ್ಗಾನ್ ವಾರ್ ನಡೆಯಿತು. ಒಟ್ಟಾರೆಯಾಗಿ ಎಲ್ಲೆಲ್ಲಿ ಸೋವಿಯೆತ್ ಸಂಘ ಹೋಯಿತೋ ಅಲ್ಲಿಗೆ ತಾನೂ ಹೋಗಿ ಯುದ್ಧ ಮಾಡುವುದೇ ತನ್ನ ವ್ಯಕ್ತಿತ್ವ ಮತ್ತು ಅಸ್ತಿತ್ವದ ಸಬೂಬು ಅಂತ ತಿಳಿಯಿತು ಅಮೆರಿಕ.
ಸೋವಿಯೆತ್ ಸಂಘವನ್ನು ಹಣಿಯಲು ಸಮಾನ ಮನಸ್ಕ ದೇಶಗಳ ಮಿಲಿಟರಿ ಸಹಕಾರಕ್ಕೆ NATO ಒಪ್ಪಂದ ಮಾಡಿಕೊಂಡಿತು. ಪ್ರತಿಯಾಗಿ ಸೋವಿಯೆತ್ ಸಂಘ ತನ್ನ ಸಮಾನ ಮನಸ್ಕ ದೇಶಗಳ ಮಿಲಿಟರಿ ಏಕತೆಗಾಗಿ Warsaw Pact ಮಾಡಿಕೊಂಡಿತು. ಈ ಜಿದ್ದಾ ಜಿದ್ದು ಮೂರನೇ ವಿಶ್ವ ಯುದ್ಧದ ಅಂಚಿಗೆ ಅನೇಕ ಬಾರಿ ಕೊಂಡೊಯ್ದು ಜಗತ್ತು ಉಳಿದಿದ್ದೇ ಒಂದು ಪವಾಡ.
ಆವಾಗಲೇ ಬಾಪುವಿನ ಒಂದೆರಡು ಅಂಶ ಇದ್ದಿರಬಹುದಾದ ಮಿಖಾಯಿಲ್ ಗೋರ್ಬಶೇವ್ ಸೋವಿಯೆತ್ ಸಂಘದ ಅಧ್ಯಕ್ಷನಾಗಿ ಸೋವಿಯೆತ್ ಸಂಘವನ್ನು ಬರಖಾಸ್ತುಗೊಳಿಸಿ ಬರ್ಲಿನ್ ಗೋಡೆ ಕೆಡವಿ, Warsaw Pact ಅಂತ್ಯಗೊಳಿಸಿದಾಗ ತಾವೂ ಕೂಡ NATO ಒಪ್ಪಂದವನ್ನು ಅಂತ್ಯಗೊಳಿಸುವುದಾಗಿ ಪಾಶ್ಚಾತ್ಯ ದೇಶಗಳು ಭರವಸೆ ನೀಡುತ್ತವೆ. ಯಾಕೆಂದರೆ ತಮ್ಮ ಎದುರಾಳಿಯೇ ಶಾಂತಿ ಮಂತ್ರ ಹೇಳುವುದು ಮಾತ್ರವಲ್ಲ ಅದನ್ನು ಅನುಷ್ಠಾನ ಮಾಡಿದಾಗ NATO ದೇಶಗಳು ಕೂಡ ಸೂಕ್ತ ಶಾಂತಿ ಕ್ರಮಗಳನ್ನು ತಗೆದುಕೊಳ್ಳಬೇಕಾದ್ದು ಧರ್ಮ ಅಲ್ಲವೇ?

ಆದರೆ ಹಾಗಾಗುವುದಿಲ್ಲ. ತನ್ನ ಸೋವಿಯೆತ್ ಸಂಘದ ಅನೇಕ ದೇಶಗಳಿಗೆ ಸ್ವಾತಂತ್ರ್ಯ ಕೊಟ್ಟು ಕೇವಲ ರಷ್ಯಾ ಮಾತ್ರವಾಗಿ ಮುಂದುವರೆದ ದೇಶಕ್ಕೆ ಶಾಕ್ ಆಗುವುದು NATO ಒಪ್ಪಂದ ಬರಖಾಸ್ತು ಬಿಡಿ, ಅದನ್ನು ಮತ್ತಷ್ಟು ದೇಶಗಳನ್ನು ಸೇರಿಸಿಕೊಂಡು ಬೆಳೆಸುತ್ತಲೇ ಹೋಗುತ್ತದೆ ಅಮೆರಿಕ. ಹಿಂದಿನ ಸೋವಿಯೆತ್ ಸಂಘದ ದೇಶಗಳನ್ನೂ NATO ಒಪ್ಪಂದಕ್ಕೆ ಸೇರಿಸಿಕೊಳ್ಳುತ್ತದೆ. ಅಂದು ಬರ್ಲಿನ್ ಗೋಡೆ ಕುಸಿದಾಗ ಅಲ್ಲಿ ರಷಿಯಾದ ಕೆಜಿಬಿ ಗೂಢಚಾರಿ ಆಗಿದ್ದ ಪುಟಿನ್ ಈಗ ರಷ್ಯಾದ ಅಧ್ಯಕ್ಷ. ಇದನ್ನು ನೋಡಿಕೊಂಡು ಸುಮ್ಮನಿರಲಾಗದೆ ಅನೇಕ ಸಲ NATOಗೆ ವಾರ್ನ್ ಮಾಡಿದ್ದರೂ ಕೂಡ… ತನ್ನ ದೇಶದ ಗಡಿಯಲ್ಲಿನ ಉಕ್ರೇನನ್ನು NATO ಒಪ್ಪಂದಕ್ಕೆ ತೆಗೆದುಕೊಳ್ಳಲು ಮುಂದಾದಾಗ ಉಕ್ರೇನ್ ದೇಶದ ಮೇಲೆ ದಾಳಿ ಮಾಡಿ ಈಗ ‘ನಾ ಬಿಡೆ ಅಂತ NATO, ನಾ ಕೊಡೆ ಅಂತ ಪುಟಿನ್’.
ಈಗ ಇಸ್ರೇಲಿಗೆ ಬರೋಣ. ಹಿಟ್ಲರ್ ವರ್ಷಗಳ ಕಾಲ ಯಹೂದಿಗಳನ್ನು ಕೊಂದರೂ ಕೂಡ, ಅವರ ಆಸ್ತಿ-ಪಾಸ್ತಿ ಕಸಿದು ಅತ್ಯಾಚಾರ ಮಾಡಿದರು ಕೂಡ, ಅವರನ್ನು ಸಾಮೂಹಿಕ ಸಮಾಧಿ ಮಾಡಿದರೂ ಕೂಡ, ಸಾಮೂಹಿಕ ದಹನ ಮಾಡಿದರೂ ಕೂಡ ಕ್ಯಾರೇ ಅಂದಿರಲಿಲ್ಲ ಅಮೆರಿಕ ಮತ್ತು ಪಾಶ್ಚಾತ್ಯ ಯುರೋಪಿಯನ್ ದೇಶಗಳು. ಹಿಟ್ಲರ್ ಅಂದಿನ ಆಸ್ಟ್ರಿಯಾ ಜೆಕೋಸ್ಲಾವಾಕಿಯಾ ಇತ್ಯಾದಿ ಪೂರ್ವ ದೇಶಗಳನ್ನು ಆಕ್ರಮಿಸಿದರೂ ಕೂಡ ಸುಮ್ಮನಿದ್ದ ಪಾಶ್ಚಾತ್ಯ ಯುರೋಪಿಯನ್ ದೇಶಗಳು ಎಚ್ಚತ್ತಿದ್ದು, ಹಿಟ್ಲರ್ ಪೋಲೆಂಡ್ ದೇಶದ ಮೇಲೆ ದಂಡೆತ್ತಿ ಹೋಗಲು ಹವಣಿಸುತ್ತಿದ್ದಾಗ. ಎಲ್ಲಿ ಮತ್ತೆ ಜರ್ಮನಿ ಬಲಿಷ್ಠವಾಗಿ ತಮ್ಮನ್ನು ಮತ್ತೆ ಹೈರಾಣಾಗಿಸುತ್ತದೆಯೋ ಎಂಬ ಭಯದಿಂದ. ಆದ್ದರಿಂದ ಬ್ರಿಟನ್ ಪ್ರಧಾನಿ ನೆವಿಲ್ ಚೇಂಬರ್ ಲೇನ್ ಅವರು ಹಿಟ್ಲರ್ ಬಳಿ ಹೋಗಿ, ಆಯ್ತಪ್ಪಾ ಇಲ್ಲೀವರೆಗೆ ನೀನು ಆಕ್ರಮಿಸಿಕೊಂಡ ಪ್ರದೇಶ ನೀನೆ ಇಟ್ಟುಕೋ… ಇನ್ನು ಮೇಲೆ ನೀನು ವಾರ್ಸೆಲ್ಸ್ ಒಪ್ಪಂದದ ಪ್ರಕಾರ ಕೊಡಬೇಕಾದ ಯಾವ ದಂಡವನ್ನೂ ಕೊಡಬೇಡ, ಒಪ್ಪಂದವನ್ನೇ ರದ್ದು ಮಾಡೋಣ. ಆದರೆ, ಇನ್ನು ಮುಂದೆ ಯಾವ ದೇಶದ ಮೇಲೂ ಆಕ್ರಮಣ ಮಾಡಬೇಡ. ನಾವೆಲ್ಲ ಬ್ರದರ್ಸ್ ಆಗಿ ಇರೋಣ ಅಂತ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು ಲಂಡನ್ನಿಗೆ ಬಂದು ತಾನು ಯುರೋಪಿನಲ್ಲಿ ಶಾಂತಿ ಸ್ಥಾಪನೆ ಮಾಡಿಬಿಟ್ಟೆ ಎಂಬ ಖುಷಿಯಲ್ಲಿ ಒಪ್ಪಂದ ಪಾತ್ರವನ್ನು ಮಾಧ್ಯಮಗಳ ಮುಂದೆ ಪ್ರದರ್ಶನ ಮಾಡುತ್ತಿದ್ದರು. ಆ ಕ್ಷಣದಲ್ಲಿಯೇ ಹಿಟ್ಲರ್ ಪೋಲೆಂಡಿನ ಮೇಲೆ ದಂಡೆತ್ತಿ ಹೋದ, ಇತ್ತ ಪಶ್ಚಿಮದ ಯೂರೋಪಿನ ಮೇಲೂ ಕೂಡ ದಾಳಿ ಶುರು ಮಾಡುತ್ತಾನೆ. ಮುಂದೆ ಪ್ಯಾರಿಸ್ ಮತ್ತು ಲಂಡನ್ ಕೂಡ ಹಿಟ್ಲರ್‌ನ ದಾಳಿಗೆ ಬಲಿಯಾಗುತ್ತವೆ. ತಮ್ಮ ಬುಡಕ್ಕೇ ಬೆಂಕಿ ಹತ್ತಿದಾಗ ಮಾತ್ರ ಹಿಟ್ಲರ್‌ನ ಮೇಲೆ ಇವರು ಯುದ್ಧ ಮಾಡಲು ಶುರು ಮಾಡಿದ್ದು. ಯಹೂದಿಗಳ ಮೇಲಿನ ಪ್ರೇಮದಿಂದ ಅಲ್ಲ.
ಇದನ್ನು ಓದಿದ್ದೀರಾ?: ‘ಗಾಂಧೀಜಿಯ ಹಂತಕ’ | ಗೋಡ್ಸೆ ಎಂಬ ಸರಳ ಮನಸ್ಸಿನ ಹಂತಕ
ಆದರೆ, ಎರಡನೇ ವಿಶ್ವಯುದ್ಧದ ನಂತರ ಯಹೂದಿಗಳು ಸಾವಿರಾರು ವರ್ಷ ನಾವು ಅಲೆದಾಡಿದ್ದೇವೆ. ನಮಗೆ ಎಲ್ಲಿಯೂ ಶಾಂತಿಯಿಲ್ಲ. ನಮಗೊಂದು ಹೋಮ್ ಲ್ಯಾಂಡ್ -ಮಾತೃ ಭೂಮಿ – ಅನ್ನುವುದು ಇಲ್ಲ. ಅದು ನಮ್ಮ ಧರ್ಮ ಗ್ರಂಥಗಳ ಪ್ರಕಾರ ಐತಿಹಾಸಿಕವಾಗಿ ನಾವು ನೆಲೆಸಿದ್ದ ಇಸ್ರೇಲ್ ಮಾತ್ರ ಅಂತ ಅಂದಾಗ, ಆ ಪ್ರದೇಶ ಇಂದು ಪ್ಯಾಲೆಸ್ತೀನ್ ಆಗಿದ್ದು ಬ್ರಿಟಿಷ್ ವಸಾಹತು ಆಗಿರುತ್ತದೆ. ಈ ಯಹೂದಿಗಳು ನಮ್ಮ ದೇಶಕ್ಕೆ ಬಂದು ನೆಲಸಲಿ ಅಂತ ಅಮೆರಿಕ ಹೇಳುವುದಿಲ್ಲ. ಇಂಗ್ಲೆಂಡು ಹೇಳುವುದಿಲ್ಲ. ಅಂದು ಬ್ರಿಟಿಷ್ ವಸಾಹತು ಆಗಿದ್ದ ಪ್ಯಾಲೆಸ್ತೀನ್ ದೇಶದ ದಕ್ಷಿಣ ಭಾಗದಲ್ಲಿ ಹೋಗಿ ಇರಿ ಅಂತ ಬ್ರಿಟಿಷ್ ಸರ್ಕಾರ ಹೇಳಿ ಅದೇ ಇಸ್ರೇಲ್ ಅಂತ ವಿಶ್ವಸಂಸ್ಥೆಯ ಮುಂದೆ ಒಪ್ಪಂದ ಆಗುತ್ತದೆ. ಇಲ್ಲಿ ನೋಡಿದರೆ ಯಾವ ನಾಜಿಗಳು ಯಹೂದಿಗಳನ್ನು ಮಾರಣಹೋಮ ಮಾಡಿದ್ದರೋ ಅದೇ ನಾಜಿ ವಿಜ್ಞಾನಿಗಳು ಮತ್ತು ಇಂಜಿನೀಯರುಗಳನ್ನು ಅಮೆರಿಕ ಕರೆದುಕೊಳ್ಳುತ್ತದೆ -ತನ್ನ ಆರ್ಥಿಕತೆಯನ್ನು ಬೆಳೆಸಿಕೊಳ್ಳಲು.
ಆಯಿತು ಇಸ್ರೇಲ್ ಕೊಟ್ಟಿರಿ. ತಮ್ಮ ದೇಶ ಬಿಟ್ಟು ಹೋದ ಬ್ರಿಟಿಷರು ತಮ್ಮ ದೇಶ ಯಾವುದು ಎಷ್ಟು ಅಂತ ಹೇಳಲಿಲ್ಲವಲ್ಲ ಅಂತ ಪ್ಯಾಲೆಸ್ಟೀಯನ್ನರಿಗೆ ಸಿಟ್ಟು. ಇದನ್ನು ಎಲ್ಲರನ್ನೂ ಕೂರಿಸಿಕೊಂಡು ಬಗೆಹರಿಸಲಾಗದೆ ಅವಾಗವಾಗ ಇಸ್ರೇಲ್ ಅವಾಗವಾಗ ಪ್ಯಾಲೆಸ್ತೀನ್ ಪರ ನಿಲ್ಲುತ್ತಾ ಈ ಜಗಳ ಜೀವಂತ ಆಗಿರುವಂತೆ ನೋಡಿಕೊಂಡಿದ್ದೇ ಅಮೆರಿಕ. ಯಾಕೆಂದರೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧ ಅರಾಜಕತೆ ನಡೆಯುತ್ತಾ ಇದ್ದರೆ ತಮ್ಮ ಶಸ್ತ್ರಾಸ್ತ್ರ ಸಂತೆಗೂ ಲಾಭ. ಹಾಗೆಯೇ ತೈಲ ಬೆಲೆ ಹೆಚ್ಚುತ್ತಾ ಹೋಗಿ ತನ್ನ ಡಾಲರ್ ಕೂಡ ರಾರಾಜಿಸುತ್ತದೆ.
ಈಗ ನೋಡಿ. ತನ್ನದೇ ಬಂಡವಾಳಶಾಹಿ ಸ್ವಾರ್ಥದಿಂದಾಗಿ ಉಂಟಾದ 2008ರ ಆರ್ಥಿಕ ಕುಸಿತ ಅಮೆರಿಕಾದ ಸೊಂಟ ಮುರಿದಿದೆ. ನಂತರ ಬಂದ ಕೋವಿಡ್ ಅವರನ್ನು ಮಕಾಡೆ ಮಲಗಿಸಿದೆ. ಈಗ ಅವರ ಆರ್ಥಿಕ ಚೇತರಿಕೆ ಆಗಬೇಕೆಂದರೆ ದೊಡ್ಡ ಪ್ರಮಾಣದ ಯುದ್ಧ ಆಗಬೇಕು. ಆ ಮೂಲಕ ತನ್ನೆಲ್ಲ ಆಯುಧ ಸ್ಟಾಕ್ ಡಬಲ್ ಬೆಲೆಗೆ ಮಾರಾಟ ಆಗಬೇಕು. ಹಾಗೆಯೇ ಒಂದರ್ಧದಷ್ಟು ತೈಲ ಭಾವಿಗಳು ನಷ್ಟವಾಗಿ ತೈಲ ಅಭಾವ ಉಂಟಾಗಿ ತೈಲ ಬೇಡಿಕೆ ಹೆಚ್ಚಾಗಿ ಡಾಲರ್ ಬೆಲೆ ಮುಗಿಲು ಮುಟ್ಟಬೇಕು. ಯಾವನು ಸತ್ತರೆ ಏನು, ಯಾವನು ಬದುಕಿದರೇನು! ತಾನು ಮಾತ್ರ ಮೇಲಿರಬೇಕು ಅಷ್ಟೇ.
ನಮಗೇನು ತೊಂದರೆ ಇಲ್ಲ ಬಿಡಿ. ಹಿಂದು-ಮುಸ್ಲಿಂ ಜಗಳ ಮಾಡಿಕೊಂಡು ಆರಾಮ ಇರೋಣ. ಡಾಲರ್ ಬೆಲೆ ಸಾವಿರ ಆದರೇನು? ಪೆಟ್ರೋಲು ಬೆಲೆ ಐನೂರು ಆದರೇನು? ಹುಲಿ ಸಾಕಿದ್ದೇವೆ. ನಾವು ಉಪವಾಸ ಇದ್ದು ಹುಲಿ ಸಾಕೋಣ. ಅದಕ್ಕೇನಂತೆ?
ಬಾಪುವಿನ ಜನ್ಮದಿನ ಇಂದು. ಇಂದೇ ನಡೆದ ಇರಾನ್ ದಾಳಿ ಸುದ್ದಿ ಕೇಳಿ ಇದೆಲ್ಲ ನೆನಪಾಯಿತು. ಹ್ಯಾಪಿ ಗಾಂಧೀ ಜಯಂತಿ ಎಲ್ಲರಿಗೂ.

ಡಾ. ಬಸವರಾಜ್ ಇಟ್ನಾಳ್
ಪತ್ರಕರ್ತ, ಚಿತ್ರನಿರ್ದೇಶಕ