ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಭಾನುವಾರ ಐದನೇ ಅವಧಿಗೆ ಮರುಚುನಾವಣೆಯಲ್ಲಿ ಜಯಗಳಿಸಿದ್ದಾರೆ.
ಹಸೀನಾ ಅವರ ಆಡಳಿತಾರೂಢ ಅವಾಮಿ ಲೀಗ್ ಪಕ್ಷ, 50 ಪ್ರತಿಶತಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಒಟ್ಟು 300 ಕ್ಷೇತ್ರಗಳ ಪೈಕಿ 223ರಷ್ಟು ಕ್ಷೇತ್ರಗಳನ್ನು ಗೆದ್ದುಕೊಂಡಿದೆ ಎಂದು ಚುನಾವಣಾ ಆಯೋಗದ ವಕ್ತಾರರು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರ್ಕಾರವು ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಅವಾಮಿ ಲೀಗ್ ಪಕ್ಷವು ಸ್ಪರ್ಧಿಸಿದ ಸ್ಥಾನಗಳಲ್ಲಿ ಯಾವುದೇ ಪರಿಣಾಮಕಾರಿ ಪ್ರತಿಸ್ಪರ್ಧಿಗಳನ್ನು ಎದುರಿಸಲಿಲ್ಲ. ಆದರೆ ಇದು ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವುದನ್ನು ತಪ್ಪಿಸಿತ್ತು.
ಪ್ರತಿಪಕ್ಷ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ(BNP)ಯ ನಾಯಕರ ಬಂಧನದಿಂದ ರೊಚ್ಚಿಗೆದ್ದಿದ್ದ ಪಕ್ಷದ ಕಾರ್ಯಕರ್ತರು, ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದರು. ಚುನಾವಣೆಯಲ್ಲಿ ಭಾಗವಹಿಸದಂತೆ ಕೂಡ ಕರೆ ನೀಡಿದ್ದರು.
ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶೇಖ್ ಹಸೀನಾ, “ಬಿಎನ್‌ಪಿ ಭಯೋತ್ಪಾದಕ ಸಂಘಟನೆಯಾಗಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಮುಂದುವರೆಯಬೇಕು ಎಂದು ಖಚಿತಪಡಿಸಿಕೊಳ್ಳಲು ನಾನು ನನ್ನ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇನೆ” ಎಂದು ಹೇಳಿದ್ದರು.
ಚುನಾವಣೆ ಘೋಷಿಸಲಾದ ಒಟ್ಟು 300 ಸ್ಥಾನಗಳ ಪೈಕಿ 223 ಸ್ಥಾನಗಳಲ್ಲಿ, ಹಸೀನಾ ಅವರ ಅವಾಮಿ ಲೀಗ್ ಮತ್ತು ಅವರ ಮಿತ್ರ ಪಕ್ಷವು ಒಂಬತ್ತು ಸ್ಥಾನಗಳನ್ನು ಗೆದ್ದಿದೆ ಎಂದು ಬಾಂಗ್ಲಾದ ಖಾಸಗಿ ಸುದ್ದಿ ಪ್ರಸಾರಕ ಸೊಮೊಯ್ ಟಿವಿ ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಬಿಲ್ಕಿಸ್ ಬಾನೊ ಅರ್ಜಿ ಎತ್ತಿ ಹಿಡಿದು ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
76 ವರ್ಷದ ಶೇಖ್ ಹಸೀನಾ ಗೋಪಾಲಗಂಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಹಸೀನಾ 249,965 ಮತಗಳನ್ನು ಪಡೆದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಮತ್ತು ಬಾಂಗ್ಲಾದೇಶ ಸುಪ್ರೀಂ ಪಾರ್ಟಿಯ ಎಂ ನಿಜಾಮ್ ಉದ್ದೀನ್ ಲಷ್ಕರ್ ಕೇವಲ 469 ಮತಗಳನ್ನು ಪಡೆದಿದ್ದಾರೆ. ಗೋಪಾಲಗಂಜ್ ಡೆಪ್ಯುಟಿ ಕಮಿಷನರ್ ಮತ್ತು ಚುನಾವಣಾ ಅಧಿಕಾರಿ ಖಾಝಿ ಮೆಹಬೂಬೂಲ್ ಆಲಂ ಈ ಫಲಿತಾಂಶವನ್ನು ಪ್ರಕಟಿಸಿದರು. ಶೇಖ್ ಹಸೀನಾ ಅವರು 1986 ರಿಂದ ಎಂಟು ಬಾರಿ ಗೋಪಾಲಗಂಜ್ ಕ್ಷೇತ್ರದಿಂದ ಗೆದ್ದಿದ್ದಾರೆ.
ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರು ಹಸೀನಾ ಅವರ ಪಕ್ಷಕ್ಕಾಗಿ ತಮ್ಮ ಸ್ಥಾನವನ್ನು ಗೆದ್ದಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾರಿಯ ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಶಕೀಬ್ ಅಲ್ ಹಸನ್ ರಾಜಕೀಯ ಪ್ರವೇಶಿಸಿದ್ದರು.
ಆಡಳಿತಾರೂಢ ಪಕ್ಷ ಹವಾಮಿ ಲೀಗ್ನಿಂದ ಮಗೂರು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅದರಂತೆ ಇದೀಗ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ತಮ್ಮ ಸಮೀಪದ ಸ್ಪರ್ಧಿ ಖಾಜಿ ರೆಜಾಲ್ ಹುಸೇನ್ ವಿರುದ್ಧ 1,50,000 ಮತಗಳ ಭಾರೀ ಬಹುಮತದಿಂದ ಜಯಗಳಿಸಿದ್ದಾರೆ.
2009ರಿಂದ ಬಾಂಗ್ಲಾದೇಶವನ್ನು ಆಳುತ್ತಿರುವ ಶೇಖ್ ಹಸೀನಾ
2009ರಿಂದ ಬಾಂಗ್ಲಾದೇಶವನ್ನು ಆಳುತ್ತಿರುವ ಶೇಖ್ ಹಸೀನಾ, ಏಕಪಕ್ಷೀಯ ಚುನಾವಣೆಯಲ್ಲಿ ದಾಖಲೆಯ 5ನೇ ಅವಧಿಗೆ ಅಧಿಕಾರದ ಗದ್ದುಗೆ ಏರುವ ಮೂಲಕ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಈ ಗೆಲುವಿನೊಂದಿಗೆ ಹಸೀನಾ ಅವರು ಸ್ವಾತಂತ್ರ್ಯದ ನಂತರ ಬಾಂಗ್ಲಾದಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.