ಗಾಜಾದಲ್ಲಿ ಇಸ್ರೇಲ್ ಪಡೆ ವಾಯು ದಾಳಿ ಹಾಗೂ ಗುಂಡಿನ ದಾಳಿ ನಡೆಸಿದ ಪರಿಣಾಮ ಆಹಾರದ ನೆರವು ಪಡೆದುಕೊಳ್ಳಲು ಕಾಯುತ್ತಿದ್ದ 45 ಮಂದಿ ಸೇರಿ 94 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಅಲ್ಲದೆ, ದಕ್ಷಿಣ ಗಾಜಾದಲ್ಲಿ ಸ್ಥಳಾಂತರಗೊಂಡ ಜನರು ರಾತ್ರಿಯ ವೇಳೆ ನಿದ್ರಿಸುತ್ತಿದ್ದ ಸಮಯದಲ್ಲಿ ಟೆಂಟ್ ಶಿಬಿರದ ಮೇಲೆ ನಡೆದ ದಾಳಿಗೆ 12 ವರ್ಷದೊಳಗಿನ ಕನಿಷ್ಠ ಆರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 13 ಮಂದಿ ಸಾವನ್ನಪ್ಪಿದ್ದಾರೆ.
ನಗರದಲ್ಲಿ ಸ್ಥಳಾಂತರಗೊಂಡ ಜನರಿಗೆ ಆಶ್ರಯ ನೀಡಿದ್ದ ಶಾಲೆಯ ಮೇಲೆ ನಡೆದ ಪ್ರತ್ಯೇಕ ದಾಳಿಯಲ್ಲಿ 15 ಜನರು ಮೃತಪಟ್ಟಿದ್ದಾರೆ. ನೆರವು ಪಡೆಯುವ ವೇಳೆ ದಿನನಿತ್ಯ ನಡೆಸುವ ಗುಂಡಿನ ದಾಳಿಯಲ್ಲಿ ಹೆಚ್ಚಿನ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪುತ್ತಿದ್ದಾರೆಂದು ತಿಳಿಸಲಾಗಿದೆ.
ಗಾಜಾ ಪಟ್ಟಿಯ ಜನರಿಗೆ ಆಹಾರ ಒದಗಿಸಲು ಅಮೆರಿಕನ್ ಸಂಘಟನೆಯಾದ ಗಾಜಾ ಮಾನವೀಯ ಪ್ರತಿಷ್ಠಾನ(ಜಿಎಚ್‌ಎಫ್) ಕಾರ್ಯ ನಿರ್ವಹಿಸುತ್ತಿದೆ. ಪ್ರತಿಷ್ಠಾನದಿಂದ ಆಹಾರ ವಿತರಣಾ ತಾಣಗಳಿಗೆ ಹೋಗುವ ರಸ್ತೆಗಳಲ್ಲಿ ಗುಂಡಿನ ದಾಲಿ ನಡೆದ ಪರಿಣಾಮ ಐವರು ಸಾವನ್ನಪ್ಪಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸೈಬರ್ ಅಪರಾಧ ಕುರಿತು ಜನ ಜಾಗೃತರಾಗಬೇಕಿದೆ
ಗಾಜಾದ ಸುತ್ತಮುತ್ತಲಿನ ಹಲವಾರು ಸ್ಥಳಗಳಲ್ಲಿ ವಿಶ್ವಸಂಸ್ಥೆಯ ನೆರವು ಸಾಗಿಸುವ ಟ್ರಕ್‌ಗಳಿಗಾಗಿ ಕಾಯುತ್ತಿದ್ದಾಗ 40 ಜನರು ಸಾವನ್ನಪ್ಪಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಎಚ್‌ಎಫ್ ತಾಣಗಳನ್ನು ತಲುಪಲು ಪ್ರಯತ್ನಿಸುತ್ತಿರುವ ಪ್ಯಾಲೆಸ್ತೀನಿಯನ್ನರ ಗುಂಪಿನ ಮೇಲೆ ಇಸ್ರೇಲಿ ಪಡೆಗಳು ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಗಾಜಾದ ಮಿಲಿಟರಿ-ಚಾಲಿತ ವಲಯಗಳ ಬಳಿ ಜನರು ಗುಂಪುಗೂಡಿದ್ದಾಗ, ವಿಶ್ವಸಂಸ್ಥೆಯ ಟ್ರಕ್‌ಗಳು ಪ್ರವೇಶಿಸಲು ಮುಂದಾದಾಗ ಇಸ್ರೇಲಿ ಪಡೆಗಳು ಗುಂಡು ಹಾರಿಸುತ್ತಿವೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿ ಆಹಾರ ವಿತರಣಾ ಸ್ಥಳಗಳ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದ ಪರಿಣಾಮ 500ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಮೃತಪಟ್ಟು, ನೂರಾರು ಮಂದಿ ಗಾಯಗೊಂಡಿದ್ದರು.
