ವಿಶ್ವದಲ್ಲಿ ನಡೆದ ಹಲವು ಯುದ್ಧಗಳನ್ನು ನಿಲ್ಲಿಸಿದ ಶ್ರೇಯಸ್ಸನ್ನು ನಿರಂತರವಾಗಿ ತಮ್ಮ ಮೇಲೆ ತಾವೇ ಹೇರಿಕೊಳ್ಳುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ” ಎಂದು ಪುನರುಚ್ಚಾರ ಮಾಡಿದ್ದಾರೆ. ಅಷ್ಟು ಮಾತ್ರವಲ್ಲದೆ ವಿಶ್ವದಾದ್ಯಂತ ಏಳು ಯುದ್ಧಗಳನ್ನು ತಾವು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ನಾನು ನಿಲ್ಲಿಸಿದ ಏಳು ಯುದ್ಧಗಳಲ್ಲಿ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿರುವ ದೇಶಗಳೊಂದಿಗೆ ಮಾತುಕತೆ ನಡೆಸುವ ವೇಳೆ ವ್ಯಾಪಾರ ನಿಲ್ಲಿಸುವ ಮತ್ತು ಸುಂಕ ಹೇರುವ ಬೆದರಿಕೆ ಹಾಕಿದೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಭಾರತ ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲಿದೆ ಎನ್ನಲಾಗುತ್ತಿದೆ: ಡೊನಾಲ್ಡ್ ಟ್ರಂಪ್
“ನನಗೆ ಸುಂಕಗಳು ಮತ್ತು ವ್ಯಾಪಾರ ಎಂಬ ಅಸ್ತ್ರವಿತ್ತು. ‘ನೀವು ಹೋರಾಡಲು ಹೋಗಿ ಎಲ್ಲರನ್ನೂ ಕೊಲ್ಲಲು ಬಯಸಿದರೆ, ಅದು ಸರಿ, ಆದರೆ ನೀವು ನಮ್ಮೊಂದಿಗೆ ವ್ಯಾಪಾರ ಮಾಡುವಾಗ ನಾನು ನಿಮಗೆ ಶೇಕಡ 100ರಷ್ಟು ಸುಂಕವನ್ನು ವಿಧಿಸುತ್ತೇನೆ’ ಎಂದು ಹೇಳಿದೆ. ಅವರೆಲ್ಲರೂ ಯುದ್ಧವನ್ನೇ ಕೈಬಿಟ್ಟರು” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
“ನಾನು ಈ ಎಲ್ಲಾ ಯುದ್ಧಗಳನ್ನು ನಿಲ್ಲಿಸಿದ್ದೇನೆ. ಆದರೆ ಅದರಲ್ಲಿ ದೊಡ್ಡ ಯುದ್ಧ ಭಾರತ ಮತ್ತು ಪಾಕಿಸ್ತಾನವಾಗಿರುತ್ತಿತ್ತು. ಭಾರತ ಮತ್ತು ಪಾಕಿಸ್ತಾನದೊಂದಿಗಿನ ಯುದ್ಧವು ಪರಮಾಣು ಯುದ್ಧದ ಮುಂದಿನ ಹಂತವಾಗಿತ್ತು. ಅವರು ಈಗಾಗಲೇ 7 ಜೆಟ್‌ಗಳನ್ನು ಹೊಡೆದುರುಳಿಸಿದ್ದರು. ನಾನು, ‘ನೀವು ವ್ಯಾಪಾರ ಮಾಡಲು ಬಯಸುತ್ತೀರಾ? ನೀವು ಹೋರಾಡುತ್ತಲೇ ಇದ್ದರೆ ನಾವು ನಿಮ್ಮೊಂದಿಗೆ ಯಾವುದೇ ವ್ಯಾಪಾರ ಅಥವಾ ಏನನ್ನೂ ಮಾಡುವುದಿಲ್ಲ. ಈ ಸಮಸ್ಯೆ ಪರಿಹರಿಸಲು ನಿಮಗೆ 24 ಗಂಟೆಗಳ ಕಾಲಾವಕಾಶವಿದೆ’ ಎಂದು ಹೇಳಿದೆ. ಅವರು, ‘ಸರಿ, ಇನ್ನು ಯುದ್ಧ ನಡೆಯುವುದಿಲ್ಲ’ ಎಂದು ಹೇಳಿದರು. ನಾನು ಅದನ್ನು ಹಲವು ಸಂದರ್ಭಗಳಲ್ಲಿ ಹೇಳಿದ್ದೇನೆ” ಎಂದಿದ್ದಾರೆ.
ಆದರೆ ಟ್ರಂಪ್ ಯಾವ ದೇಶದ 7 ಜೆಟ್‌ಗಳು ಉರುಳಿದೆ? ಅಥವಾ ಎರಡೂ ದೇಶಗಳ ಜೆಟ್ ಉರುಳಿದೆಯೇ? ಎಂಬ ಬಗ್ಗೆ ಸ್ಪಷ್ಟಪಡಿಸಿಲ್ಲ.
ಇನ್ನು ಕಳೆದ ವಾರ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ಸೇರಿದಂತೆ ಆರು ಯುದ್ಧಗಳನ್ನು ಕೊನೆಗೊಳಿಸಿದ್ದೇನೆ ಎಂದು ಟ್ರಂಪ್ ಹೇಳಿದ್ದರು.
ಇನ್ನು ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಉಭಯ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವಿನ ನೇರ ಮಾತುಕತೆಯ ನಂತರ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಭಾರತ ನಿರಂತರವಾಗಿ ಹೇಳುತ್ತಾ ಬಂದಿದೆ. ಆದರೂ ಟ್ರಂಪ್ ಮಾತ್ರ ಯುದ್ಧ ನಿಲ್ಲಿಸಿದ್ದು ತಾವೇ ಎಂದು ಪದೇ ಪದೇ ಹೇಳುತ್ತಿದ್ದಾರೆ.
