ಬ್ರಿಕ್ಸ್ನ ಅಮೆರಿಕದ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ದೇಶಗಳಿಗೆ ಹೆಚ್ಚುವರಿಯಾಗಿ ಶೇ. 10 ರಷ್ಟು ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಟ್ರುತ್ ಸೋಶಿಯಲ್ನಲ್ಲಿ ಪೋಸ್ಟ್ನಲ್ಲಿ ಹೇಳಿಕೆ ನೀಡಿರುವ ಟ್ರಂಪ್, ” ಬ್ರಿಕ್ಸ್ನ ಅಮೇರಿಕದ ವಿರೋಧಿ ನೀತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವುದೇ ದೇಶಕ್ಕೆ ಹೆಚ್ಚುವರಿಯಾಗಿ ಶೇ. 10 ಸುಂಕ ವಿಧಿಸಲಾಗುತ್ತದೆ. ಈ ನೀತಿಗೆ ಯಾವುದೇ ವಿನಾಯಿತಿ ಇರುವುದಿಲ್ಲ” ಎಂದು ಹೇಳಿದ್ದಾರೆ.
ಟ್ರಂಪ್ ತಮ್ಮ ಪೋಸ್ಟ್ನಲ್ಲಿ “ಅಮೆರಿಕನ್ ವಿರೋಧಿ ನೀತಿಗಳು” ಎಂಬ ಉಲ್ಲೇಖವನ್ನು ಸ್ಪಷ್ಟಪಡಿಸಿಲ್ಲ. ಮೂಲ ಬ್ರಿಕ್ಸ್ ಗುಂಪು 2009 ರಲ್ಲಿ ನಡೆದ ತನ್ನ ಮೊದಲ ಶೃಂಗಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ ಮತ್ತು ಚೀನಾದ ನಾಯಕರನ್ನು ಒಟ್ಟುಗೂಡಿಸಿತು. ನಂತರ ಈ ಬಣವು ದಕ್ಷಿಣ ಆಫ್ರಿಕಾವನ್ನು ಸೇರಿಸಿಕೊಂಡಿತು. ಕಳೆದ ವರ್ಷ ಈಜಿಪ್ಟ್, ಇಥೋಪಿಯಾ, ಇಂಡೋನೇಷ್ಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳನ್ನು ಸದಸ್ಯರನ್ನಾಗಿ ಮಾಡಿಕೊಂಡಿತು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮೋದಿ ‘ಅಚ್ಛೇ ದಿನ’ದಲ್ಲಿ ಸಾಮಾನ್ಯರಿಗೆ ಸಾಲದ ಹೊರೆ
ಬ್ರಿಕ್ಸ್ ನಾಯಕರು ಬ್ರೆಜಿಲ್ನ “ರಿಯೊ ಡಿ ಜನೈರೊ ಘೋಷಣೆ”ಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ಅಮೆರಿಕವು ವಿವೇಚನಾರಹಿತವಾಗಿ ಸುಂಕಗಳನ್ನು ಹೆಚ್ಚಿಸುವುದು ಜಾಗತಿಕ ವ್ಯಾಪಾರವನ್ನು ದುರ್ಬಲಗೊಳಿಸುವ ಬೆದರಿಕೆಯಾಗಿದೆ. ಸುಂಕಗಳ ಅನಿಯಂತ್ರಿತ ಏರಿಕೆಯು ಜಾಗತಿಕ ವ್ಯಾಪಾರವನ್ನು ಮತ್ತಷ್ಟು ಕಡಿಮೆ ಮಾಡುತ್ತದೆ. ಅಲ್ಲದೆ ಜಾಗತಿಕ ಪೂರೈಕೆ ಸರಪಳಿಗಳನ್ನು ಅಡ್ಡಿಪಡಿಸುವುದಲ್ಲದೆ ಅಂತಾರಾಷ್ಟ್ರೀಯ ಆರ್ಥಿಕ ಮತ್ತು ವ್ಯಾಪಾರ ಚಟುವಟಿಕೆಗಳಲ್ಲಿ ಅನಿಶ್ಚಿತತೆಯನ್ನು ಉಂಟುಮಾಡುತ್ತದೆ ” ಎಂದು ಬ್ರಿಕ್ಸ್ ನಾಯಕರು ಹೇಳಿಕೆ ನೀಡಿದ್ದಾರೆ.
ಬ್ರಿಕ್ಸ್ ಈಗ ಒಂದು ಬಲಿಷ್ಠ ಅಂತಾರಾಷ್ಟ್ರೀಯ ಒಕ್ಕೂಟವಾಗಿ ನಿಂತಿದೆ. ವಿಶ್ವದ ಜನಸಂಖ್ಯೆಯ ಸುಮಾರು ಅರ್ಧದಷ್ಟು (ಶೇಕಡಾ 49.5), ಜಾಗತಿಕ ಜಿಡಿಪಿಯ ಸುಮಾರು ಶೇಕಡ 40 ಮತ್ತು ಜಾಗತಿಕ ವ್ಯಾಪಾರದ ಸರಿಸುಮಾರು ಶೇಕಡ 26 ರಷ್ಟನ್ನು ಹೊಂದಿರುವ 11 ಉದಯೋನ್ಮುಖ ಆರ್ಥಿಕತೆ ಹೊಂದಿರುವ ರಾಷ್ಟ್ರಗಳನ್ನು ಒಂದುಗೂಡಿಸುತ್ತದೆ.
