ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಸರ್ಕಾರವು ವಿಧಿಸಿರುವ ವಿದೇಶಿ ಪತ್ರಕರ್ತರ ನಿರ್ಬಂಧವನ್ನು ತೆಗೆದುಹಾಕಿ ತಕ್ಷಣವೇ ವಿದೇಶಿ ಮಾಧ್ಯಮಗಳಿಗೆ ಅನುಮತಿ ನೀಡಬೇಕು ಎಂದು ಪತ್ರಕರ್ತರ ಹಕ್ಕುಗಳು ಮತ್ತು ರಕ್ಷಣೆಗಾಗಿ ವಾದಿಸುವ ಅಂತರಸರ್ಕಾರಿ ಸಂಸ್ಥೆ ಮೀಡಿಯಾ ಪ್ರೀಡಂ ಕೋಯಲಿಶನ್ ಒಕ್ಕೂಟವು ಆಗ್ರಹಿಸಿದೆ. ಫ್ರಾನ್ಸ್, ಜರ್ಮನಿ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಬೆಲ್ಜಿಯಂ ಮತ್ತು ಜಪಾನ್ ಸೇರಿದಂತೆ 27 ದೇಶಗಳು ಈ ಹೇಳಿಕೆಯನ್ನು ಬೆಂಬಲಿಸಿ ಸಹಿ ಮಾಡಿವೆ.
ಈ ಒಕ್ಕೂಟವು 51 ದೇಶಗಳನ್ನು ಒಳಗೊಂಡಿದ್ದು ಭಾರತವು ಈ ಒಕ್ಕೂಟದಲ್ಲಿ ತನ್ನ ಸದಸ್ಯತ್ವ ಹೊಂದಿಲ್ಲದ ಕಾರಣ ಸಹಿ ಹಾಕುವ ಅವಕಾಶವನ್ನು ಹೊಂದಿಲ್ಲ. ಆದರೆ ಅಮೆರಿಕವು ಒಕ್ಕೂಟದ ಸದಸ್ಯತ್ವ ಹೊಂದಿದ್ದರೂ ಸಹಿ ಮಾಡಿಲ್ಲ.
ಇದನ್ನು ಓದಿದ್ದೀರಾ? ಮೈಸೂರು | ಇಸ್ರೆಲ್ ವಿರುದ್ಧ ಪ್ರತಿಭಟನೆಗೆ ಅನುಮತಿ ನಿರಾಕರಣೆ; ಎಸ್‌ಡಿಪಿಐ ಖಂಡನೆ
“ಗಾಝಾದಲ್ಲಿ ನಡೆಯತ್ತಿರುವ ನಿರಂತರ ಇಸ್ರೇಲ್ ದಾಳಿ ಮತ್ತಷ್ಟು ಬಿಗು ವಾತಾವರಣ ಹಾಗೂ ದೀರ್ಘಕಾಲದ ಬರಗಾಲವನ್ನು ಸೃಷ್ಟಿ ಮಾಡಿದೆ. ಪತ್ರಕರ್ತರು ಮತ್ತು ಮಾಧ್ಯಮಗಳು ಯುದ್ಧದ ಅಮಾನವೀಯ ವಾಸ್ತವತೆಯನ್ನು ತೆರೆದಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಪರಿಣಾಮಕಾರಿಯಾಗಿ ತನ್ನ ಕೆಲಸ ನಿರ್ವಹಿಸಬೇಕಾದರೆ ಯುದ್ಧ ವಲಯಗಳಿಗೆ ಮಾಧ್ಯಮಗಳಿಗೆ ಮುಕ್ತ ಪ್ರವೇಶದ ಅಗತ್ಯವಿದೆ” ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
“ಆದರೆ ಇಸ್ರೇಲ್ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಂಡು ಮಾಧ್ಯಮಗಳ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧ ಮತ್ತು ಪತ್ರಕರ್ತರ ಮೇಲೆ ನಡೆದ ದಾಳಿಯನ್ನು ವಿರೋಧಿಸುತ್ತೇವೆ. ಪತ್ರಕರ್ತರಿಗೆ ಪ್ರವೇಶ ಹಾಗೂ ರಕ್ಷಣೆಯನ್ನು ನೀಡಬೇಕು” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿದ್ದೀರಾ? ಗಾಝಾದಲ್ಲಿ ಕ್ಷಾಮ ಉಲ್ಬಣ: ಸುತ್ತಲಿನ ಪ್ರದೇಶಗಳಿಗೂ ಬರ ಪರಿಸ್ಥಿತಿ ಸಾಧ್ಯತೆ
“ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರ ವಿರುದ್ಧ ನಡೆಸಲಾಗುವ ಎಲ್ಲಾ ಹಿಂಸಾಚಾರಗಳನ್ನು, ಸಾವು-ನೋವುಗಳು, ಬಂಧನಗಳನ್ನು ನಾವು ಬಲವಾಗಿ ಖಂಡಿಸುತ್ತೇವೆ. ಗಾಝಾ, ಇಸ್ರೇಲ್, ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೆಮ್‌ನಲ್ಲಿರುವ ಸ್ಥಳೀಯ ಮತ್ತು ವಿದೇಶಿ ಮಾಧ್ಯಮ ಕಾರ್ಯಕರ್ತರು ತಮ್ಮ ಕೆಲಸವನ್ನು ಮುಕ್ತವಾಗಿ ಮತ್ತು ಸುರಕ್ಷಿತವಾಗಿ ನಡೆಸುವಲ್ಲಿ ಇಸ್ರೇಲ್ ಸರ್ಕಾರ ಮತ್ತು ಅಧಿಕಾರಿಗಳು ಎಲ್ಲಾ ರೀತಿಯ ಕಾನೂನು ರಕ್ಷಣೆ ನೀಡಬೇಕು” ಎಂದು ಮೀಡಿಯಾ ಪ್ರೀಡಂ ಕೋಯಲಿಶನ್ ಒಕ್ಕೂಟ ಒತ್ತಾಯಿಸಿದೆ.
ಈ ಎರಡು ವರ್ಷಗಳಲ್ಲಿ ಕನಿಷ್ಟ 192 ಪತ್ರಕರ್ತರು ಹಾಗೂ ಮಾಧ್ಯಮ ಕಾರ್ಯಕರ್ತರ ಮಾರಣಹೋಮ ನಡೆದಿದೆ. ಸಾವನ್ನಪ್ಪಿದ ಪತ್ರಕರ್ತರಲ್ಲಿ ಬಹುತೇಕರು ಪ್ಯಾಲೆಸ್ತೀನಿರಾಗಿದ್ದರು ಎಂದು ಕಮಿಟಿ ಟು ಪ್ರೊಟೆಕ್ಟ್ ಹೇಳಿಕೆ ನೀಡಿದೆ.
