ಪಪುವಾ ನ್ಯೂಗಿನಿಯಾ ದೇಶದಲ್ಲಿ ಭೂಕುಸಿತವುಂಟಾಗಿ 670ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಅಂದಾಜಿಸಿದೆ.
ವಿಶ್ವಸಂಸ್ಥೆಯ ವಲಸಿಗ ಸಂಸ್ಥೆ ಯೋಜನೆಯ ಮುಖ್ಯಸ್ಥ ಸೆರಾನ್ ಅಕ್ಟೋಪ್ರಾಕ್, ಯಂಬಾಲಿ ಮತ್ತು ಎಂಗಾ ಪ್ರಾಂತ್ಯದ ಅಂಕಿಅಂಶಗಳ ಆಧಾರದ ಮೇಲೆ ಭೂಕುಸಿತದಿಂದ 150ಕ್ಕೂ ಹೆಚ್ಚು ಮನೆಗಳು ನೆಲಸಮಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಮೊದಲು 60 ಮನೆಗಳು ಮಾತ್ರ ನೆಲಸಮಗೊಂಡಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ 670ಕ್ಕೂ ಹೆಚ್ಚು ಮಂದಿ ಮಣ್ಣಿನೊಳಗೆ ಹೂತುಹೋಗಿದ್ದಾರೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಸಾವಿನ ಸಂಖ್ಯೆ 100 ದಾಟಿರಬಹುದು ಎಂದು ಈ ಮೊದಲು ಅಂದಾಜಿಸಿದ್ದರು. ಭಾನುವಾರದವರೆಗೂ 6 ಮೃತದೇಹಗಳನ್ನು ಮಾತ್ರ ಹೊರತೆಗೆಯಲಾಗಿದೆ.
ಪಪುವಾ ನ್ಯೂಗಿನಿಯಾದ ತುರ್ತು ನಿರ್ವಹಣ ಘಟಕದ ಅಧಿಕಾರಿಗಳು ಬದುಕುಳಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ಪಪುವಾ ನ್ಯೂಗಿನಿಯಾ ಸರ್ಕಾರ ಹೆಚ್ಚಿನ ಅಂತಾರಾಷ್ಟ್ರೀಯ ನೆರವಿಗಾಗಿ ಅಧಿಕೃತ ಮನವಿ ಅಗತ್ಯವಿದೆಯೆ ಎಂಬುದನ್ನು ಪರಿಗಣಿಸುತ್ತಿದೆ.
ಭೂಕುಸಿತವುಂಟಾಗಿರುವ ಪ್ರದೇಶಗಳ ಅವಶೇಷಗಳಡಿ ಇನ್ನು ಹಲವರು ಬದುಕುಳಿದಿರುವ ಸಂಭವವಿದ್ದು,ಕುಟುಂಬದ ಸದಸ್ಯರು ತಮ್ಮವರ ರಕ್ಷಣೆಗಾಗಿ ಅಳಲು ತೋಡಿಕೊಂಡಿದ್ದಾರೆ ಎಂದು ಸೆರಾನ್ ಅಕ್ಟೋಪ್ರಾಕ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕಾಣೆಯಾದ ಮಹಿಳೆಯರು ಮತ್ತು ಸಾಮಾಜಿಕ ವಿಡಂಬನೆ
ಪರಿಹಾರ ಕೇಂದ್ರಗಳು ಹಾಗೂ ಅವಶೇಷಗಳನ್ನು ಸಂಗ್ರಹಿಸಲು ನಾಲ್ಕು ಫುಟ್‌ಬಾಲ್ ಮೈದಾನಗಳನ್ನು ಬಳಸಿಕೊಳ್ಳಲಾಗಿದೆ. ಅವಶೇಷಗಳಡಿ ಕೆಲಸ ನಿರ್ವಹಿಸುವುದು ಅತ್ಯಂತ ಅಪಾಯಕಾರಿಯಾದ ಕೆಲಸವಾಗಿದ್ದು,ಭೂಕುಸಿತವು ಇನ್ನೂ ಮುಂದುವರೆಯುತ್ತಿದೆ ಎಂದು ಸೆರಾನ್ ಅಕ್ಟೋಪ್ರಾಕ್ ಹೇಳಿದ್ದಾರೆ.
ಭೂಕುಸಿತಗೊಂಡಿರುವ ಪ್ರದೇಶಗಳಿಗೆ ಆಹಾರ, ನೀರು ಹಾಗೂ ಇತರ ಅಗತ್ಯ ಸೌಕರ್ಯಗಳನ್ನು 60 ಕಿ.ಮೀ ದೂರವಿರುವ ಪಪುವಾ ನ್ಯೂಗಿನಿಯಾ ರಾಜಧಾನಿ ವಬಾಗ್‌ನಿಂದ ಸೇನೆಯ ಭದ್ರತೆಯೊಂದಿಗೆ ರವಾನಿಸಲಾಗುತ್ತಿದೆ.
