2008ರ 26/11 ಮುಂಬೈ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಉಗ್ರ, ಪಾಕಿಸ್ತಾನಿ-ಕೆನಡಾ ಪ್ರಜೆ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಶನಿವಾರ ದಾರಿ ಮಾಡಿಕೊಟ್ಟಿದೆ. ಉಗ್ರ ರಾಣಾ ಗಡಿಪಾರಿಗೆ ಅಮೆರಿಕ ಸುಪ್ರೀಂ ಅಸ್ತು ಎಂದಿದೆ.
ರಾಣಾ ಪ್ರಸ್ತುತ ಲಾಸ್ ಏಂಜಲೀಸ್‌ನಲ್ಲಿ ಬಂಧನಕ್ಕೊಳಗಾಗಿದ್ದು, ಆತನ ಹಸ್ತಾಂತರಕ್ಕಾಗಿ ಕಾಯಲಾಗುತ್ತಿತ್ತು. ಮುಂಬೈ ದಾಳಿಯಲ್ಲಿ ರಾಣಾ ಪಾತ್ರದ ಬಗ್ಗೆ ವಿಚಾರಣೆ ನಡೆಸಲು ಭಾರತ ಪ್ರಯತ್ನಿಸುತ್ತಿದೆ. ನವೆಂಬರ್ 13ರಂದು, ರಾಣಾ ಯುಎಸ್ ಸುಪ್ರೀಂ ಕೋರ್ಟ್‌ನಲ್ಲಿ ‘ಸರ್ಟಿಯೊರಾರಿ ರಿಟ್ ಅರ್ಜಿ’ ಸಲ್ಲಿಸಿದ್ದು ‘ಅರ್ಜಿ ನಿರಾಕರಿಸಲಾಗಿದೆ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಟಿಯೊರಾರಿ ಮೂಲಭೂತವಾಗಿ ಕೆಳ ನ್ಯಾಯಾಲಯದ ತೀರ್ಪನ್ನು ಪರಿಶೀಲಿಸುವಂತೆ ಕೋರುವ ಅರ್ಜಿ ಆಗಿದೆ.
ಇದನ್ನು ಓದಿದ್ದೀರಾ? 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್‌ನನ್ನು ಹಸ್ತಾಂತರಿಸಲು ಪಾಕ್‌ಗೆ ಭಾರತ ಮನವಿ
ವಿವಿಧ ಕಾನೂನು ಮಾರ್ಗಗಳ ಮೂಲಕ ತನ್ನ ಹಸ್ತಾಂತರವನ್ನು ಪ್ರಶ್ನಿಸಿದ್ದ ರಾಣಾ ಕೊನೆಯ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಈ ಹಿಂದೆ ಯುಎಸ್ ಕೋರ್ಟ್ ಆಫ್ ಅಪೀಲ್ಸ್ ಸೇರಿದಂತೆ ಫೆಡರಲ್ ಕೋರ್ಟ್ ಕೂಡಾ ರಾಣಾ ಅರ್ಜಿ ತಿರಸ್ಕರಿಸಿದೆ.
63 ವರ್ಷದ ರಾಣಾ ತಾಯಿ ಅಮೆರಿಕನ್ ಆಗಿದ್ದು, ತಂದೆ ಪಾಕಿಸ್ತಾನಿ. ಈತ ಅಮೆರಿಕದ ಪ್ರಜೆ, ಉಗ್ರ ಡೇವಿಡ್ ಹೆಡ್ಲಿಯ ಬಾಲ್ಯದ ಸ್ನೇಹಿತ ಎನ್ನಲಾಗಿದೆ. ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ 2009ರ ಅಕ್ಟೋಬರ್‌ನಲ್ಲಿ ಅಮೆರಿಕದ ಅಧಿಕಾರಿಗಳು ಬಂಧಿಸಿದ್ದು 35 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಇದನ್ನು ಓದಿದ್ದೀರಾ? ಮೋದಿಯ ಇಂದಿನ ಸುಳ್ಳುಗಳು | ಮುಂಬೈ ದಾಳಿ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಲಿಲ್ಲವೇ? ವಾಸ್ತವ ಏನು?
2009ರ ಅಕ್ಟೋಬರ್‌ನಲ್ಲಿ ಹೆಡ್ಲಿಯನ್ನು ಚಿಕಾಗೋದ ಓ’ಹೇರ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ ಕೆಲವು ಸಮಯದ ನಂತರ ರಾಣಾನನ್ನು ಅಮೆರಿಕದ ಪೊಲೀಸರು ಬಂಧಿಸಿದರು. ಭಾರತದ ಮೇಲಿನ ದಾಳಿಗೆ ಎಲ್‌ಇಟಿಗೆ ಬೆಂಬಲ ನೀಡಿದ ಮತ್ತು 2005ರಲ್ಲಿ ಪ್ರವಾದಿ ವ್ಯಂಗ್ಯಚಿತ್ರ ಪ್ರಕಟಿಸಿದ ಜಿಲ್ಯಾಂಡ್ಸ್-ಪೋಸ್ಟನ್ ಎಂಬ ಡ್ಯಾನಿಶ್ ಪತ್ರಿಕೆಯ ಮೇಲೆ ದಾಳಿ ನಡೆಸಲು ಸಂಚು ರೂಪಿಸಲು ಬೆಂಬಲಿಸಿದ ಕಾರಣ 2011ರಲ್ಲಿ ಚಿಕಾಗೋದಲ್ಲಿ ಆತನನ್ನು ದೋಷಿ ಎಂದು ಘೋಷಿಸಲಾಗಿದೆ. ಆದರೆ ಮುಂಬೈ ದಾಳಿಯ ಗಂಭೀರ ಆರೋಪದಿಂದ ಅಮೆರಿಕದಲ್ಲಿ ನ್ಯಾಯಾಧೀಶರು ರಾಣಾನನ್ನು ಮುಕ್ತಗೊಳಿಸಿದ್ದರು.
2011ರಲ್ಲಿ ದಾಳಿಯ ಸಂಚು ರೂಪಿಸಿದ್ದಕ್ಕಾಗಿ ಮತ್ತು ದಾಳಿ ನಡೆಸಿದ್ದಕ್ಕಾಗಿ ಎನ್‌ಐಎ ರಾಣಾ ಸೇರಿದಂತೆ ಒಂಬತ್ತು ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. 2014ರಲ್ಲಿ ದೆಹಲಿಯ ಸೆಷನ್ಸ್ ನ್ಯಾಯಾಲಯವು ಈ ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತು. ಅವರನ್ನು ಎನ್‌ಐಎ ತಲೆಮರೆಸಿಕೊಂಡಿರುವವರೆಂದು ಪಟ್ಟಿ ಮಾಡಿತ್ತು. ಅಂತಿಮವಾಗಿ ಈಗ ಹಸ್ತಾಂತರ ಪ್ರಕ್ರಿಯೆಗೆ ಅಸ್ತು ದೊರೆತಿದೆ.
