ಆಫ್ರಿಕಾದ ಪೂರ್ವ ಕಾಂಗೋ ದೇಶದಲ್ಲಿ ಪ್ರಾಣಾಂತಿಕ ʼಎಬೋಲಾʼ ವೈರಸ್ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಅಲ್ಲಿನ ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ದಶಕಗಳ ಕಾಲ ನಡೆದ ಸಶಸ್ತ್ರ ಸಂಘರ್ಷಗಳಿಂದಾಗಿ ಮನೆ-ಮಠ ಕಳೆದುಕೊಂಡ ಸುಮಾರು ಹತ್ತು ಲಕ್ಷಕ್ಕೂ ಹೆಚ್ಚು ಜನರು ಇತುರಿ ಪ್ರಾಂತ್ಯದ ವಿವಿಧ ಶಿಬಿರಗಳಲ್ಲಿ ಗಿಜಿಗುಡುತ್ತಾ ವಾಸಿಸುತ್ತಿದ್ದಾರೆ. ಸದ್ಯ ಇತುರಿ ಪ್ರಾಂತ್ಯವೇ ಈ ಸಾಂಕ್ರಾಮಿಕ ರೋಗದ ಕೇಂದ್ರಬಿಂದುವಾಗಿದೆ. ಒಬ್ಬರಿಗೆ ಎಬೋಲಾ ಸೋಂಕು ತಗುಲಿದರೆ ಸಾವಿರಾರು ಮಂದಿ ಕುರಿಗಳಂತೆ ಸಾಯುತ್ತೇವೆ ಎಂದು ಅಲ್ಲಿನ ನಿರಾಶ್ರಿತರು ಕಣ್ಣೀರಿಡುತ್ತಿದ್ದಾರೆ.
ಇಲ್ಲಿನ ‘ಕಿಂಗೊಂಜೆ’ ಎಂಬ ನಿರಾಶ್ರಿತರ ಶಿಬಿರದಲ್ಲಿ 25,000ಕ್ಕೂ ಹೆಚ್ಚು ಜನರು ಸಣ್ಣ ಸಣ್ಣ ಟಾರ್ಪಲಿನ್ ಗುಡಾರಗಳಲ್ಲಿ ಬದುಕುತ್ತಿದ್ದಾರೆ. ಈ ಶಿಬಿರಕ್ಕೆ ಇದುವರೆಗೆ ಎಬೋಲಾ ಒಕ್ಕರಿಸದಿದ್ದರೂ, ಅಲ್ಲಿನ ಪರಿಸ್ಥಿತಿ ರೋಗ ಹರಡಲು ಪೂರಕವಾಗಿದೆ. ಏಕೆಂದರೆ, ಎಬೋಲಾ ವೈರಸ್ ಸೋಂಕಿತರ ನಿಕಟ ಸಂಪರ್ಕ ಮತ್ತು ದೇಹದ ಬೆವರಿನಂತಹ ದ್ರವಗಳ ಮೂಲಕ ಹರಡುತ್ತದೆ. ಆದರೆ ಶಿಬಿರದಲ್ಲಿರುವ ಜನರು ಕೇವಲ ಮೂರು ಚದರ ಮೀಟರ್ನಷ್ಟು ಚಿಕ್ಕ ಗುಡಾರಗಳಲ್ಲಿ ಒಟ್ಟಿಗೆ ಮಲಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೋಗದಿಂದ ಬದುಕಲು ಬೇಕಾದ ಕನಿಷ್ಠ ದೈಹಿಕ ಅಂತರವನ್ನು ಕಾಯ್ದುಕೊಳ್ಳುವುದು ಇಲ್ಲಿ ಯಾರಿಗೂ ಸಾಧ್ಯವಾಗುತ್ತಿಲ್ಲ.
ಇತುರಿ ಪ್ರಾಂತ್ಯವೊಂದರಲ್ಲೇ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಈ ಪ್ರಾಂತ್ಯವು ದೇಶದ ಅತ್ಯಂತ ಬಡ ಹಾಗೂ ಸಶಸ್ತ್ರ ಗುಂಪುಗಳ ಹಿಂಸಾಚಾರಕ್ಕೆ ಹೆಚ್ಚು ತುತ್ತಾಗಿರುವ ಪ್ರದೇಶವಾಗಿದೆ. ಈಗ ಇಲ್ಲಿನ ನಿರಾಶ್ರಿತರ ಶಿಬಿರಗಳಿಗೆ ಎಬೋಲಾ ಹರಡುವ ಸಾಧ್ಯತೆಯೇ ತೀವ್ರ ಆತಂಕ ಮೂಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಗೆಬ್ರೆಯೆಸಸ್, ಪೂರ್ವ ಡಿಆರ್ ಕಾಂಗೋ ಪ್ರಸ್ತುತ “ರೋಗ ಮತ್ತು ಸಂಘರ್ಷದ ಭೀಕರ ಘರ್ಷಣೆಯನ್ನು ಎದುರಿಸುತ್ತಿದೆ” ಎಂದು ಎಚ್ಚರಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಸಶಸ್ತ್ರ ಹೋರಾಟಗಳು ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಪ್ರಯತ್ನಗಳಿಗೆ ತಡೆಯೊಡ್ಡುತ್ತಿವೆ. ಅಧಿಕಾರಿಗಳ ಮೇಲೆ ತೀವ್ರ ಅಪನಂಬಿಕೆ ಹೊಂದಿರುವ ಮತ್ತು ವೈರಸ್ ಬಗ್ಗೆ ಹರಡುತ್ತಿರುವ ಸುಳ್ಳು ಮಾಹಿತಿಯನ್ನ ನಂಬುತ್ತಿರುವ ಪೀಡಿತ ಸಮುದಾಯಗಳ ಭಯವನ್ನು ದೂರ ಮಾಡುವುದು ಸದ್ಯ ಅತ್ಯಗತ್ಯ ಎಂದಿದ್ದಾರೆ. ಶನಿವಾರ ಬುನಿಯಾ ನಗರಕ್ಕೆ ಭೇಟಿ ನೀಡಿದ ಟೆಡ್ರೊಸ್, ಎಬೋಲಾ ಹರಡುವುದನ್ನು ತಡೆಯಲು ಹೆಚ್ಚಿನ ಅಂತಾರಾಷ್ಟ್ರೀಯ ನೆರವು ಮತ್ತು ಆರ್ಥಿಕ ಸಹಾಯಕ್ಕೆ ಕರೆ ನೀಡಿದ್ದಾರೆ.
ಜೊತೆಗೆ ಶಿಬಿರಗಳಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತಿದೆ. ಮಕ್ಕಳು ಗಲೀಜು ಶೌಚಾಲಯಗಳ ಪಕ್ಕದಲ್ಲೇ ಆಡುತ್ತಾರೆ ಮತ್ತು ಕೈ ತೊಳೆಯಲು ಕನಿಷ್ಠ ಸೋಪ್ ಕೂಡ ಜನರ ಬಳಿ ಇಲ್ಲ. ಇಡೀ ಶಿಬಿರಕ್ಕೆ ಕೇವಲ ಒಂದೇ ಒಂದು ಬೋರ್ವೆಲ್ ಇದ್ದು, ದಿನಕ್ಕೆ ಕೆಲವೇ ಗಂಟೆಗಳ ಕಾಲ ಮಾತ್ರ ನೀರು ಸಿಗುತ್ತದೆ. ಪ್ರಸ್ತುತ ಹರಡುತ್ತಿರುವ ಎಬೋಲಾದ ‘ಬುಂದಿಬುಗ್ಯೋ’ ತಳಿಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಇಲ್ಲದ ಕಾರಣ, ರೋಗ ಬಾರದಂತೆ ತಡೆಯುವುದೊಂದೇ ಸದ್ಯಕ್ಕಿರುವ ದಾರಿಯಾಗಿದೆ. ಆದರೆ, ತಮಗೆ ಜಾಗೃತಿ ಮೂಡಿಸಲು ಬರುವವರು ಕೇವಲ ಸಂದೇಶ ನೀಡುತ್ತಿದ್ದಾರೆಯೇ ವಿನಃ, ತಮ್ಮನ್ನು ರಕ್ಷಿಸಿಕೊಳ್ಳಲು ಬೇಕಾದ ಯಾವುದೇ ಮಾಸ್ಕ್ ಅಥವಾ ರಕ್ಷಣಾತ್ಮಕ ಕಿಟ್ಗಳನ್ನು ಸರ್ಕಾರ ಕೊಟ್ಟಿಲ್ಲ ಎಂದು ಅಲ್ಲಿನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಿಬಿರದ ಒಬ್ಬ ವ್ಯಕ್ತಿಗೆ ಈ ಸೋಂಕು ತಗುಲಿದರೂ ಇಡೀ ಶಿಬಿರವೇ ನಾಶವಾಗುತ್ತದೆ ಎಂಬ ಭೀತಿ ಜನರನ್ನು ಕಾಡುತ್ತಿದೆ.
ಇದನ್ನೂ ಓದಿ: ದೊಡ್ಡ ಆಲನಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರಿಗೆ ಕಾಫ್ಕಾನ ‘ಕಾಕ್ರೋಚ್’ಗಳಿಂದ ಒಂದು ಬಹಿರಂಗ ಪತ್ರ’
ಕಾಂಗೋ ಸರ್ಕಾರವು ಮೊದಲ ಪ್ರಕರಣ ಪತ್ತೆಯಾದ ಹಲವು ವಾರಗಳ ನಂತರ ಸಾಂಕ್ರಾಮಿಕ ರೋಗವನ್ನು ಘೋಷಿಸಿದ್ದರಿಂದ ಪರಿಸ್ಥಿತಿ ಕೈಮೀರುತ್ತಿದೆ. ಅಲ್ಲಿನ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಪ್ರತ್ಯೇಕವಾಗಿ ಇರಿಸಲು ಐಸೊಲೇಶನ್ ಗುಡಾರಗಳ ಕೊರತೆಯಿದೆ. ಈಗಾಗಲೇ ಈ ರೋಗಕ್ಕೆ ಕಾಂಗೋದಲ್ಲಿ 48 ಮತ್ತು ಉಗಾಂಡಾದಲ್ಲಿ ಒಬ್ಬರು ಬಲಿಯಾಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಈ ಪರಿಸ್ಥಿತಿಯನ್ನು ‘ಯುದ್ಧ ಮತ್ತು ರೋಗದ ಭೀಕರ ಘರ್ಷಣೆ’ ಎಂದು ಕರೆದಿದ್ದು, ಈ ಪ್ರಾಂತ್ಯವನ್ನು ದೊಡ್ಡ ದುರಂತದಿಂದ ಪಾರು ಮಾಡಲು ಅಂತಾರಾಷ್ಟ್ರೀಯ ಸಮುದಾಯವು ತಕ್ಷಣವೇ ಹಣ ಹಾಗೂ ವೈದ್ಯಕೀಯ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.





