ಮ್ಯಾನ್ಮಾರ್‌ನಲ್ಲಿ ಅಲ್ಲಿನ ಸೇನೆಯು ಎರಡು ಪ್ರತ್ಯೇಕ ದಿನಗಳಲ್ಲಿ ನಡೆಸಿದ ಭೀಕರ ವೈಮಾನಿಕ ದಾಳಿಗಳಲ್ಲಿ ಮಕ್ಕಳು ಸೇರಿದಂತೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವಿರೋಧ ಪಕ್ಷದ ಗುಂಪುಗಳು, ರಕ್ಷಣಾ ಅಧಿಕಾರಿಗಳು ಆರೋಪಿಸಿವೆ ಹಾಗೂ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
2021ರ ಫೆಬ್ರವರಿ 1ರಂದು ಆಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಮ್ಯಾನ್ಮಾರ್‌ನಲ್ಲಿ ಅಶಾಂತಿ ತಲೆದೋರಿದೆ. ಶಾಂತಿಯುತ ಪ್ರತಿಭಟನೆಗಳನ್ನು ಮಾರಣಾಂತಿಕ ಬಲಪ್ರಯೋಗದ ಮೂಲಕ ಹತ್ತಿಕ್ಕಿದ ನಂತರ ಸೇನಾ ಆಡಳಿತದ ವಿರೋಧಿಗಳು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿದ್ದು, ದೇಶದ ಬಹುಭಾಗ ಈಗ ಸಂಘರ್ಷದಲ್ಲಿ ಮುಳುಗಿದೆ.
ಪ್ರಜಾಪ್ರಭುತ್ವ ಪರ ಸಶಸ್ತ್ರ ಗುಂಪುಗಳು ಮತ್ತು ಜನಾಂಗೀಯ ಸಶಸ್ತ್ರ ಸಂಘಟನೆಗಳನ್ನು ಗುರಿಯಾಗಿಸಿಕೊಂಡು ಸೇನೆಯು ನಿರಂತರವಾಗಿ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದೆ. ಇಂತಹ ದಾಳಿಗಳಲ್ಲಿ ಸಾಮಾನ್ಯ ನಾಗರಿಕರು ಹೆಚ್ಚಾಗಿ ಬಲಿಯಾಗುತ್ತಿದ್ದಾರೆ.
ಈ ವರದಿಗಳ ಕುರಿತು ಮ್ಯಾನ್ಮಾರ್‌ನ ಸೇನಾ ಬೆಂಬಲಿತ ಸರ್ಕಾರ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಪ್ರತಿರೋಧ ಪಡೆಗಳನ್ನು ಭಯೋತ್ಪಾದಕರು ಎಂದು ಕರೆದಿರುವ ಸೇನೆಯು, ತಾನು ಕೇವಲ ಯುದ್ಧದ ನ್ಯಾಯಸಮ್ಮತ ಗುರಿಗಳ ಮೇಲೆ ಮಾತ್ರ ದಾಳಿ ನಡೆಸುವುದಾಗಿ ಈ ಹಿಂದೆ ಸಮರ್ಥಿಸಿಕೊಂಡಿತ್ತು.
ಇತ್ತೀಚಿನ ಈ ವೈಮಾನಿಕ ದಾಳಿಗಳು ಮದುವೆ ಸಮಾರಂಭ ನಡೆಯುತ್ತಿದ್ದ ಸ್ಥಳ, ಶಾಲೆಗಳು ಹಾಗೂ ಜನವಸತಿ ಪ್ರದೇಶಗಳ ಮೇಲೆ ನಡೆದಿವೆ. ಪೂರ್ವದ ಶಾನ್ ರಾಜ್ಯ, ಪಶ್ಚಿಮದ ರಾಖೈನ್ ಮತ್ತು ಮಧ್ಯ ಮಾಗ್ವೆ ಪ್ರದೇಶಗಳಲ್ಲಿ ನಡೆದ ಈ ದಾಳಿಗಳಲ್ಲಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕರೆನ್ನಿ ರಾಜ್ಯದ ಮಧ್ಯಂತರ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿ ಬನ್ಯಾ ಖುಂಗ್ ಆಂಗ್ ಅವರು ಭಾನುವಾರ ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ನವೆಂಬರ್ 28ರಂದು ಶಾನ್ ರಾಜ್ಯದ ಪೆಖೋನ್ ಟೌನ್‌ಶಿಪ್‌ನ ಲೆ ಕಿ ಲೋನ್ ಗ್ರಾಮದಲ್ಲಿ ಶಾಲೆ ಮತ್ತು ನಿರಾಶ್ರಿತರ ಶಿಬಿರದ ಬಳಿ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದಾಗ ಯುದ್ಧವಿಮಾನವು ಬಾಂಬ್‌ಗಳನ್ನು ಎಸೆದಿದೆ. ಈ ದಾಳಿಯಲ್ಲಿ ಮಕ್ಕಳು ಸೇರಿದಂತೆ 21 ನಾಗರಿಕರು ಸಾವನ್ನಪ್ಪಿದ್ದು, 30 ಮಂದಿ ಗಾಯಗೊಂಡಿದ್ದಾರೆ. ಆಕಾಶದಿಂದಾಗಲಿ ಅಥವಾ ನೆಲದಿಂದಾಗಲಿ ನೋಡಿದರೂ ಅದು ನಿರಾಶ್ರಿತರ ಶಿಬಿರ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ, ಆದರೂ ಉದ್ದೇಶಪೂರ್ವಕವಾಗಿ ಪದೇ ಪದೇ ಬಾಂಬ್ ದಾಳಿ ನಡೆಸುವುದು ಯುದ್ಧಾಪರಾಧವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದೇ ದಿನ ಅಂದರೆ ನವೆಂಬರ್ 28ರಂದು ಸಂಜೆ 4 ಗಂಟೆ ಮತ್ತು ರಾತ್ರಿ 8 ಗಂಟೆಗೆ ರಾಖೈನ್ ರಾಜ್ಯದ ಮ್ರಾಕ್-ಯು ಟೌನ್‌ಶಿಪ್‌ನ ಎರಡು ಜನವಸತಿ ವಾರ್ಡ್‌ಗಳ ಮೇಲೆ ನಡೆದ ಎರಡು ದಾಳಿಗಳಲ್ಲಿ ಕನಿಷ್ಠ 24 ಜನರು ಮೃತಪಟ್ಟಿದ್ದು, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ರಾಖೈನ್‌ನ ಹಿರಿಯ ರಕ್ಷಣಾ ಅಧಿಕಾರಿ ವಾಯ್ ಹುನ್ ಆಂಗ್ ತಿಳಿಸಿದ್ದಾರೆ.
ಮೃತದೇಹಗಳು ಛಿದ್ರಛಿದ್ರವಾಗಿರುವುದರಿಂದ ಅವುಗಳನ್ನು ಎಣಿಸಲು ಸಹ ಸಾಧ್ಯವಾಗುತ್ತಿಲ್ಲ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಮತ್ತು ಮೃತಪಟ್ಟವರೆಲ್ಲರೂ ಸಾಮಾನ್ಯ ನಾಗರಿಕರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ನವೆಂಬರ್ 26ರ ಮಧ್ಯಾಹ್ನ ಮಾಗ್ವೆಯ ಸಿನ್‌ಬೌಂಗ್ವೆ ಟೌನ್‌ಶಿಪ್‌ನ ಇನ್ ಯೋನ್ ಗ್ರಾಮದಲ್ಲಿ ಧಾರ್ಮಿಕ ಸಮಾರಂಭವೊಂದು ನಡೆಯುತ್ತಿದ್ದಾಗ ಶಾಲೆ ಮತ್ತು ಬೌದ್ಧ ವಿಹಾರವಿದ್ದ ಆವರಣದ ಮೇಲೆ ಯುದ್ಧವಿಮಾನ, ಫಿರಂಗಿ ಮತ್ತು ಡ್ರೋನ್‌ಗಳ ಮೂಲಕ ದಾಳಿ ನಡೆಸಲಾಗಿತ್ತು. ಸೇನಾ ಆಡಳಿತವನ್ನು ವಿರೋಧಿಸುವ ಪ್ರಮುಖ ಸಂಘಟನೆಯಾದ ರಾಷ್ಟ್ರೀಯ ಏಕತಾ ಸರ್ಕಾರ (ಎನ್‌ಯುಜಿ) ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಈ ದಾಳಿಯಲ್ಲಿ ಶಿಕ್ಷಕರು ಮತ್ತು ಮಕ್ಕಳು ಸೇರಿದಂತೆ ಸುಮಾರು 20 ನಾಗರಿಕರು ಹಾಗೂ ಒಂಬತ್ತು ಪ್ರಜಾಪ್ರಭುತ್ವ ಪರ ಹೋರಾಟಗಾರರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದರು..


