ಕಳೆದ ಕೆಲ ತಿಂಗಳುಗಳಿಂದ ಟಿವಿಗಳಲ್ಲಿ ಒಂದೇ ಸುದ್ದಿ- ‘ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿ’.. ಇದರ ಮುಂದೆ ಟಿಂ ಟಿಂ ಟಿಂ . “ಆಗ್ತಾರಾ? ಯಾವಾಗ ಆಗ್ತಾರೆ, ಆಗೋದೇ ಇಲ್ಲ, ಆಗಿಯೇ ಆಗ್ತಾರೆ, ಹೌದಂತೆ, ದೆಹಲಿಯ ಮೊಗಸಾಲೆಗಳಲ್ಲಿ ಹೀಗೆ ಕೇಳಲ್ ಪಡಲಾಯಿತು, ಹೇಳಲ್ ಪಡಲಾಯಿತು”, ಇತ್ಯಾದಿ, ಇತ್ಯಾದಿ…
ಮತ್ತೆ ಈಗ ಒಂದು ವಾರದಿಂದ- ”ಅವರು ಮನೆಯಿಂದ ಹೊರಟಿದ್ದು, ಟೆಂಪಲ್ ರನ್ ಮಾಡುತ್ತಿದ್ದು, ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದು, ದೆಹಲಿಗೆ ಹೋಗಿ ಬರಲಿದ್ದು, ಈ ನಾಯಕರ ಜೊತೆ ಕಾಣಿಸಿಕೊಂಡಿದ್ದು, ಆ ನಾಯಕರ ಜೊತೆಗೆ ಕಾಣಿಸಿಕೊಳ್ಳಲಾರದೆ ಇದ್ದಿದ್ದು, ಊಹಾಪೋಹಕ್ಕೆ ಕಾರಣ ಆಗಿದೆ,’’ ಇತ್ಯಾದಿ ಸುದ್ದಿ ಶುರು ಆಯಿತು. ಟಿವಿಯಲ್ಲಿ ಬಂದ ಮೇಲೆ ಊಹಾಪೋಹ ಆಯಿತೋ ಅಥವಾ ಊಹಾಪೋಹ ಇದ್ದಿದ್ದಕ್ಕೆ ಟಿವಿಯಲ್ಲಿ ಬಂತೋ, ಗೊತ್ತಿಲ್ಲ.
ಇಷ್ಟೆಲ್ಲಾ ಆದಮೇಲೆ ಅವರು ಯಾರು? ಅವರ ಸುತ್ತಿನವರು ಯಾರು? ಅವರ ಬಗ್ಗೆ ಸುದ್ದಿ ಮಾಡುತ್ತಿರುವವರು ಯಾರು? ಅವರ ಬಗ್ಗೆ ನನಗೆ ಎಲ್ಲಾ ಗೊತ್ತು ಅಂತ ಅಧಿಕಾರಯುತವಾಗಿ ಮಾತಾಡುತ್ತಿರುವವರು ಯಾರು? ಅಂತೆಲ್ಲಾ ನನ್ನ ತಲೆಯಲ್ಲಿ ವಿಚಾರ ಶುರು ಆಯಿತು.
ಅವರ ಬಗ್ಗೆ ಓದಿದ್ದು, ಕೇಳಿದ್ದು, ನೋಡಿದ್ದು, ಅವರನ್ನು ಕಂಡು ಮಾತಾಡಿದ್ದು, ಇವೆಲ್ಲ ನಿಧಾನವಾಗಿ ನೆನಪಾಗತೊಡಗಿತು. ಇದಕ್ಕೆಲ್ಲಾ ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಇಂಥವರ ರೂಪ – ರೇಖೆ?’, ಅಂತ ಅನ್ನಿಸತೊಡಗಿತು. ಹಾಗೆಯೇ, ಇವರಿಂದ ಏನೆಲ್ಲಾ ಕೇಳಬಹುದು? ಅಂತನೂ ಅನ್ನಿಸಿತು. ಅವರ ಫೇವರಿಟ್ ಆಗಬಹುದಾದ ಒಂದು ಹಾಡು ಕೂಡ ನೆನಪಾಯಿತು.
ಕೆಲ ತಿಂಗಳುಗಳ ಹಿಂದೆ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಅವರ ಒಂದು ಚಿತ್ರ ನೆನಪಾಯಿತು. ಅದು ವಿಶೇಷ ಅನ್ನಿಸಿ ಅದನ್ನು ಕಂಪ್ಯೂಟರ್ ನಲ್ಲಿ ಉಳಿಸಿಕೊಂಡಿದ್ದೆ. ಮಹಾನ್ ಬೆಂಗಳೂರು ಪ್ರಾಧಿಕಾರ ಎನ್ನುವ ಸರ್ಕಾರಿ ಸಂಸ್ಥೆ ರೂಪುಗೊಳ್ಳುವಾಗ ಅವರು ನಡೆಸಿದ ಸಭೆಯ ಚಿತ್ರ ಅದು. ಅಧ್ಯಕ್ಷರು ಮಧ್ಯದಲ್ಲಿ ಕುಳಿತು ಮಾತಾಡುತ್ತಿದ್ದಾರೆ, ಅವರ ಪಕ್ಕದಲ್ಲಿ ಆರು ಜನ ಹಿರಿಯ ಐಎಎಸ್ ಅಧಿಕಾರಿಗಳು ಸುಮ್ಮನೆ ಕುಳಿತು ಕೇಳುತ್ತಿದ್ದಾರೆ. ಅವರಲ್ಲಿ ಕೆಲವರು ಈ ರಾಜ್ಯ ಕಂಡ ಅತಿ ಪ್ರಾಮಾಣಿಕ, ದಕ್ಷ ಹಾಗೂ ನಿರ್ಭೀತ ಅಧಿಕಾರಿಗಳು.
ಈ ಚಿತ್ರದ ಬಗ್ಗೆ ಇನ್ನೊಬ್ಬ ಹಿರಿಯ ಅಧಿಕಾರಿಯ ಜೊತೆ ಮಾತಾಡಿದಾಗ ಅವರು “ಇದಕ್ಕೆ ಏನಂತಾರೆ ಗೊತ್ತಾ? ಅದಕ್ಕೆ ‘ಮಡೋನಾ ವಿದ್ಯಮಾನ’ ಅಂತಾರೆ, ಪಾಪ್ ಸಂಗೀತಗಾರ್ತಿ ಮಡೋನಾ ಅವರು ತಮಗಿಂತ ಹೆಚ್ಚು ಸಾಮರ್ಥ್ಯದ ಗಾಯಕ- ನೃತ್ಯ ಕಲಾವಿದರನ್ನು ತಮ್ಮ ಸುತ್ತ ಇಟ್ಟುಕೊಳ್ಳುತ್ತಾರಂತೆ. ನಾಳೆ ತಮ್ಮ ವೈಯಕ್ತಿಕ ಪ್ರದರ್ಶನದಲ್ಲಿ ಏನಾದರೂ ಹೆಚ್ಚು ಕಮ್ಮಿ ಆದರೂ ಸಹಿತ, ಕಾರ್ಯಕ್ರಮ ಹಾಳಾಗಬಾರದು ಎನ್ನುವ ಉದ್ದೇಶದಿಂದ ಹಾಗೆ ಮಾಡುತ್ತಾರೆ. ತಮ್ಮ ಸಹ ಕಲಾವಿದರಿಂದ ಅವರು ಬೇರೆ ಏನನ್ನೂ ಬಯಸುವುದಿಲ್ಲ. ಕೇವಲ ಸ್ವಾಮಿನಿಷ್ಠೆ, ಅಷ್ಟೇ,’’ ಅಂತ ಅಂದರು. ಒಮ್ಮೆ ಹೌದು ಎನ್ನಿಸಿದರೂ, ಇನ್ನೊಮ್ಮೆ ಇರಲಿಕ್ಕಿಲ್ಲ ಅಂತ ಅನ್ನಿಸಿತು.
ರಾಜ್ಯದಲ್ಲಿ ಸುಮಾರು ಮೂರು ವರ್ಷಗಳಿಂದ ಮ. ಬೆ. ಪ್ರಾ ಸೇರಿದಂತೆ ಯಾವುದೇ ಸ್ಥಳೀಯ ನಗರ ಸಂಸ್ಥೆಗಳ ಅಥವಾ ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯಿತಿಗಳ ಚುನಾವಣೆ ನಡೆದಿಲ್ಲ ಎನ್ನುವುದು ನೆನಪಾಯಿತು.
ಪದವಿಯಲ್ಲಿ ನಮಗೆ ಪ್ರೊ. ಮಹೇಶ್ವರಯ್ಯ ಅವರು ರಾಜ್ಯಶಾಸ್ತ್ರ ಪಾಠ ಮಾಡುತ್ತಿದ್ದರು. “ಮಾನವನ ಶ್ರೇಷ್ಠ ಸಂಶೋಧನೆ ಅಂದರೆ ಬೆಂಕಿ, ಗಾಲಿ, ಉಗಿ ಬಂಡಿ, ಕಂಪ್ಯೂಟರ್, ಇಂಟರ್ನೆಟ್ ಇತ್ಯಾದಿ ಯಾವುದೂ ಅಲ್ಲ. ಮಾನವ ಜನಾಂಗದ ಶ್ರೇಷ್ಠ ಸಂಶೋಧನೆ ಅಂದರೆ ಅದು ಪ್ರಜಾಪ್ರಭುತ್ವ. ಅದಕ್ಕಿಂತ ಮಿಗಿಲಾದ ಮಾನವನ ಸಾಧನೆ ಯಾವುದೂ ಇಲ್ಲ”, ಅಂತ ಅವರು ಹಗಲೆಲ್ಲಾ ಹೇಳುತ್ತಿದ್ದರು. ಅದು ನಮಗೆ ಅರ್ಥ ಆಗಲಿಲ್ಲ. ಈಗೀಗ ಸ್ವಲ್ಪ ಅರ್ಥ ಆಗುತ್ತಿದೆ.
ತಮಗಿಂತ ಸಮರ್ಥ ಅಧಿಕಾರಿಗಳನ್ನು ಇಟ್ಟುಕೊಂಡು ನಾಯಕರೊಬ್ಬರು ಅತ್ಯುತ್ತಮ ಎನ್ನಿಸುವ ಆಡಳಿತ ನಡೆಸಬಹುದು. ಆದರೆ ಅದು ಜನಾಧಿಕಾರ ಆಗಲಾರದು. ಅದು ಕೆಲವೇ ವ್ಯಕ್ತಿಗಳ ಇಷ್ಟ – ಅನಿಷ್ಟಗಳ ಸರಕಾರ ಆಗುವುದು. ಕೆಲವರ ಮಟ್ಟಿಗೆ ಅನಿಷ್ಟವೇ ಆದೀತು. ಹೊಸ ಮುಖ್ಯಮಂತ್ರಿ ಅವರು ಈ ಗೇಟೆಡ್ ಕಮ್ಯೂನಿಟೀ ಅಧಿಕಾರಿಗಳನ್ನು ದೂರ ಸರಿಸಿ, ಜನರಿಂದ ಆರಿಸಿ ಬಂದವರನ್ನು ಹತ್ತಿರ ಕರೆದುಕೊಳ್ಳಲಿ. ಜನ ಮಾನಸದ ಮಾತುಗಳನ್ನು ಅವರಿಂದ ತಿಳಿದುಕೊಳ್ಳಲಿ.
ಜೋಡಾನೆ ಕಿವಿಯ, ಅದೃಶ್ಯ ಮುಖನಾದ ಗಣಪತಿ ಅವರನ್ನು ಹರಸಲಿ.
ಕಾಂಗ್ರೆಸ್ ನ ಕೇಂದ್ರ ನಾಯಕರಾದ ರಾಹುಲ್ ಗಾಂಧಿ ಹಾಗೂ ಇತರ ಕೆಲವರು ಕೆಲ ವಿಷಯಗಳು ನಮಗೆ ಸೈದ್ಧಾಂತಿಕವಾಗಿ ಮುಖ್ಯ. ಇವುಗಳನ್ನು ನಾವು ಮಾಡಿಯೇ ಮಾಡುತ್ತೇವೆ ಅಂತ ಹೇಳುತ್ತಾರೆ, ಬಿಜೆಪಿ ಸರ್ಕಾರಗಳು ಈ ಕೆಲಸಗಳನ್ನು ನಿರ್ಲಕ್ಷಿಸಿದ್ದಕ್ಕಾಗಿ ಆ ಪಕ್ಷವನ್ನು ದೂಷಿಸುತ್ತಾರೆ. ಅವುಗಳಲ್ಲಿ ಕೆಲವು- ಜಾತಿ ಗಣತಿ, ಮೀಸಲಾತಿ ಹೆಚ್ಚಳ, ವಿಸ್ತರಣೆ ಹಾಗೂ ಉಪವರ್ಗೀಕರಣ, ಸಾಮಾಜಿಕ ಸುರಕ್ಷಾ ಕ್ರಮಗಳು, ಕೋಮು ವಿವಾದ ರಹಿತ ಸಮಾಜ, ಧರ್ಮ ನಿರಪೇಕ್ಷ ಆಡಳಿತ ಹಾಗೂ ರಾಜಕಾರಣ, ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳು ಹಾಗೂ ಸುರಕ್ಷಿತ ವಾತಾವರಣ, ಇತ್ಯಾದಿ. ಇವನ್ನು ಘೋಷಣೆ ಮಾಡಿದವರು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅಥವಾ ಸಿದ್ದರಾಮಯ್ಯ ಇರಬಹುದು. ಆದರೆ ಅವು ಒಂದು ಪಕ್ಷದ, ಒಂದು ಸಿದ್ಧಾಂತದ ಕಾರ್ಯಸೂಚಿ. ಅವರು ಘೋಷಿಸಿದ್ದರು ಎಂಬ ಕಾರಣಕ್ಕೆ ಇನ್ನೊಬ್ಬರು ಜಾರಿ ಮಾಡಬಾರದು ಅಂತ ಅಲ್ಲ. ಇವನ್ನೆಲ್ಲ ಅವರು ಮಾಡಲಿ.
ಈ ಕಾಲದ ಅತಿ ಜರೂರಿ ಕೆಲಸ ಎಂದರೆ ವಿಶೇಷ ಮತದಾರರ ಪಟ್ಟಿ ಸಂಸ್ಕರಣೆಯ ಪ್ರಕ್ರಿಯೆಯನ್ನು ವಿರೋಧ ಮಾಡುವುದು.
ಈ ಎಸ್ಐಆರ್ ಅನ್ನು ರಾಜಕೀಯ ದುರುದ್ದೇಶದಿಂದ ಜಾರಿ ಮಾಡಲಾಗುತ್ತಿದೆ. ಇದು ಜಾರಿ ಮಾಡುತ್ತಿರುವವರಿಗೆ ಹಾಗೂ ವಿರೋಧ ಮಾಡುತ್ತಿರುವವರಿಗೆ, ಎಲ್ಲರಿಗೂ ಗೊತ್ತು.
ಆಳುವ ಪಕ್ಷ ಸರ್ಕಾರಿ ಅಧಿಕಾರಿಗಳ ಕೈಯಿಂದ ಇದನ್ನು ಮಾಡಿಸುತ್ತಿದೆ. ಇದು ಹೇಗೆ ಎಂದರೆ ಹಳ್ಳಿಯ ಸಹಕಾರಿ ಸಂಸ್ಥೆಯ ಅಧ್ಯಕ್ಷನೊಬ್ಬ ತನ್ನ ಅಧಿಕಾರ ಶಾಶ್ವತವಾಗಿ ಉಳಿಯಲು ತಮಗೆ ಬೇಕಾದವರ ಹೆಸರು ಮಾತ್ರ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತಾನಲ್ಲ, ಹಾಗೆ. ಇದನ್ನು ವಿರೋಧಿಸಿ ಬಂದ್ ಮಾಡಿಸದಿದ್ದರೆ ವಿರೋಧ ಪಕ್ಷಗಳಿಗೆ ಉಳಿಗಾಲವಿಲ್ಲ.
ಆಳುವ ಪಕ್ಷದವರು ತಮ್ಮ ಉದ್ದೇಶ ಈಡೇರಿಸಿಕೊಳ್ಳುವುದರಲ್ಲಿ ಯಶಸ್ವಿಯಾದರೆ, ಆ ಪಕ್ಷ ಮತ್ತು ಅದರ ಮಿತ್ರ ಪಕ್ಷಗಳನ್ನು ಬಿಟ್ಟು ಬೇರೆ ಯಾರೂ ಗೆಲ್ಲುವುದಿಲ್ಲ. ಶಿವಕುಮಾರ್ ಅವರೂ ಗೆಲ್ಲುವುದಿಲ್ಲ, ಸಿದ್ದರಾಮಯ್ಯ, ಸತೀಶ್ ಜಾರಕಿಹೊಳಿ, ಅವರ ಸಹೋದ್ಯೋಗಿಗಳು, ಮಿತ್ರರು, ಸೈದ್ಧಾಂತಿಕ ಬಂಧುಗಳು, ಸಮಾನ ಮನಸ್ಕರು, ಇತ್ಯಾದಿ ಯಾರೂ ಮುಂದಿನ ಯಾವುದೇ ಚುನಾವಣೆಗಳಲ್ಲಿ ಗೆಲ್ಲುವುದಿಲ್ಲ. ”ನಾನು ಇನ್ನು ಮುಂದೆ ಗೆಲ್ಲುವುದಿಲ್ಲ” ಎನ್ನುವುದು ಮನದಟ್ಟಾಗಿ, ಆಪರೇಷನ್ ಕಮಲಕ್ಕೆ ತಯಾರಾಗುವ ಮನಸ್ಸಿದ್ದವರು ಮಾತ್ರ ಸಾರ್ವಜನಿಕ ಜೀವನದಲ್ಲಿ ಉಳಿದುಕೊಳ್ಳುತ್ತಾರೆ.
ಇದೇ ಎಸ್ಐಆರ್ ನೆವ ಮಾಡಿಕೊಂಡು ನಿಮ್ಮ ಕಾಲಡಿಯ ಕಂಬಳಿಯನ್ನು ಯಾರೂ ಬೇಕಾದರೂ ಯಾವಾಗಲಾದರೂ ಜಗ್ಗಬಹುದು. ಇದನ್ನು ಶಿವಕುಮಾರ್ ಅವರೂ ಸೇರಿದಂತೆ ಈ ದೇಶದ ವಿರೋಧ ಪಕ್ಷದ ಯಾವ ನಾಯಕರೂ ಮರೆಯುವಂತಿಲ್ಲ. ಅಟಲ್ ಬಿಹಾರಿ ವಾಜಪೇಯ ಅವರ ಸರಕಾರ ಬಹುಮತ ಕಳೆದುಕೊಂಡು ಕಾಂಗ್ರೆಸ್ ಮುಂದಾಳತ್ವದ ಸಮ್ಮಿಶ್ರ ಸರಕಾರ ಬಂದಾಗ ಶಿವಸೇನಾ ನಾಯಕ ಮನೋಹರ್ ಜೋಷಿ ಅವರು ಒಂದು ಮಾತು ಹೇಳಿದ್ದರು- ”ಬಚ್ ಕೆ ರೆಹನಾ, ರಾಜ್ ಕರೋ”. ಹೊಸ ಹುಮ್ಮಸ್ಸಿನಿಂದ ಪ್ರಮಾಣ ವಚನಕ್ಕೆ ತಯಾರು ಆಗುತ್ತಿರುವ ಶಿವಕುಮಾರ್ ಅವರಿಗೆ ಈ ಎಚ್ಚರ ಯಾವಾಗಲೂ ಇರಲಿ.
ಕರ್ನಾಟಕದಲ್ಲಿ ಹಿಂದಿನ ಸರ್ಕಾರಗಳನ್ನು ಮಾಡಿದ ಕೆಲವು ತಪ್ಪುಗಳನ್ನು ಸರಿಪಡಿಸುವುದಾಗಿ ಕಾಂಗ್ರೆಸ್ ಪಕ್ಷ ಹೇಳಿಕೊಂಡು ಬಂದಿದೆ. ಅವುಗಳಲ್ಲಿ ಮುಖ್ಯವಾದವು- ಯಾರು ಬೇಕಾದವರು, ಎಷ್ಟು ಬೇಕಾದಷ್ಟು ಕೃಷಿ ಜಮೀನು ಖರೀದಿ ಮಾಡಬಹುದು ಎಂದು ಕಂದಾಯ ಕಾನೂನಿಗೆ ಮಾಡಿದ ತಿದ್ದುಪಡಿ, ಕೃಷಿ ಉತ್ಪನ್ನಗಳನ್ನು ರೈತರಿಂದ ಮಧ್ಯವರ್ತಿಗಳಾಗಲಿ, ಕಂಪನಿ ಮಾಲೀಕರಾಗಲಿ ನೇರವಾಗಿ, ಪಾರದರ್ಶಕವಾದ ಸಾರ್ವಜನಿಕ ಸವಾಲು ಇಲ್ಲದೆ ಖರೀದಿಸಬಹುದು ಎನ್ನುವ ಎಪಿಎಂಸಿ ತಿದ್ದುಪಡಿ, ಜಾನುವಾರುಗಳಿಗೆ ಸಂಬಂಧಪಟ್ಟ ಕಾಯಿದೆಗಳು, ಹಿಂದುಳಿದ ಅಲ್ಪಸಂಖ್ಯಾತರ ಮೀಸಲು ಸೌಲಭ್ಯ ಕಸಿದುಕೊಂಡ ಕಾಯಿದೆ, ಇತ್ಯಾದಿ. ಇವುಗಳನ್ನು ಸಿದ್ದರಾಮಯ್ಯ ಅವರು ತೆಗೆದುಹಾಕಲಿಲ್ಲ. ಅದನ್ನು ಮುಂಬರುವ ಮುಖ್ಯಮಂತ್ರಿ ಮಾಡಲಿ.
ತಮ್ಮ ರಾಜೀನಾಮೆಯ ಮುನ್ನಾ ದಿನ ಸಿದ್ದರಾಮಯ್ಯ ಅವರು ಅಂಗೀಕರಿಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ಮುಖ್ಯಮಂತ್ರಿಯಾಗಿ ಶಿವಕುಮಾರ್ ಅವರು ಗಂಭೀರವಾಗಿ ಪರಿಗಣಿಸಲಿ. ‘ಅವರು ಶೋಷಕ ಭೂಮಾಲೀಕ ಜಾತಿಗೆ ಸೇರಿದವರು, ಇದನ್ನು ಅವರು ಜಾರಿ ಮಾಡುವುದಿಲ್ಲ’ ಎನ್ನುವ ಆರೋಪಗಳು ಸುಳ್ಳು ಎಂದು ತಮ್ಮ ನಡತೆಯಿಂದ ಸಾಬೀತು ಮಾಡಲಿ. ಜಾತಿ ಗಣತಿ ಬೇಕಾಗಿರುವುದು ಕೇವಲ ಹಿಂದುಳಿದವರಿಗೆ ಮಾತ್ರ ಅಲ್ಲ. ಎಲ್ಲರಿಗೂ. ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ ಆಗಲು ಅದು ಸಹಕಾರಿ.
ಕರುನಾಡು ದೊಡ್ಡದು. ಒಂದು ಕಾಲದಲ್ಲಿ ಕಾವೇರಿಯಿಂದ ಗೋದಾವರಿವರೆಗೆ ಹಬ್ಬಿದ್ದು. ಇಷ್ಟು ದಿನ ತಮ್ಮ ಬಳಿ ಮೂರು ಇಲಾಖೆಗಳು ಇದ್ದರೂ, ಶಿವಕುಮಾರ್ ಅವರು ಬೆಂಗಳೂರು ಅಭಿವೃದ್ಧಿ ಪರವಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಜನಪ್ರಿಯರಾದವರು. ಬೆಂಗಾವಲೂರಿನ ಸ್ಟಾರ್ ವ್ಯಾಲ್ಯು ನೋಡಿದಾಗ ಅದು ಸಹಜವೂ ಇರಬಹುದು. ಆದರೆ ಇನ್ನಾದರೂ ಅವರ ದೃಷ್ಟಿ ರಾಜ್ಯದ ಇತರ ನತದೃಷ್ಟ ಜಿಲ್ಲೆ, ಪ್ರದೇಶಗಳ ಕಡೆಗೆ ಹಾಯಲಿ. ಅವರ ದೃಷ್ಟಿ ದೊಡ್ಡದಾಗಲಿ. ಬೆಂಗಳೂರು ಬಿಟ್ಟು ಹೊರಗಿನ ಪ್ರದೇಶವನ್ನು ಅವರು ಕಾಣಲಿ, ಕಾಯಲಿ.
ಉತ್ತರ ಕರ್ನಾಟಕದ ಪರವಾಗಿ ದನಿ ಎತ್ತಿ ಮಾತಾಡುತ್ತಿದ್ದ ಚಂದ್ರಶೇಖರ ಪಾಟೀಲರು ಒಮ್ಮೆ ಬೆಂಗಳೂರಿನ ಸಾಹಿತಿಯೊಬ್ಬರ ಬಗ್ಗೆ ಈ ರೀತಿ ವ್ಯಂಗ್ಯವಾಡಿದ್ದರು – ‘ಇವರು ಬಸವನಗುಡಿ ಸುತ್ತಮುತ್ತ ಜಗತ್ ಪ್ರಸಿದ್ಧರಾದವರು’.
ಹೀಗೆ ಅನ್ನಿಸಿಕೊಳ್ಳುವ ಪ್ರಮೇಯ ಶಿವಕುಮಾರ್ ಅವರಿಗೆ ಬರದೇ ಇರಲಿ.
ಅಂತಾರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞ ಹಾಗೂ ಚಿಂತಕರೂ ಡಾ. ಡಿ ಎಂ. ನಂಜುಂಡಪ್ಪ ಅವರು ರಾಜ್ಯದ ಹಿಂದುಳಿದ ಪ್ರದೇಶಗಳ ಸರ್ವಾಂಗೀಣ ಅಭಿವೃದ್ಧಿಗೆ ಒಂದು ಸೂತ್ರ ತಯಾರಿಸಿಕೊಟ್ಟಿದ್ದಾರೆ. ಆದರೆ ಎಲ್ಲ ವರ್ಣಗಳ ಸರಕಾರಗಳು ಅದರ ತಥ್ಯ ತಿಳಿಯದೆ, ಅದರ ಗಿಲೀಟು ಮಾತ್ರ ನೋಡಿ ಆನಂದಿಸುತ್ತಿದ್ದಾರೆ. ಅದನ್ನು ಓದಿ ನೋಡಿ, ಇದು ಹೀಗಲ್ಲ, ಹಾಗೆ ಅಂತ ಹೇಳುವವರು, ಅವರ ಮಾತನ್ನು ಕೇಳುವವರು, ಇದ್ದಂತಿಲ್ಲ.
ಡಾ. ನಂಜುಂಡಪ್ಪ ವರದಿ ಪ್ರಕಾರ ಸಣ್ಣ ಹಾಗೂ ಸೂಕ್ಷ್ಮ ನೀರಾವರಿ, ಕೃಷಿ ಉತ್ಪನ್ನ ಸಂಸ್ಕರಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿಗಳಿಗೆ ಒತ್ತು ಕೊಡೋದು ಬಿಟ್ಟು, ‘ಹಳೆ ಕಲ್ಲು, ಹೊಸಾ ಬಿಲ್ಲು’ ಎನ್ನುವ ಸೂತ್ರದ ಪ್ರಕಾರ, ರಸ್ತೆ, ಗಟಾರು, ಹಳ್ಳಿಯ ಸ್ವಾಗತ ಕಮಾನು, ಸಮುದಾಯ ಭವನ ಇತ್ಯಾದಿಗಳಿಗೆ ಹಣ ಹರಿಸಿದ್ದಾರೆ.
ಶಿವಕುಮಾರ್ ಅವರು 2001ರ ಕನಕಪುರದ ಸಭೆ ಯೊಂದರಲ್ಲಿ ”ನಾನು ಎಲ್ಲರೂ ನಡೆಯುವ ದಾರಿಯಲ್ಲಿ ನಡೆಯೋನಲ್ಲ. ನನ್ನ ದಾರಿಯೇ ಬೇರೆ ಅಂತ’’ ಹೇಳಿದ್ದರು. ಅದು ಅವರಿಗೆ ನೆನಪಾಗಲಿ. ಈಶಾನ್ಯ ಕರ್ನಾಟಕದ ನಿಜವಾದ ಕಲ್ಯಾಣ ಅವರಿಂದ ಸಾಧ್ಯವಾಗಲಿ.
ಕರ್ನಾಟಕ ಸರ್ಕಾರದ ವಯಸ್ಕ ಶಿಕ್ಷಣ ಇಲಾಖೆ 1999ರಲ್ಲಿ ಹೊರ ತಂದ ವಿವಿಧ ಜಿಲ್ಲೆಗಳ ಜನರ ಶೈಕ್ಷಣಿಕ ಮಟ್ಟ ಎನ್ನುವ ವರದಿಯಲ್ಲಿ ಹೈದರಾಬಾದು ಕರ್ನಾಟಕದ ನಿಮ್ನ ವರ್ಗಗಳ ಮಹಿಳೆಯರ ಸಾಕ್ಷರತಾ ಮಟ್ಟ ಆಫ್ರಿಕಾ ಖಂಡದ ಹಿಂದುಳಿದ ಪ್ರದೇಶಗಳ ಮಹಿಳೆಯರ ಶಿಕ್ಷಣ ಮಟ್ಟದ್ದು, ಎನ್ನುವ ಮಾತು ಇದೆ.
ಮೊದಲು ಅದನ್ನು ಬರೆದವರು ಯಾರು ಅಂತ ನೋಡಿ, ಅವರನ್ನು ವಿಧಾನಸೌಧಕ್ಕೆ ಕರೆಸಲಿ. ಅವರು ಬರೆದದ್ದು ನಿಜ ಅಂತ ಆದರೆ, ಅದರ ಬಗ್ಗೆ ಏನಾದರೂ ಮಾಡಬಹುದೇ ನೋಡಲಿ. ಆದರೆ ಅದಕ್ಕೆ ಮತ್ತೊಂದು ಸಮಿತಿ ಮಾಡೋದು ಮಾತ್ರ ಬೇಡ.
ಶಿವಕುಮಾರ್ ಅವರಿಗೆ ಅತೀವ ಆಸಕ್ತಿಯ ವಿಷಯ ವಾಗಿರುವ ಹೈನುಗಾರಿಕೆ ಬಗ್ಗೆ ಒಂದು ಮಾತು. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಒಂದು ದಿನಕ್ಕೆ ರೈತರಿಂದ ಸಂಗ್ರಹಿಸುವ ಒಂದು ಕೋಟಿ ಲೀಟರ್ ನಲ್ಲಿ ಸುಮಾರು 85 ಶೇಕಡಾ ದಕ್ಷಿಣದ ಜಿಲ್ಲೆಗಳಿಂದ ಬರುತ್ತವೆ. ಉಳಿದ ಶೇಕಡಾ 15 ಉತ್ತರ ಕರ್ನಾಟಕದ 14 ಹಾಗೂ ದಾವಣಗೆರೆಯಿಂದ ಸಂಗ್ರಹವಾಗುತ್ತದೆ. ಇದನ್ನು ತುಸು ಆದರೂ ಹೆಚ್ಚಿಸಿದರೆ ಕಪ್ಪು ಮಣ್ಣಿನಲ್ಲಿ ಬಿರು ಬಿಸಿಲಿನಲ್ಲಿ ಬೆವರಿನ ನೀರಾವರಿ ಮಾಡಿ ದುಡಿಯುವ ಬಡಪಾಯಿಗಳ ಬಾಳು ಬೆಳಗೀತು. ಅವರ ಮಕ್ಕಳ ಹೊಟ್ಟೆ ತಣ್ಣಗಾದೀತು.
ಕರ್ನಾಟಕ ರಾಜ್ಯದ ನಾಲ್ಕು ಕಂದಾಯ ವಿಭಾಗಗಳಿಗೆ ಬೆಂಗಳೂರಿನ ಸಂಪರ್ಕ ಇದೆ. ಆದರೆ ಅವು ಒಂದಕ್ಕೊಂದು ರೇಲ್ವೆ ಸಂಪರ್ಕ ಹೊಂದಿಲ್ಲ. ಬ್ರಿಟಿಷರು ಹಾಕಿ ಹೋದ ಹಳಿಗಳ ಮೇಲೆ ಹೊಸ ರೈಲುಗಳನ್ನು ಬಿಡುತ್ತಾ ನಾವು ದಿನ ದೂಕುತ್ತಿದ್ದೇವೆ. ಈ ಸ್ಥಿತಿ ಇನ್ನಾದರೂ ಬದಲಾಗಲಿ. ಹೇಗೂ ರಾಜ್ಯದ ರೇಲ್ವೆ ಯೋಜನೆ ಗಳ ಖರ್ಚಿನಲ್ಲಿ ರಾಜ್ಯ ಸರಕಾರ ಅರ್ಧ ಭರಿಸುತ್ತದೆ. ಹುಬ್ಬಳ್ಳಿ, ಕಲಬುರ್ಗಿ, ಮೈಸೂರು, ಹಾಗೂ ಮಂಗಳೂರಿನ ಜನರು ತಮ್ಮ ತೆರಿಗೆ ಹಣದಲ್ಲಿ ಹಾಕಿದ ಹಳಿಗಳ ಮೇಲೆ ಓಡಾಡುವಂತಾಗಲಿ, ಒಬ್ಬರನ್ನೊಬ್ಬರು ಭೇಟಿಯಾಗುವಂತೆ ಆಗಲಿ.
ಹೊಸ ಮುಖ್ಯಮಂತ್ರಿಗಳು ಪ್ರಮಾಣ ವಚನ ತೆಗೆದುಕೊಂಡ ಮರು ಕ್ಷಣದಿಂದ, ಅಮೆರಿಕ, ಯೂರೋಪು, ಜಪಾನು, ಕೊರಿಯಾ ಮುಂತಾದವುಗಳಿಂದ ವ್ಯವಹಾರ ಒಪ್ಪಂದ ಮಾಡಲು ನಿಯೋಗಗಳು ಅವರ ಬಳಿ ಬರುತ್ತವೆ. ಅವರೆಲ್ಲರಿಗೂ ‘ದೇವನಹಳ್ಳಿ ವಿಮಾನ ನಿಲ್ದಾಣದ ಪಕ್ಕದ ಜಮೀನು ಕೊಡುತ್ತೇವೆ’ ಎಂದು ಆಶ್ವಾಸನೆ ನೀಡುವ ಅವಶ್ಯಕತೆ ಇಲ್ಲ.
ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಸಾಕಷ್ಟು ಜಮೀನು ಇದೆ. ಬೆಂಗಳೂರಿಗೆ ಹೋಲಿಸಿದರೆ ಅದಕ್ಕೆ ಬೆಲೆ ತುಂಬ ಕಮ್ಮಿ. ಇಲ್ಲಿನ ಯುವಕರಿಗೆ ಕೌಶಲ್ಯ ಇದೆ, ದಣಿಯದೆ ದುಡಿಯುವ ಶಕ್ತಿ ಇದೆ, ಇಲ್ಲಿನ ನೆಲಕ್ಕೆ ಬಂಡವಾಳದ ಬೀಜ ಬೀಳಬೇಕಾಗಿದೆ. ಅವರನ್ನು ವಂದೇ ಭಾರತ ರೈಲಿನಲ್ಲಿ ಹತ್ತಿಸಿ ಕಳಿಸಿದರೆ, ಅವರನ್ನೆಲ್ಲ ಒಂದು ಎರಡು ದಿವಸ ಇಟ್ಟುಕೊಂಡು ಜೋಳದ ರೊಟ್ಟಿ- ಎಣೆಗಾಯಿ ಪಲ್ಯ ತಿನ್ನಿಸಿ ಕಳಿಸುತ್ತೇವೆ. ರೊಟ್ಟಿಯ ರುಚಿಗಾಗಿಯಾದರೂ ಅವರು ಇನ್ನೊಮ್ಮೆ ಬಂದಾರು.
ರಾಜ್ಯದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನೀರಾವರಿ ಯೋಜನೆಗಳು ಪೂರ್ಣಗೊಂಡು, ಅಲ್ಲಿನ ಜನರು ಅದರ ಫಲ ಉಂಡು ಒಂದು ಶತಮಾನವೇ ಆಯಿತು. ಥಾರ್ ಮರುಭೂಮಿ ಬಿಟ್ಟರೆ ಅತಿ ಕಮ್ಮಿ ಮಳೆ ಬೀಳುವ ಪ್ರದೇಶ ಇರುವ ಉತ್ತರ ಕರ್ನಾಟಕದ ಅನೇಕ ನೀರಾವರಿ ಯೋಜನೆಗಳು ಇನ್ನೂ ಮುಗಿದಿಲ್ಲ. ಅವುಗಳತ್ತ ಒಮ್ಮೆ ನೋಡಲಿ. ಇಡೀ ದೇಶದಲ್ಲಿಯೇ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳು ಕರ್ನಾಟಕದಲ್ಲಿ ಇವೆ. ಇವುಗಳಲ್ಲಿ ಇರುವ ಪ್ರಾಜ್ಞರನ್ನು ಒಂದು ಕಡೆ ಸೇರಿಸಿ ನಮ್ಮ ಹವಾಮಾನವನ್ನು ಅಧ್ಯಯನ ಮಾಡಿ, ಯಾವಾಗ ಎಷ್ಟು ಮಳೆ ಬರುತ್ತದೆ, ಯಾವಾಗ ಇಲ್ಲ ಎನ್ನುವುದನ್ನು ಮುಂಚಿತವಾಗಿ ಹೇಳಬಹುದೇ? ಅಂತ ಕೇಳಲಿ.
ಬಡವರಿಗೆ ಧಾನ್ಯ ನೀಡಬೇಕು ಎನ್ನುವ ಯೋಜನೆ ಶುರು ಅದಾಗಿನಿಂದ ಇಂದಿನವರೆಗೆ ಕೇಂದ್ರ ಕೊಟ್ಟ ಅಕ್ಕಿ- ಗೋಧಿ ಕಾಳುಗಳನ್ನೇ ರಾಜ್ಯಗಳು ಜನರಿಗೆ ತಿನ್ನಿಸುತ್ತಿವೆ. ‘ಇದು ಬದಲಾದರೆ ಜನರ ಆರೋಗ್ಯಕ್ಕೆ ಒಳ್ಳೆಯದು, ರಾಜ್ಯದ ಆರ್ಥಿಕ ಆರೋಗ್ಯಕ್ಕೂ ಇದು ಹಿತ’ ಎನ್ನುವ ಮೂರು ವರದಿಗಳು ವಿಧಾನಸೌಧ ಎನ್ನುವ ಕಲ್ಲಿನ ಹೃದಯದ ಕಟ್ಟಡದ ಕಪಾಟುಗಳಲ್ಲಿ ಬಂಧಿಯಾಗಿ ಬಿದ್ದಿವೆ. ಅವುಗಳ ಕೆಂಪು ಪಟ್ಟಿಯ ಸೆರೆ ಬಿಡಿಸಿ, ಅವನ್ನು ಒರೆಸಿ, ಓದಿ, ಜಾರಿ ಮಾಡಲಿ.
ಉತ್ತರ ಕರ್ನಾಟಕದಲ್ಲಿ ಜೋಳ, ದಕ್ಷಿಣದಲ್ಲಿ ರಾಗಿ, ಕರಾವಳಿಯಲ್ಲಿ ಕುಚುಗಲ ಅಕ್ಕಿ ನೀಡುವಂತೆ ಇವುಗಳಲ್ಲಿ ಶಿಫಾರಸು ಮಾಡಲಾಗಿದೆ. ಅವನ್ನು ಜಿಲ್ಲಾ ಮಟ್ಟದಲ್ಲಿ ಖರೀದಿ ಮಾಡಬೇಕು. ಹತ್ತಿರದ ಜಿಲ್ಲೆಗಳಲ್ಲಿ ಸರಬರಾಜು ಮಾಡಬೇಕು ಎನ್ನುವ ಸಲಹೆ ಇದೆ. ಇವನ್ನು ಗಂಭೀರವಾಗಿ ಪರಿಗಣಿಸಲಿ.
ಕರ್ನಾಟಕದದಾದ್ಯಂತ ಅಸಂಖ್ಯ ಪ್ರವಾಸಿ ತಾಣಗಳು ಇವೆ. ಅವನ್ನು ಅಭಿವೃದ್ಧಿಪಡಿಸಿ, ಸಿಂಗರಿಸಿ, ಅಲ್ಲಿನ ಯುವಕರನ್ನು ಗೈಡ್ಗಳಾಗಲು ತಯಾರು ಮಾಡಲಿ. ತೋರಿಸಲು ಏನೇನೂ ಇಲ್ಲದ ಕೆಲ ರಾಜ್ಯಗಳು ಪ್ರವಾಸೋದ್ಯಮವನ್ನು ಎಷ್ಟರ ಮಟ್ಟಿಗೆ ಬೆಳೆಸಿವೆ ಎಂದರೆ, ಭಾರತ ಅಂದರೆ ಈ ಕೆಲ ರಾಜ್ಯಗಳು ಎನ್ನುವ ಮಟ್ಟಿಗೆ ವಿದೇಶಿ ಪ್ರವಾಸಿಗಳ ಮನಸ್ಸಿನಲ್ಲಿ ಅಚ್ಚು ಹಾಕಿದಂತೆ ಆಗಿದೆ. ಇದು ಬದಲಾಗಲಿ. ‘ಕರ್ನಾಟಕ ಎನ್ನುವುದು ಅನೇಕ ವಿಶ್ವಗಳನ್ನು ಒಳಗೊಂಡ ಒಂದು ರಾಜ್ಯ’ ಎನ್ನುವುದು ಎಲ್ಲರಿಗೂ ಮನದಟ್ಟು ಆಗಲಿ.
ಕೊನೆಗೆ ಒಂದು ಮಜಾ ವಿಷಯ ಹೇಳುತ್ತೇನೆ. ಕೆಲ ವರ್ಷಗಳ ಹಿಂದೆ ನಮ್ಮ ಹುಬ್ಬಳ್ಳಿಯಲ್ಲಿ ಒಬ್ಬ ಜನಪ್ರಿಯ ವಾಸ್ತು ತಜ್ಞರ ಹತ್ಯೆ ಆಯಿತು. ಬೇರೆಯವರಿಗೆ ಈ ದಿಕ್ಕಿನಲ್ಲಿ, ಈ ಕುರ್ಚಿಯಲ್ಲಿ, ಕೂರಬೇಡಿ, ನಿಮಗೆ ಕಂಟಕ ಅಂತ ಹೇಳುತ್ತಿದ್ದವರು, ಒಂದು ದಿಕ್ಕಿಗೆ ಮುಖ ಮಾಡಿ ಕುರ್ಚಿಯಲ್ಲಿ ಕೂತಾಗ ಅವರ ಪ್ರಾಣ ಹೋಯಿತು. ಈ ದಿಕ್ಕು, ಈ ಕುರ್ಚಿ ತನಗೆ ಕಂಟಕ ತರಬಹುದು ಅಂತ ಅವರಿಗೆ ಮುಂಚಿತವಾಗಿ ಹೊಳೆಯಲಿಲ್ಲ.
ಶಿವಕುಮಾರ್ ಅವರು ಈ ಜ್ಯೋತಿಷಿಗಳ ಮೇಲೆ ಹೆಚ್ಚು ಅವಲಂಬನ ಆಗೋದು ಬೇಡ. ಅವರ ಸಂಗ ಬಿಡುವುದು ಕಷ್ಟ ಆಗಬಹುದು ಅಂತ ಆದರೆ, ಅವರು ಹೇಳೋದು ಹೇಳಲಿ, ಇವರು ಮಾಡುವುದು ಮಾಡಲಿ. ಬಹಿರಂಗ ಸಭೆಗಳಲ್ಲಿ ಶಿವಕುಮಾರ್ ಅವರು ಪದೇ ಪದೇ ಹೇಳುತ್ತಾ ಇರುವ ಮಾತು ಒಂದಿದೆ- “ದೇವರು ನಮಗೆ ಅವಕಾಶ ಕೊಡುತ್ತಾನೆ. ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದು ನಮಗೆ ಬಿಟ್ಟಿದ್ದು’’. ಅವರು ಇತರರಿಗೆ ಹೇಳುವುದನ್ನು ತಾವು ಸಾವಧಾನವಾಗಿ ಕೇಳಿಸಿಕೊಳ್ಳಲಿ. ಅದನ್ನು ಪಾಲಿಸಲಿ. ಬೃಹದಾರಣ್ಯಕ ಉಪನಿಷತ್ ನ ಶ್ರವಣ, ಮನನ, ನಿಧಿಧ್ಯಾಸನ ಎನ್ನುವ ಸಾಕ್ಷಾತ್ಕಾರದ ಮೆಟ್ಟಿಲುಗಳು ಇವೇ.
ಮೊದಲಿಗೆ ಪ್ರಾಮಿಸ್ ಮಾಡಿದಂತೆ ಅವರಿಗೆ ಇಷ್ಟವಾಗಬಹುದಾದ ಹಾಡು ಒಂದು ಇಲ್ಲಿದೆ. ಅದು ದಾಸ ಶ್ರೇಷ್ಠ ಪುರಂದರ ದಾಸರ ಪದ ‘ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ’. ಹದಿನೈದನೇ ಶತಮಾನದ ಸುಮಾರಿಗೆ ಬರೆದ ಈ ಹಾಡು ಶತಮಾನಗಳ ಮುನ್ನೋಟ ನೀಡಬಲ್ಲದು. ಅದರ ಕೆಲವು ಸಾಲುಗಳು ಇಲ್ಲಿವೆ.
”ಸಕಲ ಗ್ರಹ ಬಲ ನೀನೇ ಸರಸಿಜಾಕ್ಷ,
ರವಿಚಂದ್ರ ಬುಧ ನೀನೇ ರಾಹು ಕೇತುವು ನೀನೇ
ಕವಿ ಗುರುವು ಶನಿಯು ಮಂಗಳನು ನೀನೇ
ಪಕ್ಷಮಾಸವು ನೀನೇ ಪರ್ವ ಕಾಲವು ನೀನೇ
ಋತುವತ್ಸರವು ನೀನೆ ವ್ರತ ಯುಗಾದಿಯು ನೀನೇ’’..
ಅಷ್ಟೊತ್ತಿಗೆ ನೆನಪಾಯಿತು. ನಮ್ಮ ಸುದ್ದಿ ಸಂಪಾದಕರು ಆಗಾಗ ಹೇಳುತ್ತಾ ಇರುತ್ತಾರೆ. ‘ಹೆಡ್ ಲೈನ್ ಬಂದರೆ ಅರ್ಧ ಲೇಖನ ಆದಂಗೆ’. ಆ ಮಾತಿನ ಬೆನ್ನಿಗೇ ಒಂದು ಸಾಲು ನೆನಪಾಯಿತು.
‘ದೊಡ್ಡ ಆಲನಹಳ್ಳಿ ಕೆಂಪೇಗೌಡ ಶಿವಕುಮಾರ್ ಅವರಿಗೆ ಕಾಫ್ಕಾನ ಜೊಂಡಿಗ್ಯಾಗಳಿಂದ ಒಂದು ಪತ್ರ’
ಹೀಗೇ ಒಂದು ಪತ್ರ ಬರೆಯೋಣ ಅಂತ ಅಂದುಕೊಂಡೆ. ಪೆನ್ನು ಪೇಪರ್ ಹುಡುಕಲು ಶುರು ಮಾಡಿದೆ.

ಹೃಷಿಕೇಶ ಬಹದ್ದೂರ ದೇಸಾಯಿ
ಪತ್ರಕರ್ತರು




