ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದ್ದಾರೆ.
ಸೋಮವಾರ ಶ್ವೇತಭವನದಲ್ಲಿ ನಡೆದ ಭೋಜನಕೂಟದ ಸಂದರ್ಭದಲ್ಲಿ, ನೆತನ್ಯಾಹು ಅವರು ನೊಬೆಲ್ ಸಮಿತಿಗೆ ಕಳುಹಿಸಿದ ನಾಮನಿರ್ದೇಶನ ಪತ್ರದ ಪ್ರತಿಯನ್ನು ಸಹ ಹಸ್ತಾಂತರಿಸಿದರು.
ಟ್ರಂಪ್ ಅವರೊಂದಿಗಿನ ಔತಣಕೂಟದ ವೇಳೆ ನೆತನ್ಯಾಹು ಈ ಕುರಿತು ಮಾಹಿತಿ ನೀಡಿದ್ದಾರೆ. “ನೊಬೆಲ್ ಶಾಂತಿ ಪ್ರಶಸ್ತಿ ಸಮಿತಿಗೆ ಕಳುಹಿಸಿದ ಪತ್ರವನ್ನು ನಾನು ನಿಮ್ಮ ಮುಂದಿಡಲು ಬಯಸುತ್ತೇನೆ. ನಾನು ನಿಮ್ಮನ್ನು ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನ ಮಾಡುತ್ತಿದ್ದೇನೆ. ನೀವು ಅದಕ್ಕೆ ಅರ್ಹರಿದ್ದೀರಿ. ಆ ಗೌರವವನ್ನು ನೀವು ಪಡೆಯಬೇಕು” ಎಂದು ನೆತನ್ಯಾಹು ಹೇಳಿದ್ದಾರೆ.
ಟ್ರಂಪ್ ಅವರು ಜಗತ್ತಿನಲ್ಲಿ ಈಗ ಶಾಂತಿ ಮಂತ್ರವನ್ನು ಜಪಿಸುತ್ತಿದ್ದಾರೆ. ವಿಶೇಷವಾಗಿ ಈಗ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ಟ್ರಂಪ್ ಬಹಳಷ್ಟು ಶ್ರಮಿಸುತ್ತಿದ್ದಾರೆ. ಟ್ರಂಪ್ ಅವರ ಈ ಕೆಲಸಕ್ಕೆ ಎಲ್ಲ ಇಸ್ರೇಲಿಗಳು ಮಾತ್ರವಲ್ಲದೆ, ಯಹೂದಿ ಜನರು ಮತ್ತು ಪ್ರಪಂಚದಾದ್ಯಂತದ ಅನೇಕ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗಿದೆ ಎಂದು ನೆತನ್ಯಾಹು ಹೇಳಿದರು.
ಇದನ್ನು ಓದಿದ್ದೀರಾ? ಅಮೆರಿಕದಲ್ಲಿ ಹೊಸ ರಾಜಕೀಯ ಪಕ್ಷ ಘೋಷಿಸಿದ ಎಲಾನ್ ಮಸ್ಕ್
ನೆತನ್ಯಾಹು ಅವರು ತನ್ನನ್ನು ನೊಬೆಲ್‌ಗೆ ನಾಮನಿರ್ದೇಶನ ಮಾಡಿದ್ದಕ್ಕೆ ಪ್ರತಿಕ್ರಿಯಿಸಿದ ಟ್ರಂಪ್, ಇದು ನನಗೆ ತಿಳಿದಿರಲಿಲ್ಲ. ವಿಶೇಷವಾಗಿ ನಿಮ್ಮಿಂದ ಈ ಮಾತು ಬಂದಿರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಹೇಳಿದರು.
ಇಲ್ಲಿಯವರೆಗೆ ಅಮೆರಿಕದ ಮೂವರು ಅಧ್ಯಕ್ಷರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದಿದ್ದಾರೆ. 1906 ರಲ್ಲಿ ಥಿಯೋಡರ್ ರೂಸ್‌ವೆಲ್ಟ್, 1919 ರಲ್ಲಿ ವುಡ್ರೋ ವಿಲ್ಸನ್ ಮತ್ತು 2009 ರಲ್ಲಿ ಬರಾಕ್ ಒಬಾಮಾ ಅವರಿಗೆ ನೊಬೆಲ್ ದೊರಕಿದೆ.
ಪ್ಯಾಲಿಸ್ತೇನ್ ಮೇಲೆ ಯದ್ಧ ಮಾಡುತ್ತಿರುವ ಇಸ್ರೇಲ್‌ಗೆ ಅಮೆರಿಕದ ನೇರ ಬೆಂಬಲವಿದೆ. ಇಸ್ರೇಲ್ ದಾಳಿಯಿಂದಾಗಿ ನಿತ್ಯ ನೂರಾರು ಅಮಾಯಕರು ಗಾಜಾ ಪಟ್ಟಿಯಲ್ಲಿ ಮೃತಪಡುತ್ತಿದ್ದಾರೆ. ಮಕ್ಕಳು, ಮಹಿಳೆಯರೆನ್ನದೆ ಸಾವಿರಾರು ಜನರನ್ನು ಇಸ್ರೇಲ್ ಕೊಂದಿದೆ. ಯುದ್ಧದ ಭೀಕರತೆ ಕುರಿತು ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳು ಕಳವಳ ವ್ಯಕ್ತಪಡಿಸಿದೆ.