ಆಫ್ರಿಕಾದ ಕಾಂಗೋ ದೇಶವು ಮಾರಣಾಂತಿಕ ಎಬೊಲಾ ರೋಗದ ವಿರುದ್ಧ ಹೋರಾಡುತ್ತಿದ್ದ ಸಮಯದಲ್ಲೇ, ಅಲ್ಲಿ ನೂರಾರು ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಅಂತಹ ಪ್ರಕರಣಗಳಿಂದ ಕಾಂಗೋ ಜರ್ಜರಿತವಾಗಿದೆ. ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ)ದ ವೈದ್ಯರು ಈ ವರ್ಷದ ಮಾರ್ಚ್‌ನಲ್ಲಿ ಅಲ್ಲಿಗೆ ಭೇಟಿ ನೀಡಿದ್ದರು. ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿದ್ದ ಸುಮಾರು 100 ಮಹಿಳೆಯರನ್ನು ವೈದ್ಯರು ಭೇಟಿ ಮಾಡಿದ್ದಾರೆ. ಅವರೆಲ್ಲರಿಗೂ ತಲಾ 250 ಡಾಲರ್ ಹಣ ನೀಡಿದ್ದಾರೆ.
ಅಂದಹಾಗೆ, ಅಲ್ಲಿ ಎಬೊಲಾ ರೋಗದ ನಿಯಂತ್ರಣಕ್ಕಾಗಿ ತೆರಳಿದ್ದ ಅಧಿಕಾರಿಗಳಿಂದ ನೂರಾರು ಮಹಿಳೆಯರು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು. ಆ ಸಂತ್ರಸ್ತೆಯರನ್ನು ಭೇಟಿ ಮಾಡಲು ಡಬ್ಲ್ಯೂಎಚ್‌ಒ ವೈದ್ಯರು ಕಾಂಗೋಗೆ ತೆರಳಿದ್ದರು. ಅದೇ ಸಮಯದಲ್ಲಿ ಸಂತ್ರಸ್ತ ಮಹಿಳೆಯೊಬ್ಬರು ವಿಶೇಷ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿರುವ ತೀವ್ರ ಪರಿಸ್ಥಿತಿಯ ಸಮಯದಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಅವರ ಪರಿಸ್ಥಿತಿಯು ಬಡ ದೇಶಗಳಲ್ಲಿ ವೈದ್ಯಕೀಯ ವೆಚ್ಚವನ್ನು ಭರಿಸಲಾಗದ ಮಹಿಳೆಯರ ದುಃಸ್ಥಿತಿಯನ್ನು ಪ್ರತಿಬಿಂಬಿಸಿತ್ತು ಎಂದು ಡಬ್ಲ್ಯೂಎಚ್‌ಒ ವರದಿ ಹೇಳಿದೆ.
ಆದರೆ, ಆ ಮಹಿಳೆಯಂತಹ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದಾಗಿದ್ದ ಡಬ್ಲ್ಯೂಎಚ್‌ಒ, ಕಾಂಗೋದಲ್ಲಿ ಸುಮಾರು 104 ಸಂತ್ರಸ್ತ ಮಹಿಳೆಯರಿಗೆ ತಲಾ 250 ಡಾಲರ್‌ಗಳನ್ನು ಪರಿಹಾರದ ರೂಪದಲ್ಲಿ ನೀಡಿದೆ. ಅಸೋಸಿಯೇಟೆಡ್ ಪ್ರೆಸ್ ಪಡೆದ ಆಂತರಿಕ ದಾಖಲೆಗಳ ಪ್ರಕಾರ, ಪ್ರತಿ ಸಂತ್ರಸ್ತೆಗೆ ನೀಡಿರುವ ಆ ಮೊತ್ತವು ಕಾಂಗೋಲೀಸ್ ರಾಜಧಾನಿಯಲ್ಲಿ ಕೆಲಸ ಮಾಡುವ ವಿಶ್ವಸಂಸ್ತೆಯ ಕೆಲವು ಅಧಿಕಾರಿಗಳ ಒಂದು ದಿನದ ವೆಚ್ಚಕ್ಕಿಂತ ಕಡಿಮೆಯಾಗಿದೆ. ಅಲ್ಲದೆ, ವೈದ್ಯರ ತಂಡದಲ್ಲಿ ಕಾಂಗೋಗೆ ಭೇಟಿ ನೀಡಿದ್ದ ವೈದ್ಯೆ ಡಾ. ಗಯಾ ಗಾಮ್ಹೇವಾ ಅವರು ದಿನವೊಂದಕ್ಕೆ ಪಡೆದ ವೇತನಕ್ಕಿಂತ ಕೇವಲ 19 ಡಾಲರ್ ಹೆಚ್ಚಾಗಿದೆ.
“ಕಾಂಗೋದಲ್ಲಿ ಅನೇಕ ಜನರು ದಿನಕ್ಕೆ 2.15 ಡಾಲರ್‌ಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ. ಅವರಿಗೆ ಈ ಮೊತ್ತವು ನಾಲ್ಕು ತಿಂಗಳುಗಳ ಜೀವನ ರ್ನಿಹಣೆಗೆ ನೆರವಾಗುತ್ತದೆ” ಎಂದು ಡಬ್ಲ್ಯೂಎಚ್‌ಒ ದಾಖಲೆಗಳು ಹೇಳಿವೆ.
ಅಲ್ಲದೆ, ಆ ಮಹಿಳೆಯರು ಈ ಮೊತ್ತವನ್ನೂ ಹಾಗೆಯೇ ಪಡೆದಿಲ್ಲ. ಅವರು ಆ ಹಣವನ್ನು ಪಡೆಯಲು ‘ಆದಾಯ-ಉತ್ಪಾದಿಸುವ ಉದ್ಯಮ’ ಪ್ರಾರಂಭಿಸಲು ಅಗತ್ಯವಿರುವ ತರಬೇತಿ ಕೋರ್ಸ್‌ಗಳನ್ನು ಪೂರ್ಣಗೊಳಿಸಬೇಕಿತ್ತು ಎಂದು ವರದಿಯಾಗಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಅನೇಕ ಕಾಂಗೋ ಮಹಿಳೆಯರು ಇನ್ನೂ ಯಾವುದೇ ಪರಿಹಾರವನ್ನು ಪಡೆದಿಲ್ಲ. ಹಣವನ್ನು ಪಡೆದಿರುವ ಮಹಿಳೆಯರು ಈ ಮೊತ್ತದಿಂದ ಬದುಕು ಕಟ್ಟಿಕೊಳ್ಳಲು ಅಸಾಧ್ಯ ಎಂದು ಹೇಳಿದ್ದಾರೆ. ಅಲ್ಲದೆ, ಸುಮಾರು 12ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಭರವಸೆಯ ಪ್ರಸ್ತಾಪವನ್ನು ನಿರಾಕರಿಸಿದ್ದಾರೆ ಎಂದು ಡಬ್ಲ್ಯೂಎಚ್‌ಒ ಹೇಳಿಕೊಂಡಿದೆ.
ಕಾಂಗೋದಲ್ಲಿ ಸಂತ್ರಸ್ತ ಮಹಿಳೆಯರಿಗೆ ಡಬ್ಲ್ಯೂಎಚ್‌ಒ ನೀಡಿರುವ ಒಟ್ಟು ಮೊತ್ತ (26,000 ಡಾಲರ್)ವು ಲೈಂಗಿಕ ದೌರ್ಜನ್ಯಗಳಿಗೆ ತುತ್ತಾದ ಮಹಿಳೆಯರಿಗೆ ನೀಡಲು ಡಬ್ಲ್ಯೂಎಚ್‌ಒ ಸ್ಥಾಪಿಸಿರುವ ‘ಬದುಕು ಕಟ್ಟಿಕೊಳ್ಳುವ ಸಹಾಯ ನಿಧಿ’ಯ 20 ಲಕ್ಷ ಡಾಲರ್‌ಗಳಲ್ಲಿ 1% ಮಾತ್ರವಾಗಿದೆ ಎಂದು ಹೇಳಲಾಗಿದೆ.
ಹಣ ಪಡೆದ ಮಹಿಳೆಯರು ತಾವು ಪಡೆದ ಹಣವು ತಮ್ಮ ಬದುಕಿಗೆ ನೆರವಾಗುವುದಿಲ್ಲ ಎಂದಿದ್ದಾರೆ. ತಮಗೆ ಹೆಚ್ಚಿನ ನೆರವು, ನ್ಯಾಯ ಬೇಕೆಂದು ಕೋರಿದ್ದಾರೆ.
ಮಹಿಳಾ ದೌರ್ಜನ್ಯಗಳ ವಿರುದ್ಧ ನಡೆಯುತ್ತಿರುವ ‘ಕೋಡ್ ಬ್ಲೂ’ ಅಭಿಯಾನದ ಸಹ ನಿರ್ದೇಶಕ ಪೌಲಾ ಡೊನೊವನ್ ಅವರು ಸಂತ್ರಸ್ತೆಯರಿಗೆ ಡಬ್ಲ್ಯೂಎಚ್‌ಒ ನೀಡಿರುವ ಮೊತ್ತವನ್ನು ‘ವಿಕೃತಿ‘ ಎಂದು ಬಣ್ಣಿಸಿದ್ದಾರೆ.
“ಜನರಿಗೆ ಬಿಡಿಗಾಸು ನೀಡುವುದು ವಿಶ್ವಸಂಸ್ಥೆಗೆ ತಕ್ಕುದಲ್ಲ. ಆ ಮೊತ್ತವನ್ನು ಸಂತ್ರಸ್ತೆಯರು ತಮ್ಮ ಜೀವನೋಪಾಯಕ್ಕೆ ಬಳಸಬಹುದು. ಆದರೆ, ಲೈಂಗಿಕ ದೌರ್ಜನ್ಯ ಅಥವಾ ಮಗುವಿನ ಜನನಕ್ಕೆ ಕಾರಣವಾಗುವ ಅಪರಾಧಕ್ಕೆ ಅದನ್ನು ಪರಿಹಾರವೆಂದು ಹೇಳಲಾಗದು” ಎಂದು ಅವರು ಹೇಳಿದ್ದಾರೆ.
ವೈದ್ಯರ ತಂಡದಲ್ಲಿದ್ದ ಗಾಮ್ಹೇವಾ ಅವರನ್ನು ಭೇಟಿ ಮಾಡಿದ್ದ ಸಂತ್ರಸ್ತೆಯರಲ್ಲಿ ಇಬ್ಬರು, ‘ತಮಗೆ ಮುಖ್ಯವಾಗಿ ನ್ಯಾಯ ಬೇಕು. ಮಿಗಿಲಾಗಿ ತಮ್ಮ ಮೇಲೆ ದೌರ್ಜನ್ಯ ಎಸಗಿದ ದುಷ್ಕರ್ಮಿಗಳನ್ನು ಮುಖ್ಯವಾಹಿನಿಗೆ ತರಬೇಕು. ಅವರಿಗೆ ಶಿಕ್ಷೆ ವಿಧಿಸಬೇಕು. ಅವರು ಬೇರೆ ಯಾರಿಗೂ ಇಂತಹ ದೌರ್ಜನ್ಯ ಎಸಗದಂತೆ ಮಾಡಬೇಕು’ ಎಂದು ಹೇಳಿರುವುದಾಗಿ ಡಬ್ಲ್ಯೂಎಚ್‌ಒ ತಿಳಿಸಿದೆ. ಆ ಮಹಿಳೆಯರ ಹೆಸರನ್ನು ಗೌಪ್ಯವಾಗಿರಿಸಿದೆ.
ಈ ವರದಿ ಓದಿದ್ದೀರಾ?: ಚುನಾವಣಾ ಬಾಂಡ್ ಹಗರಣ | ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವ ಕೊಳಕು ತಂತ್ರ
“ಮಹಿಳೆಯರ ಮೇಲಾದ ದೌರ್ಜನ್ಯವನ್ನು ಸರಿದೂಗಿಸಲು ನಾವು ಏನೂ ಮಾಡಲು ಸಾಧ್ಯವಿಲ್ಲ. ಡಬ್ಲ್ಯೂಎಚ್‌ಒ ನೀಡುವ ಪರಿಹಾರದ ಪ್ಯಾಕೇಜ್ ಅನ್ನು ನಿರ್ಧರಿಸುವ ಮಾನದಂಡವು ಕಾಂಗೋದಲ್ಲಿನ ಆಹಾರದ ವೆಚ್ಚವನ್ನು ಒಳಗೊಂಡಿರುತ್ತದೆ. ಸಂತ್ರಸ್ತರು ಸಮಾಜದಲ್ಲಿ ಮತ್ತಷ್ಟು ಹಾನಿಯನ್ನು ಅನುಭವಿಸದಂತೆ ಅಗತ್ಯವಿರುವ ಹಣವನ್ನು ನೀಡಬೇಕೆಂದು ಜಾಗತಿಕ ಮಾರ್ಗಸೂಚಿಯನ್ನು ಹೊಂದಿದೆ. ಸ್ಥಳೀಯ ದತ್ತಿ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಇತರ ಏಜೆನ್ಸಿಗಳ ತಜ್ಞರು ನಿಗದಿಪಡಿಸಿದ ಶಿಫಾರಸುಗಳನ್ನು ಡಬ್ಲ್ಯುಎಚ್‌ಒ ಅನುಸರಿಸುತ್ತಿದೆ” ಎಂದು ಗಾಮ್ಹೆವಾ ಹೇಳಿದ್ದಾರೆ.
“ನಿಸ್ಸಂಶಯವಾಗಿ, ನಾವು ಹೆಚ್ಚೇನು ಮಾಡಿಲ್ಲ. ಸಂತ್ರಸ್ತೆಯರಿಗೆ ಹೆಚ್ಚಿನ ಬೆಂಬಲ ಬೇಕು” ಎಂದು ಗಾಮ್ಹೆವಾ ಹೇಳಿದ್ದಾರೆ.
“ಲೈಂಗಿಕ ಶೋಷಣೆ ಮತ್ತು ದೌರ್ಜನ್ಯದ ಪರಿಣಾಮವಾಗಿ ಜನಿಸಿದ 17 ಮಕ್ಕಳ ವೈದ್ಯಕೀಯ ವೆಚ್ಚವನ್ನು ಭರಿಸಲು ಡಬ್ಲ್ಯೂಎಚ್‌ಒ ಸಹಾಯ ಮಾಡಿದೆ” ಎಂದು ಅವರು ತಿಳಿಸಿದ್ದಾರೆ.