ಅಮೆರಿಕದಲ್ಲಿ ತಿಂಗಳೊಳಗೆ ಮೂವರು ಭಾರತೀಯ ಸಂಜಾತ ವಿದ್ಯಾರ್ಥಿಗಳ ನಿಗೂಢ ಸಾವು ಅನಿವಾಸಿ ಭಾರತೀಯರ ನಡುವೆ ಕಳವಳ ಮೂಡಿಸಿದೆ
ಕೆಲವೇ ವಾರಗಳ ಅಂತರದಲ್ಲಿ ಅಮೆರಿಕದಲ್ಲಿ ಮೂವರು ಭಾರತೀಯ ಸಂಜಾತ ಅಮೆರಿಕದ ವಿದ್ಯಾರ್ಥಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಕಳವಳಕಾರಿ ಪ್ರಕರಣಗಳು ವರದಿಯಾಗಿವೆ.
ಭಾರತೀಯ ಮೂಲದ ನೀಲ್ ಆಚಾರ್ಯ ನಿಗೂಢ ಸಾವು ಮತ್ತು ವಿವೇಕ್ ಸೈನ್ ಕೊಲೆಯಾಗಿ ಪತ್ತೆಯಾಗಿರುವ ಬೆನ್ನಲ್ಲೇ ಇದೀಗ ಓಹಿಯೋದಲ್ಲಿ ಮತ್ತೊಬ್ಬ ಭಾರತೀಯ ಸಂಜಾತ ಅಮೆರಿಕನ್ ವಿದ್ಯಾರ್ಥಿಯ ಶವ ಗುರುವಾರ ಪತ್ತೆಯಾಗಿದೆ ಎಂದು ಅಮೆರಿಕದ ನ್ಯೂಯಾರ್ಕನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿಳಿಸಿದೆ.
ಆದರೆ, ಗುರುವಾರ ಶವವಾಗಿ ಪತ್ತೆಯಾದ ಓಹಿಯೋ ನಿವಾಸಿಯಾಗಿದ್ದ ಶ್ರೇಯಸ್ ರೆಡ್ಡಿ ಬೆನಿಗೇರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿಲ್ಲ ಎಂದೂ ರಾಯಭಾರಿ ಕಚೇರಿ ತಿಳಿಸಿದೆ. “ಶ್ರೇಯಸ್ ಸಾವಿಗೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಕೊಲೆಯಾಗಿರುವ ಸಂಭವವಿಲ್ಲ” ಎಂದು ರಾಯಭಾರಿ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. ಬೆನ್ನಿಗೇರಿ ಸಿನ್ಸಿನಾಟಿಯ ಲಿಂಡ್ನರ್ ಸ್ಕೂಲ್ ಆಫ್ ಬ್ಯುಸಿನೆಸ್‌ನ ವಿದ್ಯಾರ್ಥಿಯಾಗಿದ್ದ.
ಇತ್ತೀಚೆಗೆ ಅಮೆರಿಕದ ಇಂಡಿಯಾನಾ ರಾಜ್ಯದಲ್ಲಿ ಪ್ಯುರ್‍ಡ್ಯೂ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದ ನೀಲ್ ಆಚಾರ್‍ಯ ಕಣ್ಮರೆಯಾಗಿ ನಂತರ ಶವವಾಗಿ ಪತ್ತೆಯಾಗಿದ್ದರು. ವಿವೇಕ್ ಜನವರಿ 16ರಂದು ಜಾರ್ಜಿಯದ ಲಿಥೋನಿಯ ನಗರದ ನಿವಾಸಿಯಿಂದ ಕೊಲೆಯಾಗಿದ್ದ.