ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಪ್ರೊಫೆಸರ್ ಮೊಹಮ್ಮದ್ ಯೂನುಸ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ರಾಜಕೀಯ ಪಕ್ಷಗಳ ನಡುವೆ ಸಹಮತ ಏರ್ಪಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ನ್ಯಾಷನಲ್ ಸಿಟಿಜನ್ ಪಾರ್ಟಿ ಮುಖ್ಯಸ್ಥ ನ್ಹಿದ್ ಇಸ್ಲಾಂ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇದು ‘ಬಲಿಷ್ಠರು’ ಬೆತ್ತಲಾಗುವ ಕಾಲ
“ಗುರುವಾರ ಬೆಳಿಗ್ಗೆಯಿಂದಲೇ ಸರ್ ಯೂನುಸ್ ಅವರ ರಾಜೀನಾಮೆ ಬಗೆಗಿನ ಸುದ್ದಿಗಳು ಕೇಳಿ ಬರುತ್ತಿವೆ. ಆದ್ದರಿಂದ ನಾನು ಅವರನ್ನು ಭೇಟಿಯಾಗಿ ಮಾತನಾಡಲು ತೆರಳಿದ್ದೆ.ರಾಜೀನಾಮೆ ಬಗ್ಗೆ ಚಿಂತನೆ ನಡೆಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಭಾವನೆ ಅವರದ್ದು” ಎಂದು ಇಸ್ಲಾಂ ಹೇಳಿದ್ದಾಗಿ ಬಿಬಿಸಿ ಬಾಂಗ್ಲಾ ಸ್ಪಷ್ಟಪಡಿಸಿದೆ.
ಎನ್ ಸಿಪಿ ಸಂಯೋಜಕರ ಪ್ರಕಾರ “ರಾಜಕೀಯ ಪಕ್ಷಗಳು ಸಮಾನ ಮನಸ್ಥಿತಿಗೆ ಬಾರದಿದ್ದರೆ ಕೆಲಸ ಮಾಡಲು ಸಾಧ್ಯವಿಲ್ಲ ಎನ್ನುವುದು ನನ್ನ ಭಾವನೆ” ಎಂದು ಮುಖ್ಯ ಸಲಹೆಗಾರ ಯೂನೂಸ್ ಹೇಳಿದ್ದಾರೆ. ದೇಶದ ಭದ್ರತೆ, ಭವಿಷ್ಯ ಮತ್ತು ಜನಸಮುದಾಯದ ನಿರೀಕ್ಷೆಯ ದೃಷ್ಟಿಯಿಂದ ಯೂನುಸ್ ಮುಂದುವರಿಯುವುದು ಅಗತ್ಯ ಎಂದು ಎನ್ ಸಿಪಿ ಮುಖಂಡ ಹೇಳಿದ್ದರು.