ಜೆಸಿಬಿ ಮೂಲಕ ಹಳೆ ಕಟ್ಟಡ ತೆರುವು ಮಾಡುತ್ತಿದ್ದ ವೇಳೆ ಪಕ್ಕದ ಕಟ್ಟಡದ ಮೇಲಿದ್ದ ಮೊಬೈಲ್ ಟವರ್ ಧರೆಗುರುಳಿದ್ದು, 11 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಘಟನೆ ಬೆಂಗಳೂರಿನ ಲಗ್ಗೆರೆಯ ಪಾರ್ವತಿನಗರದಲ್ಲಿ ನಡೆದಿದೆ. ಎರಡು ಅಂತಸ್ತಿನ ಕಟ್ಟಡದ ಮೇಲೆ ಈ ಮೊಬೈಲ್ ಟವರ್ ನಿಲ್ಲಿಸಲಾಗಿದೆ. ಈ ಎರಡು ಅಂತಸ್ತಿನ ಕಟ್ಟಡದಲ್ಲಿ 11 ಜನ ವಾಸ ಮಾಡುತ್ತಿದ್ದರು. ಈ ಕಟ್ಟಡದ ಪಕ್ಕದಲ್ಲಿದ್ದ ಮತ್ತೊಂದು ಕಟ್ಟಡವನ್ನು ಜೆಸಿಬಿ ಮೂಲಕ ತೆರವು ಮಾಡಿ ಸೈಟ್ ಸ್ವಚ್ಛಗೊಳಿಸಲಾಗುತ್ತಿತ್ತು.
ಈ ವೇಳೆ, ಏಕಾಏಕಿ ಕಟ್ಟಡದ ಸಮೇತ ಮೊಬೈಲ್ ಟವರ್ ನೆಲಕ್ಕೊರಗಿದೆ. ಟವರ್ ಬೀಳುವುದಕ್ಕೂ ಮುಂಚೆ ಮನೆಯೊಳಗಿದ್ದ ಎಲ್ಲರನ್ನೂ ಹೊರಗೆ ಕರೆತರಲಾಗಿತ್ತು. ಹೀಗಾಗಿ, 11 ಮಂದಿಯ ಪ್ರಾಣ ಉಳಿದಿದೆ.
ಮೊಬೈಲ್ ಟವರ್ ಬಿದ್ದಿದ್ದರಿಂದ ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಯ ಮೇಲೆ ಟವರ್ ಬಿದ್ದು ಹಾಳಾಗಿದೆ.
ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಎರಡು ದಿನ ‘ನಮ್ಮ ರಸ್ತೆ’ ಪ್ರದರ್ಶನ ಮತ್ತು ಕಾರ್ಯಾಗಾರ ಆಯೋಜನೆ
ಈ ಬಗ್ಗೆ ದಾಸರಹಳ್ಳಿ ವಲಯ ಇಂಜಿನಿಯರ್‌ಗಳು ಹಾಗೂ ಬಿಬಿಎಂಪಿಯಿಂದ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
ಸೈಟ್ ಕ್ಲೀನ್ ಮಾಡುವಾಗ ಜೆಸಿಬಿಯಿಂದ ಮೊಬೈಲ್ ಟವರ್ ಬಿದ್ದಿದ್ದು, ಸೈಟ್ ಮಾಲೀಕ ಹರೀಶ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.