ಅಲ್ಪಸಂಖ್ಯಾತರಿಗೆ ಅನುದಾನ; ಬಿಜೆಪಿ ನಾಯಕರ ಹೇಳಿಕೆ ಹಾಸ್ಯಾಸ್ಪದ

Date:

2019ರಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಸುಮಾರು ರೂ.2800 ಕೋಟಿ ಇತ್ತು. ಬಿಜೆಪಿ ಸರ್ಕಾರ ರೂ. 1100 ಕೋಟಿಯವರೆಗೆ ಕಡಿತಗೊಳಿಸಿ ಇಲಾಖೆಯ ಸುಮಾರು 16 ಯೋಜನೆಗಳನ್ನು ರದ್ದುಗೊಳಿಸಿತ್ತು

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದ ಮುಸ್ಲಿಂ ಧಾರ್ಮಿಕ ಸಮ್ಮೇಳನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಂತ ಹಂತವಾಗಿ ರೂ.10 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿರುವುದನ್ನು ಸ್ವಾಗತಿಸುತ್ತೇವೆ. 2023-24ನೇ ಸಾಲಿಗಾಗಿ ಕೇವಲ ರೂ. 2101 ಕೋಟಿ ಅನುದಾನ ನೀಡಲಾಗಿದೆ. ಅಲ್ಲದೇ ಮುಖ್ಯಮಂತ್ರಿಯವರ ಹೇಳಿಕೆಯನ್ನು ಬಿಜೆಪಿ ನಾಯಕರು ಅಲ್ಪಸಂಖ್ಯಾತರ ತುಷ್ಟೀಕರಣವೆಂದು ಆರೋಪ ಮಾಡುತ್ತಿರುವುದು ಖಂಡನೀಯ. ತುಷ್ಟೀಕರಣ ಅಥವಾ ಓಲೈಕೆ ಪದದ ಅರ್ಥವೇ ಗೊತ್ತಿಲ್ಲದ ಬಿಜೆಪಿ ನಾಯಕರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ.

2019ರಲ್ಲಿ ರಾಜ್ಯ ಸರಕಾರದ ಬಜೆಟ್ ಗಾತ್ರ ರೂ. 2,45,000 ಕೋಟಿ ಇತ್ತು. ಅಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನ ಸುಮಾರು ರೂ.2800 ಕೋಟಿ ಇತ್ತು. ಅದನ್ನು ಬಿಜೆಪಿ ನಾಯಕರು ರೂ. 1100 ಕೋಟಿವರೆಗೆ ಕಡಿತಗೊಳಿಸಿ ಇಲಾಖೆಯ ಸುಮಾರು 16 ಯೋಜನೆಗಳನ್ನು ರದ್ದುಗೊಳಿಸಿದರು. ಮುಸ್ಲಿಮರ ಮೀಸಲಾತಿ ಸಂವಿಧಾನಬಾಹಿರವಾಗಿ ರದ್ದುಗೊಳಿಸಿ ಚುನಾವಣೆಯಲ್ಲಿ ಬಹಿರಂಗ ಬೆನ್ನು ತಟ್ಟಿಕೊಂಡರು. ಇದರಿಂದ ರಾಜ್ಯದ ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಂದು ಸರಕಾರ ಎಲ್ಲರನ್ನೂ ಒಂದೇ ರೀತಿ ನೋಡಬೇಕು. ಓಲೈಕೆ ಮಾಡಬಾರದೆಂದು ಯಡಿಯೂರಪ್ಪನವರು ಹೇಳಿರುವುದು ಅವರ ಸರಕಾರದಲ್ಲಿ ಅಲ್ಪಸಂಖ್ಯಾತರ ವಿರುದ್ದ ನಡೆದುಕೊಂಡಾಗ, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಅನುದಾನ ಕಡಿತಗೊಳಿಸಿದಾಗ ಒಂದೇ ರೀತಿ ನೋಡುವ ಪರಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಬೇಕಾಗುತ್ತದೆ.

ಬಿಜೆಪಿ ಸರಕಾರದ ಅವಧಿಯಲ್ಲಿ ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟ ಇಬ್ಬರು ಮುಸ್ಲಿಂ ವ್ಯಕ್ತಿಗಳಿಗೆ ಪರಿಹಾರದ ಚೆಕ್ ನೀಡಿ ವಾಪಸ್ ಪಡೆದಿದ್ದು ನೆನಪಿಲ್ಲವೇ? ನರಗುಂದದಲ್ಲಿ ಕೋಮುಗಲಭೆಯಲ್ಲಿ ಮೃತಪಟ್ಟ ಸಮೀರ ಕುಟುಂಬಕ್ಕೆ ಪರಿಹಾರ ನೀಡದೇ ಶಿವಮೊಗ್ಗದಲ್ಲಿ ಮೃತಪಟ್ಟ ಹರ್ಷನ ಕುಟುಂಬಕ್ಕೆ ಪರಿಹಾರ ನೀಡಿದಾಗ ನೆನಪಾಗಲಿಲ್ಲವೇ ಯಡಿಯೂರಪ್ಪನವರೇ?

ಇನ್ನು ಬಿಜೆಪಿ ಸಖ್ಯ ಬೆಳೆಸಿದ ಕುಮಾರಸ್ವಾಮಿಯವರು ಓಲೈಕೆ ರಾಜಕಾರಣದ ಬಗ್ಗೆ ಮಾತನಾಡಿರುವುದು ಅವರ ಜಾತ್ಯತೀತ ಮುಖವಾಡ ಕಳಚಿ ಬಿದ್ದಂತಾಗಿದೆ. ಇಲ್ಲಿಯವರೆಗೂ ಕಾಣದ ಓಲೈಕೆ, ಈಗ ಮಾತ್ರ ಓಲೈಕೆ ಕಾಣುತ್ತಿರುವುದು ಬಿಜೆಪಿ ನಾಯಕರನ್ನು ಮೆಚ್ಚಿಸುವ ಪ್ರಯತ್ನವೆಂಬಂತೆ ಕಾಣುತ್ತಿದೆ. ನಿಜವಾಗಿಯೂ ಈ ದೇಶದಲ್ಲಿ ಮುಸ್ಲಿಮರ ಓಲೈಕೆ ನಡೆದಿದ್ದರೆ ಮುಸ್ಲಿಮರ ಈಗಿನ ಸ್ಥಿತಿ ಭಿನ್ನವಾಗಿರುತ್ತಿತ್ತು. ಹತ್ತು ಹಲವು ಆಯೋಗಗಳು ನೀಡಿದ ವರದಿಯಂತೆ ಮುಸ್ಲಿಮರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಈಗಲೂ ಅತ್ಯಂತ ಹಿಂದುಳಿದ ಸಮುದಾಯವೆಂದೇ ಪರಿಗಣಿಸಿವೆ. ಅಲ್ಲದೇ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಅತ್ಯಂತ ಹೆಚ್ಚಿರುವುದು ಮುಸ್ಲಿಂ ಸಮದಾಯದಲ್ಲೇ ಎನ್ನುವುದು ನೋವಿನ ಸಂಗತಿ.

ರಾಜ್ಯದಲ್ಲಿ ವಿವಿಧ ಸಮುದಾಯಗಳಿಗೆ ಪ್ರತ್ಯೇಕ ಕಲ್ಯಾಣ ಇಲಾಖೆಗಳಿವೆ. ಪ್ರತಿಯೊಂದು ಕಲ್ಯಾಣ ಇಲಾಖೆಗಳಿಗೂ ಪ್ರತ್ಯೇಕ ಅನುದಾನವಿದೆ. ಆ ಸಮುದಾಯದ ಕಾರ್ಯಕ್ರಮಕ್ಕೆ ಹೋದಾಗ ಆ ಇಲಾಖೆಯ ಬಗ್ಗೆ ಚರ್ಚೆ ನಡೆಯುತ್ತದೆ. ಅದರ ಅನುದಾನ ಕೊರತೆ ಬಗ್ಗೆ ನಾಯಕರು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಅದರ ಕುರಿತು ಭರವಸೆ ನೀಡಲಾಗುತ್ತದೆ. ಇದು ಎಲ್ಲಾ ಸಮುದಾಯಗಳ ಕಾರ್ಯಕ್ರಮಗಳಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಅದನ್ನೇ ಬಹಳ ದೊಡ್ಡ ವಿಷಯ ಮಾಡಿ ಒಂದು ಸಮುದಾಯವನ್ನೇ ಗುರಿ ಮಾಡುವುದು ಎಷ್ಟು ಸರಿ?

ರಾಜ್ಯದಲ್ಲಿ ಬಜೆಟ್ ಗಾತ್ರ ಹೆಚ್ಚಾದಂತೆ ಇಲಾಖೆಗಳ ಅನುದಾನವೂ ಹೆಚ್ಚಾಗುತ್ತದೆ. ಅದನ್ನೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಮುಸ್ಲಿಮರನ್ನು ಟೀಕಿಸುವುದು ಬಿಜೆಪಿಯವರ ಹವ್ಯಾಸವಾಗಿದೆ. ಅದನ್ನು ಯಾರೂ ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಇತ್ತೀಚಿಗೆ ತೆಲಂಗಾಣ ರಾಜ್ಯದ ಚುನಾವಣೆಯಲ್ಲಿಯೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ನಮ್ಮ ಸರಕಾರ ಆಡಳಿತಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ರದ್ದುಗೊಳಿಸುತ್ತೇವೆ ಎಂದು ಹೇಳಿದ್ದರು. ಆದರೆ, ಆ ರಾಜ್ಯದ ಜನ ಇವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ.

ಮುಖ್ಯಮಂತ್ರಿಯವರ ಹೇಳಿಕೆ ಹಿಂದೆ ಅಲ್ಪಸಂಖ್ಯಾತ ಸಮುದಾಯದ ಹಿತ ಕಾಪಾಡುವ ಉದ್ದೇಶವಿದೆಯೇ, ಹೊರತು ಓಲೈಕೆಯಲ್ಲ. ಇತರೆ ಸಮುದಾಯದ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಗಳು ವಿವಿಧ ಭರವಸೆಗಳನ್ನು ನೀಡಿದಂತೆ ಮುಸ್ಲಿಂ ಸಮುದಾಯದ ಸಮಾವೇಶದಲ್ಲಿಯೂ ಅನುದಾನ ಹೆಚ್ಚಿಸುವ ಹೇಳಿಕೆ ಹೇಳಿದ್ದಾರೆ ಎನ್ನುವುದು ಬಿಜೆಪಿ ಮತ್ತು ಜನತಾದಳ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಲಿ.

ಡಾ ರಝಾಕ್‌ ಉಸ್ತಾದ್‌
+ posts

ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

ಪೋಸ್ಟ್ ಹಂಚಿಕೊಳ್ಳಿ:

ಡಾ ರಝಾಕ್‌ ಉಸ್ತಾದ್‌
ಡಾ ರಝಾಕ್‌ ಉಸ್ತಾದ್‌
ರಾಜ್ಯ ಉಪಾಧ್ಯಕ್ಷರು, ಹೈದ್ರಾಬಾದ್‌ ಕರ್ನಾಟಕ ಹೋರಾಟ ಸಮಿತಿ ರಾಯಚೂರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನೆಗಳ ಕುರಿತ ಹೊಸ ನಿಯಮ, ಅನಂತ ಅಂಬಾನಿಯ ವನತಾರ ಮತ್ತು ಆನೆ ತಜ್ಞ ಪ್ರೊ. ರಾಮನ್‌ ಸುಕುಮಾರ್

‌ಆನೆಗಳ ಸಾಗಾಟ ಮತ್ತು ಸಾಕಾಣಿಕೆಗೆ ಸಂಬಂಧಿಸಿದ ಹೊಸ ನಿಯಮ(ಕ್ಯಾಪ್ಟಿವ್‌ ಎಲಿಫೆಂಟ್) ಮತ್ತು...

ಹಿಂದುತ್ವದಲ್ಲಿ ಬಂಟ, ಬಿಲ್ಲವರ ಬದುಕು-ಮರಣಕ್ಕೆ ಸಮಾನ ಗೌರವ ಸಿಕ್ಕಿತ್ತಾ ?

ಕೊಲೆ ಮಾಡುವ ತಲವಾರಿಗೆ ಬಂಟ-ಬಿಲ್ಲವ ಎಂಬುದು ಗೊತ್ತಾಗುತ್ತೋ ಇಲ್ವೋ ! ಬಂಟ-...

ಈ ದಿನ ವಿಶೇಷ | ಬ್ರಾಹ್ಮಣರ ಮಾರಣಹೋಮಕ್ಕೆ ಪೆರಿಯಾರ್‌ ಕರೆ ನೀಡಿದ್ದರೆ?

ಜಾತಿವಾದವನ್ನು ಸದಾ ಪ್ರಶ್ನಿಸುವ ಪೆರಿಯಾರ್‌ ಅವರ ಚಿಂತನೆಯ ಇರುವಿಕೆ ಮತ್ತು ಪ್ರಗತಿಪರ...

ಕರ್ನಾಟಕ ಸಂಗೀತ ಪ್ರಕಾರದ ಮುಗಿಯದ ಯುದ್ಧಗಳು ಮತ್ತು ಹಿಡನ್ ಅಜೆಂಡಾ

ಪ್ರಶಸ್ತಿಯ ವಿಚಾರ ದಿನೇ ದಿನೇ ದೊಡ್ಡದಾಗುತ್ತ ಸಾಗಿದೆ. ಅಕಾಡೆಮಿಯನ್ನೇ ಬಹಿಷ್ಕರಿಸುವ ಮಾತುಗಳು...