ಭದ್ರಾವತಿ ತಾಲೂಕಿನ ರಾಜಕಾರಣಿಯೊಬ್ಬರ ಪುತ್ರನೊಬ್ಬ ಜೂಜು ಕೋರರನ್ನು ಕೂಡಿಸಿಕೊಂಡು ಜೂಜಾಟ ಆರಂಭಿಸಿದ್ದಾರೆ. ಅಲ್ಲದೆ, ಬಹಳಷ್ಟು ದಂಧೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಶಿವಮೊಗ್ಗ ಜಿಲ್ಲಾ ಎಸ್‌ಪಿ ಅವರು ಕೂಡಲೇ ಕ್ರಮ ಕೈಗೊಂಡು ಜೂಜಾಟಕ್ಕೆ ಕಡಿವಾಣ ಹಾಕಬೇಕು ಎಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ವಿಡಿಯೋ ಮೂಲಕ ಅಗ್ರಹಿಸಿದ್ದಾರೆ.
ದೀಪು ಶೆಟ್ಟಿಗಾರ್ ಅವರಿಗೆ ಭದ್ರಾವತಿಯಿಂದ ಸುಮಾರು 18 ಕರೆಗಳು ಬಂದಿದ್ದು, ದಂಧೆ ನಡೆಯುತ್ತಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿರುವುದಾಗಿ ವಿಡಿಯೋ ಮೂಲಕ ವಿವರಿಸಿದ್ದಾರೆ.
“ರಾಜಕಾರಣಿಯ ಪುತ್ರನೊಬ್ಬ ಒಸಿ ದಂಧೆಯ ಮೂಲಕ ದಿನಕ್ಕೆ 7 ಲಕ್ಷಕ್ಕೂ ಅಧಿಕ ಅಕ್ರಮವಾಗಿ ಹಣ ಗಳಿಸುತ್ತಿದ್ದು, ಇದರ ಕುರಿತು ಪೊಲೀಸ್ ಇಲಾಖೆಗೂ ಮಾಹಿತಿ ಇದೆ. ಆದರೂ ಯಾವುದೇ ಕ್ರಮ ಜರುಗಿಸುತ್ತಿಲ್ಲ, ಬಂಧಿಸುತ್ತಿಲ್ಲ ಮತ್ತು ಈ ದಂಧೆ ನಿಲ್ಲಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆಯೆಂದು ಭದ್ರಾವತಿ ಸಾರ್ವಜನಿಕರು ಆರೋಪಿಸುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ದಂಧೆ ಕುರಿತು ವಿಡಿಯೋ ಹೊರಬಂದ ನಾಲ್ಕು ದಿನ ನಿಲ್ಲಿಸುತ್ತಾರೆ ಮತ್ತೆ ಪ್ರಾರಂಭ ಮಾಡುತ್ತಾರೆ. ಆದರೆ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿಲ್ಲ” ಎಂದು ತಿಳಿಸಿದ್ದಾರೆ.
“ರಾಜಕೀಯ ಅಧಿಕಾರ ಬಳಸಿಕೊಂಡು ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಅಧಿಕಾರಿಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ತಂದೆಯ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ದಂಧೆಯನ್ನು ಮುಂದುವರೆಸುತ್ತಿದ್ದಾರೆಂದು ಅಥಳೀಯರು ಮಾಹಿತಿ ನೀಡಿದ್ದಾರೆ. ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿಗಳು ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಿರುವುದಾಗಿ ಸಾರ್ವಜನಿಕರಿಗೆ ತಿಳಿಸಿದ್ದಾರೆ” ಎಂದು ದೀಪು ಶೆಟ್ಟಿಗಾರ್ ಮಾಹಿತಿ ನೀಡಿದರು.
ಸ್ಥಳೀಯ ನಿವಾಸಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಶಿವಮೊಗ್ಗ ನಗರದಲ್ಲೇ ಸುಮಾರು 50ಕ್ಕೂ ಅಧಿಕ ಮಂದಿ ಒಸಿ ದಂಧೆಯ ಏಜೆಂಟ್ ಅಥವಾ ಬ್ರೋಕರ್‌ಗಳು ಇದ್ದಾರೆ. ಉದಾಹರಣೆಗೆ ₹10ಕ್ಕೆ ₹800 ಡ್ರಾ. ಅರ್ಧಗಂಟೆಗೆ ಒಮ್ಮೆ ಲಾಟರಿ ಇದನ್ನು ʼಓಪನ್ ಕ್ಲೋಸ್ʼ ಎಂದು ಕರೆಯಲಾಗಿದೆ. ಇದರ ಬ್ರೋಕರ್‌ಗಳಿಗೆ ಬಂದಂತಹ ಲಾಭದಲ್ಲಿ ಕಮಿಷನ್ ಕೊಡಬೇಕಾಗಿದೆ ಮತ್ತು ಏಜೆಂಟ್‌ಗಳಿಗೆ ಟ್ರಿಪ್ ಆಯೋಜನೆ ಮಾಡಲಾಗುತ್ತದೆ” ಎಂದು ತಿಳಿಸಿದರು.
ಸಾರ್ವಜನಿಕ ಸ್ಥಳಗಳಾದ ಪೆಟ್ಟಿಗೆ ಅಂಗಡಿ, ಲಾಡ್ಜ್, ಮನೆ, ಸಣ್ಣಸಣ್ಣ ಕ್ಷೌರದಂಗಡಿಗಳಲ್ಲಿ ಈ ದಂಧೆ ಹೆಚ್ಚಾಗಿ ಕಂಡುಬಂದಿದ್ದು, ಸಾಮಾನ್ಯ ಕೂಲಿ ಕಾರ್ಮಿಕರು ಈ ದಂಧೆಯ ಮೋಸಕ್ಕೆ ಒಳಗಾಗುತ್ತಿದ್ದಾರೆ. ಇದೊಂದು ಅಕ್ರಮ ಚಟುವಟಿಕೆ ಆಗಿದ್ದು, ಕಾನೂನು ಬಾಹಿರವಾಗಿದೆ. ಇದನ್ನು ತಡೆಗಟ್ಟಲು ಉನ್ನತ ಪೊಲೀಸ್ ಅಧಿಕಾರಿಗಳು ಮನಸ್ಸು ಮಾಡಿದರೆ ಕಷ್ಟವೇನು ಆಗುವುದಿಲ್ಲ” ಎಂದು ಸಾರ್ವಜನಿಕರು ಅಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಲೋಕಸಭಾ ಚುನಾವಣೆಯಲ್ಲಿ ಫ್ಯಾಸಿಸ್ಟ್ ಶಕ್ತಿ ಸೋಲಿಸಲು ತಯಾರಿ ಅಗತ್ಯ: ಶ್ರೀನಾಥ್ ಪೂಜಾರಿ
ದೀಪು ಶೆಟ್ಟಿಗಾರ್ ಭದ್ರಾವತಿಯಲ್ಲಿ ಇಸ್ಪೀಟ್ ಒಸಿ ಮತ್ತು ಅಕ್ರಮ್ ಚಟುವಟಿಕೆಯಲ್ಲಿ ರಾಜಕಾರಣಿಯೊಬ್ಬರ ಮಗ ಇದೆಲ್ಲ ನಡೆಸುತ್ತಿದ್ದಾರೆ ಎಂಬ ವಿಡಿಯೋ ಹರಿಬಿಟ್ಟ ನಂತರ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಬೆಗಳು ಶುರುವಾಗಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿರುವ ಪೋಸ್ಟ್‌ಗಳು ವೈರಲ್ ಆಗುತ್ತಿವೆ.
“ಇಸ್ಪೀಟು, ಓಸಿ, ಕ್ರಿಕೆಟ್ ಬೆಟ್ಟಿಂಗ್‌ನಂತಹ ಅಕ್ರಮ ದಂಧೆಗಳು ಮತ್ತು ಪೊಲೀಸ್ ಸ್ಟೇಷನ್ನಗಳ ಲಕ್ಷ ಲಕ್ಷ ಮಾಮೂಲು ಅತಿರೇಕದ ಕಾರಣದಿಂದ ಗಲಾಟೆಗಳು ಹೆಚ್ಚಾಗಲು ಕಾರಣವಾಗಿದೆ” ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.