ವಿಜ್ಞಾನವೆಂಬುದು ಜನರ ಜೀವನ ಮಟ್ಟ ಸುಧಾರಣೆ ಮಾಡಲು ಒಂದು ಸಾಧನವಾಗಿದೆ. ವಿಜ್ಞಾನ ಬಾಹ್ಯಾಕಾಶದಂತೆ ವಿಸ್ತಾರವಾದದ್ದು, ಅಧ್ಯಯನ ಮಾಡಿದಂತೆಲ್ಲ ಹೊಸದೊಂದು ಗೋಚರವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು, ಪ್ರೇಕ್ಷಕರಾಗಿ ನೋಡದೇ ವಿಜ್ಞಾನಿಗಳಾಗಿ ಸಾಧನೆಗೆ ಮುನ್ನಡೆಬೇಕು ಎಂದು ಚಂದ್ರಯಾನ-3ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವಿಜ್ಞಾನಿ ಡಾ. ಬಿ.ಎಚ್.ಎಂ. ದಾರುಕೇಶ್ ಹೇಳಿದ್ದಾರೆ.
ರಾಯಚೂರಿನಲ್ಲಿ ಜಿಲ್ಲಾಡಳಿತ ಆಯೋಜಸಿದ್ದ ‘ವಿಜ್ಞಾನಿ-ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ವಿಜ್ಞಾನ ವಿಸ್ತಾರವಾಗಿದ್ದು, ತಿಳಿಕೊಳ್ಳಲು ಸಾಕಷ್ಟಿದೆ. ಹೊಸ ಹೊಸ ವಿಷಯ ಅಧ್ಯಯನ ಮಾಡಿದಂತೆ ಮತ್ತೊಂದು ವಿಷಯ ಅದ್ಯಯನ ಮಾಡುವುದಕ್ಕೆ ಹೊಸ ವಿಷಯ ಹುಡುಕಿಕೊಡುತ್ತಿದೆ, ಹೊಸ ಅವಿಷ್ಕಾರ ಮಾಡಲು ದಾಪುಗಾಲು ಇಡಲು ಸಾಧ್ಯವಾಗುತ್ತಿದೆ” ಎಂದರು.
“ವಿಜ್ಞಾನ ಜನರ ಜೀವನದ ಸುಧಾರಣೆ ಮಾಡಲು ಒಂದು ಪ್ರಯೋಗ ಶಾಲೆ. ಅದರಲ್ಲಿ ಪ್ರತಿಯೊಂದು ವಿಷಯದಲ್ಲೂ ಹೊಸದನ್ನು ಅಧ್ಯಯನ ಮಾಡುತ್ತಲೆ ಇದ್ದೇವೆ. ಚಂದ್ರಯಾನ-3 ಉಡಾವಣೆಯಿಂದ ಸಾಕಷ್ಟು ಅಧ್ಯಯನಗಳು ನಡೆದಿವೆ. ಚಂದ್ರನಲ್ಲಿ ನೀರು, ಮಣ್ಣು, ಗಾಳಿ ಮತ್ತು ಜೀವಿಸಬೇಕಾದ ವಾತಾವರಣದ ಕುರಿತು ಅಧ್ಯಯನ ನಡೆಯುತ್ತಿದೆ. ಎಲ್ಲ ದೇಶಗಳು ಚಂದ್ರನ ಉತ್ತರ ದೃವದಲ್ಲಿ ಅಧ್ಯಯನ ನಡೆಸಿವೆ. ಆದರೆ, ದಕ್ಷಿಣ ದೃವದಲ್ಲಿ ಯಾವ ದೇಶವು ಕಾಲಿಟ್ಟಿರಲಿಲ್ಲ. ಭಾರತ ಏಕೈಕ ದೇಶವಾಗಿ ಮುಂದಡಿ ಇಟ್ಟಿದೆ. ವಿಜ್ಞಾನದಿಂದ ಜಗತ್ತಿನ ಅಧ್ಯಯನ ಜೊತೆಗೆ ಅಲ್ಲಿರುವ ವಾತಾವರಣ ಮತ್ತು ಚಂದ್ರನಲ್ಲಿ ಯಾವ ವಸ್ತುಗಳು ಲಭ್ಯವಿದೆ ಎಂಬುದನ್ನು ಅಧ್ಯಯನ ಮಾಡಲಾಗುತ್ತಿದೆ” ಎಂದರು.
ಜಿಪಂ ಸಿಇಒ ರಾಹುಲ್ ಪಾಂಡ್ವೆ ತುಕಾರಾಂ ಮಾತನಾಡಿ, “ದೇಶದಲ್ಲಿ ವಿಜ್ಞಾನದ ಅವಶ್ಯಕತೆ ಹೆಚ್ಚಿದೆ. ಪ್ರತಿ ವರ್ಷ ಹೊಸ ಹೊಸ ಅದ್ಯಯನಗಳು ನಡೆಯುತ್ತಿವೆ. ವಿದ್ಯಾರ್ಥಿಗಳಿಗೆ ವಿಜ್ಞಾನಿಗಳಿಂದ ಸಂವಾದ ನಡೆಸಿ, ಮಾಹಿತಿ ಪಡೆಯುವುದರ ಜೊತೆಗೆ ಜ್ಞಾನ ಬೆಳೆಸಿಕೊಳ್ಳಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಆರ್ ಇಂದಿರಾ, ಡಯಟ್ ಪ್ರಾಚಾರ್ಯ ಮಲ್ಲಿಕಾರ್ಜುನ, ಭಾರತ ಜ್ಞಾನನ ಸಮಿತಿಯ ಸೈಯದ್ ಹಫೀಜುಲ್ಲಾ, ವಿಜ್ಞಾನ ಉಪ ಕೇಂದ್ರದ ಅಧಿಕಾರಿ ಸೇರಿದಂತೆ ವಿದ್ಯಾರ್ಥಿಗಳು ಶಿಕ್ಷಕರು ಭಾಗವಹಿಸಿದ್ದರು.
ವರದಿ : ಹಫೀಜುಲ್ಲ