ದೇಶದ ಅಭಿವೃದ್ಧಿಯ ಬಗ್ಗೆ, ನಿರುದ್ಯೋಗದ ಬಗ್ಗೆ, ಅತ್ಯಂತ ಗಂಭೀರ ವಿಚಾರಗಳ ಬಗ್ಗೆ ಮೋದಿ ಉದ್ದಕ್ಕೂ ತುಟಿ ಬಿಚ್ಚಿದವರೇ ಅಲ್ಲ. ಪ್ರಧಾನಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಲು ವಿಪಕ್ಷಗಳು ನಾನಾ ಕಸರತ್ತು ಮಾಡಿದವು. ಸಂಸತ್ತಿನಿಂದ ದಾಖಲೆಯ ಸಂಖ್ಯೆಯ ಸಂಸದರನ್ನು ಅಮಾನತು ಮಾಡಲಾಗಿದೆ. ಕನಿಷ್ಠ ಈಗಲಾದರೂ ಮೋದಿಯವರು ಜನರ ಪ್ರಶ್ನೆಗಳಿಗೆ ಉತ್ತರಿಸುವರೇ?
‘ಚರ್ಚೆ, ಸಂವಾದ, ವಿಚಾರ ವಿನಿಮಯಕ್ಕಾಗಿ ಇರುವ ಜಾಗವೇ ಸಂಸತ್ತು’
2019ರ ಜನವರಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ಕೊಟ್ಟಿದ್ದ ಸಂದರ್ಶನದಲ್ಲಿ ಹೀಗೊಂದು ಹೇಳಿಕೆ ನೀಡಿದ್ದರು. ಆದರೆ, ತಮ್ಮ ಪ್ರಧಾನಿ ಮಂತ್ರಿಗಿರಿಯ ಎರಡು ಅವಧಿಗಳ ಉದ್ದಕ್ಕೂ ಅವರು ಮಾಡಿದ್ದು ಅದಕ್ಕೆ ವ್ಯತಿರಿಕ್ತವಾದ ಕೆಲಸ. ತಮ್ಮ ವಿರುದ್ಧ ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗಳಿಗೆ ಮೋದಿ ಅವರು ಯಾವತ್ತೂ ಉತ್ತರ ನೀಡಿದವರೇ ಅಲ್ಲ.
ದೇಶದ ಅಭಿವೃದ್ಧಿಯ ಬಗ್ಗೆ, ನಿರುದ್ಯೋಗದ ಬಗ್ಗೆ, ಅತ್ಯಂತ ಗಂಭೀರ ವಿಚಾರಗಳ ಬಗ್ಗೆ ಮೋದಿ ಉದ್ದಕ್ಕೂ ತುಟಿ ಬಿಚ್ಚಿದವರೇ ಅಲ್ಲ. ಪ್ರಧಾನಿ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡಲು ವಿಪಕ್ಷಗಳು ನಾನಾ ಕಸರತ್ತು ಮಾಡಿದವು.
ಒಮ್ಮೆಯಂತೂ ಮಣಿಪುರದ ಬಗ್ಗೆ ಮೋದಿಯವರ ಬಾಯಿ ಬಿಡಿಸಲೇಬೇಕು ಎಂದು ವಿರೋಧ ಪಕ್ಷ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿತ್ತು. ನಿರ್ಣಯದ ವಿರುದ್ಧ ಮೋದಿ ಎರಡು ಗಂಟೆಗಳ ಕಾಲ ಮಾತನಾಡಿದ್ದರು. ಆದರೆ, ಅದರಲ್ಲಿ ಅವರು ಮಣಿಪುರದ ಬಗ್ಗೆ ಮಾತನಾಡಿದ್ದು ಕೇವಲ ನಾಲ್ಕು ನಿಮಿಷ ಮಾತ್ರ; ಅದೂ, 90 ನಿಮಿಷದ ಭಾಷಣದ ನಂತರ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ ನಂತರ. ಮೋದಿ ಸಂಸತ್ತಿಗೆ ಅವಮಾನ ಮಾಡಿದ್ದಾರೆ ಎಂದು ಆಗ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ಈಗಲೂ ಮೋದಿ ಸರ್ಕಾರದ ಮೌನ ಸಂಸತ್ತಿನ ಇತಿಹಾಸದಲ್ಲಿಯೇ ದೊಡ್ಡದೊಂದು ವಿವಾದಕ್ಕೆ ಕಾರಣವಾಗಿದೆ. ಈಚೆಗೆ ನಡೆದಿದ್ದ ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಈ ಕುರಿತು ಉಭಯ ಸದನಗಳಲ್ಲೂ ಗದ್ದಲ, ಕೋಲಾಹಲ ಸೃಷ್ಟಿಯಾಗಿದೆ. ಗದ್ದಲವನ್ನು ಕಾರಣವಾಗಿಸಿಕೊಂಡು ಇದುವರೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒಟ್ಟು 141 ಸಂಸದರನ್ನು ಸಂಸತ್ತಿನ ಚಳಿಗಾಲದ ಅಧಿವೇಶನ ಮುಗಿಯುವವರೆಗೆ ಅಮಾನತು ಮಾಡಲಾಗಿದೆ. ಸಂಸತ್ತಿನ ಇತಿಹಾಸದಲ್ಲಿಯೇ ಎಂದೂ ಇಷ್ಟು ಮಂದಿ ಸಂಸದರನ್ನು ಸಂಸತ್ತಿನಿಂದ ಅಮಾನತು ಮಾಡಿದ ನಿದರ್ಶನವಿಲ್ಲ.
ಇಷ್ಟಕ್ಕೂ ಮೋದಿ ಯಾವ ಸಂದರ್ಭದಲ್ಲಿ ಮೌನ ವಹಿಸುತ್ತಾರೆ? ವಿಪಕ್ಷಗಳ ಎಂಥ ಪ್ರಶ್ನೆಗಳಿಗೆ ಉತ್ತರಿಸದೇ ಜಾರಿಕೊಳ್ಳುತ್ತಾರೆ?
ಪ್ರಧಾನಿ ಮೋದಿ ಅವರಿಗೆ ದೇಶದ ಜನ ಕೇಳುತ್ತಿರುವ ಕೆಲವು ಮುಖ್ಯ ಪ್ರಶ್ನೆಗಳು ಹೀಗಿವೆ:
- 2014ರ ಚುನಾವಣಾ ಪ್ರಚಾರದಲ್ಲಿ ಮೋದಿ ಕಾಂಗ್ರೆಸ್ ಅನ್ನು ನಿರುದ್ಯೋಗದ ವಿಚಾರಕ್ಕೆ ಗೇಲಿ ಮಾಡಿದ್ದರು. ತಾವು ಅಧಿಕಾರಕ್ಕೆ ಬಂದರೆ, ಒಂದು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಒಂಬತ್ತು ವರ್ಷಗಳಿಂದ ಮೋದಿಯವರು ಅಧಿಕಾರದಲ್ಲಿದ್ದಾರೆ. ಅವರು ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದಾರೆ?
- 2022ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಮೋದಿ ಘೋಷಿಸಿದ್ದರು. ಆದರೆ, ರೈತರ ಆದಾಯ ಹೆಚ್ಚಾಗಿದ್ದು ಕೇವಲ 5% ಮಾತ್ರ. ಇದೇ ವೇಗದಲ್ಲಿ ರೈತರ ಆದಾಯ ದ್ವಿಗುಣಗೊಳ್ಳಬೇಕಾದರೆ, ಸುಮಾರು 15 ವರ್ಷ ಬೇಕು. ರೈತರು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಮೋದಿ ಸರ್ಕಾರ ಜಾರಿ ಮಾಡಿದ ಬೆಳೆ ವಿಮೆ ಒಂದು ವಿಫಲ ಹಾಗೂ ವಂಚನೆಯ ಜಾಲ ಎನ್ನುವುದು ಬಹಿರಂಗಗೊಂಡಿದೆ. ಮೋದಿಯವರು ಈ ಬಗ್ಗೆ ಏನು ಹೇಳುತ್ತಾರೆ?
- 2015ರ ಫೆಬ್ರವರಿಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್, ಮೋದಿಯವರಿಗೆ ಬ್ಯಾಂಕ್‌ಗಳಿಗೆ ವಂಚಿಸಿದ್ದ ಬಿಲಿಯನೇರ್‌ಗಳ ಒಂದು ಪಟ್ಟಿಯನ್ನು ಕೊಟ್ಟು, ಅವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಪ್ರಧಾನಿಗಳು ವಂಚಕ ಬಿಲಿಯನೇರ್‌ಗಳ ವಿರುದ್ಧ ಯಾವ ಕ್ರಮವನ್ನೂ ಜರುಗಿಸಲಿಲ್ಲ. ಆ ಪಟ್ಟಿಯನ್ನು ಬಹಿರಂಗ ಕೂಡ ಮಾಡಲಿಲ್ಲ. ಬದಲಿಗೆ ಇನ್ನೊಂದಷ್ಟು ಉದ್ಯಮಿಗಳು ಬ್ಯಾಂಕ್‌ಗಳಿಗೆ ಮೋಸ ಮಾಡಲು, ದೇಶ ತೊರೆಯಲು ಸಹಕಾರ ನೀಡಿದ ಆರೋಪಕ್ಕೆ ಗುರಿಯಾದರು. ಈ ಆರೋಪದ ಬಗ್ಗೆ ಪ್ರಧಾನಿಗಳು ಏನಂತಾರೆ?
- ನವೆಂಬರ್ 14, 2016ರಂದು ನೋಟು ಅಮಾನ್ಯೀಕರಣದ ಜಾರಿ ಮಾಡುತ್ತಾ, “ನನಗೆ 50 ದಿನ ಕೊಡಿ. ನಂತರ ನನ್ನ ಉದ್ದೇಶಗಳಲ್ಲಿ, ಕಾರ್ಯಗಳಲ್ಲಿ ಏನಾದರೂ ಲೋಪ ಕಂಡುಬಂದರೆ, ನನಗೆ ಶಿಕ್ಷೆ ನೀಡಿ” ಎಂದು ಪ್ರಧಾನಿ ಮೋದಿಯವರು ಘೋಷಿಸಿದ್ದರು. ಕೆಲವು ತಿಂಗಳ ನಂತರ ನೋಟು ಅಮಾನ್ಯೀಕರಣದಿಂದ ಕಪ್ಪು ಹಣ ಹೊರತೆಗೆಸುವ ವಿಚಾರದಲ್ಲಿ ಹೆಚ್ಚೇನೂ ಪ್ರಯೋಜವಾಗಿಲ್ಲ” ಎಂದು ರಿಸರ್ವ್ ಬ್ಯಾಂಕ್ ಹೇಳಿತು. ನೀವು ಯಾವ ಪೂರ್ವ ತಯಾರಿಯೂ ಇಲ್ಲದೇ ನೋಟು ರದ್ದು ಘೋಷಿಸಿದ್ದರಿಂದ ಕೋಟ್ಯಂತರ ಮಂದಿ ಬದುಕಿನ ಆಸರೆ ಕಳೆದುಕೊಂಡರು. ನೂರಾರು ಜನ ಪ್ರಾಣ ಕಳೆದುಕೊಂಡರು. ಸಾವಿರಾರು ಉದ್ಯಮಗಳು ನಷ್ಟವಾಗಿ ಬಾಗಿಲು ಮುಚ್ಚಿದವು. ದೇಶದ ಬಡವರು, ರೈತರು, ಕಾರ್ಮಿಕರು ಅತಿ ಹೆಚ್ಚು ತೊಂದರೆಗೊಳಗಾದರು. ಜಿಡಿಪಿ ಸಾರ್ವಕಾಲಿಕ ಕುಸಿತ ಕಂಡಿತು. ಅಭಿವೃದ್ಧಿಯ ವಿಚಾರದಲ್ಲಿ ದೇಶ ದಶಕಗಳಷ್ಟು ಹಿಂದಕ್ಕೆ ಹೋಯಿತು. ಇದರ ಬಗ್ಗೆ ಪ್ರಧಾನಿಗಳು ಏನು ಹೇಳುತ್ತಾರೆ?
- ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ಮುಂತಾದ ಸಾಂವಿಧಾನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೆ ಮೋದಿಯವರ ಆಡಳಿತದಲ್ಲಿ ಭಂಗ ಬಂತು ಎನ್ನುವ ವ್ಯಾಪಕ ಆರೋಪ ಬಂತು. ತಮ್ಮ ರಾಜಕೀಯ ವಿರೋಧಿಗಳ ಮೇಲೆ ದಾಳಿ ಮಾಡುವುದು, ತಮ್ಮ ಸ್ವಪಕ್ಷದ ನಾಯಕರನ್ನು ಕಾಪಾಡುವುದಕ್ಕೆ ಸದರಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದವು. ಅದಕ್ಕೆ ಮೋದಿ ಅವರ ಉತ್ತರವೇನು?
- ದೇಶದಲ್ಲಿ ದ್ವೇಷ ಭಾಷಣಗಳು ವಿಪರೀತ ಹೆಚ್ಚಾಗಿವೆ. ಅವನ್ನನುಸರಿಸಿ ನಡೆಸಲಾಗುತ್ತಿರುವ ಗುಂಪು ಹಲ್ಲೆಗಳಿಗೆ ನೂರಾರು ಜನ ಬಲಿಯಾಗಿದ್ದಾರೆ. ಅದರ ಬಗ್ಗೆ ಪ್ರಧಾನಿ ಮೌನ ಮುರಿಯುವರೇ?
- ಬಿಜೆಪಿ ಆಡಳಿತಕ್ಕೆ ಬಂದ ನಂತರ ಉತ್ತರ ಪ್ರದೇಶದಂಥ ಕೆಲವು ರಾಜ್ಯಗಳಲ್ಲಿ ಮತ್ತು ಒಟ್ಟಾರೆ ದೇಶದಲ್ಲಿ ದಲಿತರು, ಆದಿವಾಸಿಗಳು, ಮಹಿಳೆಯರ ಮೇಲಿನ ಹಲ್ಲೆ, ದೌರ್ಜನ್ಯ, ಅತ್ಯಾಚಾರಗಳು ವಿಪರೀತ ಹೆಚ್ಚಾಗಿವೆ. ಕಾರಣವೇನು?
- 2015ರಲ್ಲಿ ಫ್ರಾನ್ಸ್ ಪ್ರವಾಸದ ನಂತರ ತಾವು 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು. ತಮ್ಮ ಸ್ನೇಹಿತ ಅದಾನಿಗೆ ನೆರವು ನೀಡಲೆಂದೇ ಅವರು ರಫೇಲ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನುವ ವ್ಯಾಪಕ ಆರೋಪ ಕೇಳಿಬಂತು. ಅದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದೆ ಎನ್ನಲಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಇಂಥದ್ದೊಂದು ನಿರ್ಧಾರಕ್ಕೆ ಬರುವ ಮುನ್ನ ಪ್ರಧಾನಿಯವರು ಅದನ್ನು ಸಂಸತ್ತಿನಲ್ಲಿಟ್ಟು ಸಂಪುಟದ ಒಪ್ಪಿಗೆ ಪಡೆದಿರಲೇ ಇಲ್ಲ. ರಫೇಲ್ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಮೋದಿ ಸರ್ಕಾರ ಯಾವ ರೀತಿಯ ಪ್ರಕ್ರಿಯೆಯನ್ನು ನಡೆಸಿತು ಎನ್ನವ ದಾಖಲೆಗಳನ್ನು ಪ್ರಧಾನಿ ಬಹಿರಂಗ ಪಡಿಸುವರೇ?
- ಕೋವಿಡ್ ಸಾಂಕ್ರಾಮಿಕದಿಂದ ಭಾರತವನ್ನು ಕಾಪಾಡಿದ್ದು ಮೋದಿ ಎನ್ನುವಂತೆ ಬಿಜೆಪಿ ಹಾಗೂ ಸಂಘ ಪರಿವಾರದವರು ಪ್ರಚಾರ ಮಾಡಿದರು. ಭಾರತ ಉಳಿದ ದೇಶಗಳಿಗಿಂತ ಕೋವಿಡ್ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಣೆ ಮಾಡಿತು ಎಂದು ಕೇಂದ್ರ ಸರ್ಕಾರ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿತು. ಆದರೆ, ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ, ಜಗತ್ತಿನಲ್ಲಿಯೇ ಅತಿ ಹೆಚ್ಚು ಮಂದಿ- 47 ಲಕ್ಷ ಮಂದಿ- ಕೋವಿಡ್‌ನಿಂದ ಸತ್ತಿದ್ದು ಭಾರತದಲ್ಲಿ. ಇನ್ನು ಕೋವಿಡ್ ಲಾಕ್‌ಡೌನ್‌ನಿಂದ ಹೊಟ್ಟೆಗೆ ಹಿಟ್ಟಿಲ್ಲದೇ, ಮಾಡಲು ಕೆಲಸವಿಲ್ಲದೇ ಸತ್ತವರ ಸಂಖ್ಯೆಯೂ ದೊಡ್ಡದೇ. ಅದರ ಲೆಕ್ಕ ಇಟ್ಟಿದ್ದಾರಾ ಪ್ರಧಾನಿ ಮೋದಿಯವರು?
- ಅಂಬಾನಿಗೂ ಅದಾನಿಗೂ ಮೋದಿಗೂ ಇರುವ ಸಂಬಂಧವೇನು ಎಂದು ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸಂಸತ್ತಿನ ಒಳಗೆ ಮತ್ತು ಹೊರಗೆ ಪದೇ ಪದೇ ಕೇಳುತ್ತಲೇ ಇದ್ದಾರೆ. ಮೋದಿ ಅವಧಿಯಲ್ಲಿ ಅದಾನಿ ಶ್ರೀಮಂತಿಕೆ ಬೃಹತ್ ಆಗಿ ಬೆಳೆದಿದ್ದೇಗೆ? ಅದಕ್ಕೂ ಮೋದಿ ಸರ್ಕಾರದ ನಿಯಮಾವಳಿಗಳಿಗೂ ಇರುವ ಸಂಬಂಧವೇನು? ಹಿಂಡೆನ್‌ಬರ್ಗ್ ವರದಿ ಬಗ್ಗೆ ಮೋದಿ ಏನು ಹೇಳುತ್ತಾರೆ?
- ಸತತ ಏಳು ತಿಂಗಳಿನಿಂದ ಮಣಿಪುರದಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಆದರೆ, ಪ್ರಧಾನಿ ಮೋದಿಯವರು ಅಲ್ಲಿಯ ಪರಿಸ್ಥಿತಿಯನ್ನು ಹತೋಟಿಗೆ ತರುವ ದಿಕ್ಕಿನಲ್ಲಿ ಕನಿಷ್ಠ ಪ್ರಯತ್ನವನ್ನೂ ಮಾಡುತ್ತಿಲ್ಲ ಎನ್ನುವ ಟೀಕೆಗಳಿವೆ. ಅದಕ್ಕೆ ಮೋದಿಯವರ ಉತ್ತರವೇನು?
- ದೇಶವನ್ನು ಕಾಪಾಡುವುದು ಬಿಜೆಪಿಯಿಂದ ಮಾತ್ರ ಸಾಧ್ಯ ಎನ್ನುವುದು ಅವರ ವಾದ. ಹೀಗಿರುವಾಗ ಬಿಜೆಪಿ ಸಂಸದನಿಂದಲೇ ಪಾಸ್ ಪಡೆದ ಆಗಂತುಕರು ಸಂಸತ್ತಿನಲ್ಲಿ ಭದ್ರತಾ ಲೋಪದ ಮೂಲಕ ಒಳ ಪ್ರವೇಶಿಸಿ, ಹೊಗೆ ಡಬ್ಬಿ ಸಿಡಿಸಿದರೂ ಪ್ರಧಾನಿಗಳು ಹಾಗೂ ಗೃಹ ಮಂತ್ರಿಗಳು ಅದರ ಬಗ್ಗೆ ಚಕಾರ ಎತ್ತದಿರುವುದು ಯಾಕೆ?
- ತಮ್ಮ ನಿಜವಾದ ವಿದ್ಯಾರ್ಹತೆ ಏನು ಅನ್ನುವುದನ್ನು ಮೋದಿ ಈಗಲಾದರೂ ಬಹಿರಂಗಪಡಿಸುವರೇ?