ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಂಡುಬರುತ್ತಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಸಮರ ಸಾರಿರುವ ಬೆಂಗಳೂರು ಸಂಚಾರ ಪೊಲೀಸರು ನಗರದ ಪ್ರತಿ ಜಂಕ್ಷನ್‌ಗಳಲ್ಲಿಯೂ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾ ಅಳವಡಿಸಿದ್ದಾರೆ. ಇದೀಗ, ಅಡ್ಡಾದಿಡ್ಡಿ ಚಾಲನೆ, ಸಿಗ್ನಲ್ ಜಂಪ್ ಮಾಡಿ ಸಂಚಾರ ನಿಯಮ ಉಲ್ಲಂಘಿಸುವ ಟೆಕ್ಕಿಗಳಿಗೆ ಬಿಸಿ ಮುಟ್ಟಿಸಲು ತಯಾರಾಗಿರುವ ಸಂಚಾರ ಪೊಲೀಸರು, ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದವರ ಕಂಪನಿಗೆ ಮಾಹಿತಿ ರವಾನಿಸಿ ಅವರ ಬಾಸ್ಗಳಿಂದಲೇ ಬುದ್ಧಿ ಹೇಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಐಟಿ ಕಂಪನಿಗಳೇ ಹೆಚ್ಚಾಗಿರುವ ಹೊರ ವರ್ತುಲ ರಸ್ತೆ ಹಾಗೂ ವೈಟ್‌ಫೀಲ್ಡ್ ಪ್ರದೇಶದ ಮಹದೇವಪುರ ಸಂಚಾರ ಪೊಲೀಸ್ ವಿಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.
ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೂರ್ವ ವಿಭಾಗದ ಸಂಚಾರ ಪೊಲೀಸರು ಈ ವಾರ ನಗರದ ಹೊರವರ್ತುಲ ರಸ್ತೆ ಮತ್ತು ವೈಟ್‌ಫೀಲ್ಡ್ ಐಟಿ ಕಾರಿಡಾರ್‌ನಲ್ಲಿ ಪ್ರಾಯೋಗಿಕವಾಗಿ ಈ ವಿಶಿಷ್ಟವಾದ ಅಭಿಯಾನವನ್ನು ಆರಂಭಿಸಿದ್ದಾರೆ.
“ಸದ್ಯಕ್ಕೆ ಈ ಯೋಜನೆ ಬೆಂಗಳೂರು ಪೂರ್ವ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದು, ಈ ಕ್ರಮದಿಂದ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳು ಈ ಭಾಗದಲ್ಲಿ ಇಳಿಮುಖವಾದರೆ ಬೆಂಗಳೂರಿನ ಇತರ ಭಾಗಗಳಿಗೂ ವಿಸ್ತರಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ.
“ಐಟಿ ಕಂಪನಿಗಳೇ ಹೆಚ್ಚಾಗಿರುವ ಹೊರ ವರ್ತುಲ ರಸ್ತೆ ಹಾಗೂ ವೈಟ್‌ಫೀಲ್ಡ್ ಪ್ರದೇಶದಲ್ಲಿ ಉದ್ಯೋಗಿಗಳು ತಮ್ಮ ಕಚೇರಿಯನ್ನು ಬೇಗ ತಲುಪಬೇಕು ಎಂದು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಹೆಚ್ಚಾಗಿದೆ. ಈ ಪೈಕಿ ಐಟಿ ನೌಕರರೇ ಹೆಚ್ಚು ಎನ್ನುವುದು ಈ ಭಾಗದಲ್ಲಿ ತಿಳಿದು ಬಂದಿದೆ. ಹಾಗಾಗಿ, ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲು ಸಿಗ್ನಲ್ ಜಂಪ್ ಮಾಡುವ ಮತ್ತು ವೇಗವಾಗಿ ವಾಹನ ಚಾಲನೆ ಮಾಡುವ ಉದ್ಯೋಗಿಗಳ ಕಂಪನಿಗಳಿಗೆ ಇ ಮೇಲ್ ಅಥವಾ ವಾಟ್ಸ್‌ಆಪ್ ಮೂಲಕ ಸಂದೇಶ ಕಳುಹಿಸಲಾಗುತ್ತದೆ” ಎಂದು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ (ಪೂರ್ವ) ಕುಲ್ದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.
“ವಾಹನ ಚಾಲನೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜವಾಬ್ದಾರಿಯಿಂದ ವರ್ತಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದರೆ ತಕ್ಷಣ ದಂಡ ವಿಧಿಸಲಾಗುತ್ತದೆ. ವ್ಯಕ್ತಿಯ ಸಾಮಾನ್ಯ ವಿವರಗಳು ಮತ್ತು ಅವರು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ಎಂಬ ಮಾಹಿತಿಯನ್ನು ಕಂಪನಿ ಐಡಿ ಕಾರ್ಡ್ಗಳಿಂದ ಕಲೆಹಾಕಲಾಗುವುದು. ಹೆಚ್ಚಿನವರು ಗುರುತಿನ ಚೀಟಿಗಳನ್ನು ಧರಿಸಿರುತ್ತಾರೆ. ಪ್ರತಿ ದಿನದ ಕೊನೆಯಲ್ಲಿ, ನಾವು ಈ ಮಾಹಿತಿಯನ್ನು ಕಂಪನಿಗಳಿಗೆ ಇಮೇಲ್ ಮಾಡುತ್ತೇವೆ” ಎಂದು ಜೈನ್ ತಿಳಿಸಿದ್ದಾರೆ.
“ಸಂಚಾರ ನಿಯಮಗಳ ಪಾಲನೆ ಹಾಗೂ ರಸ್ತೆ ಸುರಕ್ಷತೆ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡುವಂತೆ ಐಟಿ ಕಂಪನಿಗಳಿಗೆ ಸೂಚನೆ ನೀಡಲಾಗುವುದು. ಅರಿವು ಮೂಡಿಸುವ ಕಾರ್ಯಕ್ಕೆ ಸಂಚಾರ ವಿಭಾಗದ ಪೊಲೀಸರನ್ನು ಆಹ್ವಾನಿಸಬಹುದಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಮುಖಂಡ ತಮ್ಮೇಶ್ ಗೌಡ ವಿರುದ್ಧ ಬೆದರಿಕೆ ಆರೋಪ: ದೂರು ದಾಖಲು
ಸಂಚಾರ ನಿಯಮ ಉಲ್ಲಂಘನೆಯ ತಪಾಸಣೆಗಳು ಪೀಕ್ ಅವರ್‌ಗಳಲ್ಲಿ ನಡೆಯುತ್ತವೆ. ಸಾಮಾನ್ಯವಾಗಿ ಬೆಳಗ್ಗೆ 8 ರಿಂದ 10 ರವರೆಗೆ ಮತ್ತು ಸಂಜೆ 6 ರಿಂದ 8 ರವರೆಗೆ ನಡೆಯುತ್ತವೆ. ಸಂಚಾರ ನಿಯಮ ಪಾಲಿಸದೇ ಸಿಕ್ಕಿಬಿದ್ದ ಟೆಕ್ಕಿಗಳಿಗೆ ದಂಡ ವಿಧಿಸಿ, ಬಳಿಕ, ಇ-ಮೇಲ್, ವಾಟ್ಸ್‌ಅಪ್ ಮೂಲಕ ‘ನಿಮ್ಮ ಕಂಪನಿಯ ಉದ್ಯೋಗಿಗಳು ಸಂಚಾರ ನಿಯಮ ಪಾಲಿಸುತ್ತಿಲ್ಲ. ಈ ನಿಟ್ಟಿನಲ್ಲಿ ನಿಯಮ ಪಾಲನೆ ಬಗ್ಗೆ ಅರಿವು ಮೂಡಿಸಿ’ ಎಂದು ಮಾಹಿತಿ ನೀಡಲಾಗುತ್ತಿದೆ.
ಕಳೆದ ವಾರ, ವೈಟ್‌ಫೀಲ್ಡ್ ಮತ್ತು ಮಹದೇವಪುರದಲ್ಲಿ ಸುಮಾರು 200 ಮಂದಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವವರನ್ನು ಹಿಡಿದು, ದಂಡ ವಿಧಿಸಲಾಗಿದೆ. ಜತೆಗೆ ಅವರ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ.