ಸಂಸದರನ್ನು ಅಮಾನತು ಮಾಡಿರುವ ಮೋದಿ ಸರ್ಕಾರದ ಈ ನಡೆ ಪ್ರಜಾಪ್ರಭುತ್ವದ ಹತ್ಯೆ ಎಂದು ಎಸ್‌ಡಿಪಿಐ ಖಂಡಿಸಿದ್ದು ಪ್ರತಿಭಟನೆ ನಡೆಸಿದೆ.
ಈ ವೇಳೆ ಮಾತನಾಡಿದ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್, ಭಾರತದ ಸಂಸತ್ತು ಪ್ರಜಾಪ್ರಭುತ್ವದ ಆತ್ಮ. ಅಲ್ಲಿ ಆಡಳಿತ ಪಕ್ಷದ ಪ್ರಾಮುಖ್ಯತೆ ಎಷ್ಟಿದೆಯೋ ವಿರೋಧ ಪಕ್ಷದ ಅವಶ್ಯಕತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ವಿಪಕ್ಷವಿಲ್ಲದ ಪ್ರಜಾಪ್ರಭುತ್ವ ಆತ್ಮವಿಲ್ಲದ ದೇಹವಿದ್ದ ಹಾಗೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಕೇವಲ ಪ್ರಶ್ನೆ ಮಾಡಿದ್ದಕ್ಕೆ, ಸುಮಾರು 141 ಜನ ವಿಪಕ್ಷದ ಸಂಸತ್ ಸದಸ್ಯರನ್ನು ಅಂದರೆ ಶೇ.70 ರಷ್ಟು ವಿರೋಧ ಪಕ್ಷದ ಚುನಾಯಿತ ಪ್ರತಿನಿಧಿಗಳನ್ನು ಅಮಾನತು ಮಾಡಿರುವ ಕ್ರಮ ನಿರಂಕುಶ ಪ್ರಭುತ್ವದ ಪರಮಾವಧಿ ಮತ್ತು ಪ್ರಜಾಪ್ರಭುತ್ವದ ಹತ್ಯೆ ಎಂದರು.
ದೇಶದ ಅತಿದೊಡ್ಡ ಪಂಚಾಯತ್ ಎಂದು ಕರೆಯಲ್ಪಡುವ ಸಂಸತ್ತಿನ ಒಳಗೆ ನಿರಾಯಾಸವಾಗಿ ಅಪರಿಚಿತರು ಪ್ರವೇಶ ಮಾಡಿ ಹೊಗೆ ಬಾಂಬೆ ಸ್ಪೋಟಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವೈಫಲ್ಯ. ಆ ಕುರಿತು ಸಂಸತ್ತಿನಲ್ಲಿ ದೇಶದ ಗೃಹಮಂತ್ರಿ ಹೇಳಿಕೆ ನೀಡಬೇಕಾದದ್ದು ಅವರ ಪ್ರಾಥಮಿಕ ಕರ್ತವ್ಯ. ಆದರೆ, ಸರ್ವಾಧಿಕಾರಿ ಧೋರಣೆಯ ಈ ಸರ್ಕಾರ ಹೇಳಿಕೆ ನೀಡುವ ಬದಲು ಈ ವಿಚಾರದಲ್ಲಿ ಸಂಸತ್ ನಲ್ಲಿ ಚರ್ಚೆಗೆ ಒತ್ತಾಯಿಸಿದ ವಿಪಕ್ಷದ ಸಂಸದರನ್ನು ಅಮಾನತು ಮಾಡುವ ಮೂಲಕ ವಿಪಕ್ಷದ ಬಾಯಿಯನ್ನು ಮಾತ್ರವಲ್ಲ, ಇಡೀ ದೇಶದ ಬಾಯಿ ಮುಚ್ಚಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಇದು ದೇಶದಲ್ಲಿ ಅಘೋಷಿತ ತುರ್ತುಸ್ಥಿತಿಯ ವಾತಾರಣ ಇದೆ ಎಂದು ತೋರಿಸುತ್ತದೆ. ಮೋದಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ಎಸ್‌ಡಿಪಿಐ ತೀವ್ರವಾಗಿ ಖಂಡಿಸುತ್ತದೆ. ಸದನದಲ್ಲಿ ಬಹುತೇಕ ಎಲ್ಲ ವಿಪಕ್ಷ ಸದಸ್ಯರು ಅಮಾನತಾಗಿ ಹೊರಗುಳಿದಿರುವ ಸಂದರ್ಭದಲ್ಲಿ ಭಾರತದ ನ್ಯಾಯ ಸಂಹಿತೆಗಳನ್ನು ಮರು ವ್ಯಾಖ್ಯಾನ ಮಾಡುವಂತಹ ಬಹುಮುಖ್ಯ ಕಾಯಿದೆಯನ್ನು ಮಂಡಿಸಿ ಅದನ್ನು ಅಂಗೀಕರಿಸುವ ಸಂಚು ಮಾಡಲಾಗಿದೆ.
ಈ ಅಮಾನತುಗಳ ಹಿಂದೆ ಈ ಮಸೂದೆಗೆ ಎದುರಾಗಬಹುದಾದ ಆಕ್ಷೇಪಣೆ ಮತ್ತು ವಿರೋಧವನ್ನು ಇಲ್ಲವಾಗಿಸುವುದೇ ಆಗಿದೆ. ಬಿಜೆಪಿ ಮತ್ತು ಪ್ರಧಾನಿ ಮೋದಿಯವರು ತಮ್ಮ ಈ ನಿರಂಕುಶ ಆಡಳಿತ, ಸಂವಿಧಾನ ವಿರೋಧಿ ನಡವಳಿಕೆಯನ್ನು ತಿದ್ದಿಕೊಂಡು ವಿಪಕ್ಷದ ಎಲ್ಲ ಸದಸ್ಯರ ಅಮಾನತು ವಾಪಸ್ ಪಡೆದು ಪ್ರಜಾಪ್ರಭುತ್ವದ ಗೌರವವನ್ನು ಉಳಿಸಬೇಕು ಎಂದು ಎಸ್‌ಡಿಪಿಐ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.