- ಯುವನಿಧಿ ಪಡೆಯವುದು ಹೇಗೆ ಎಂಬ ವಿವರ ಇಲ್ಲಿದೆ
- ತಪ್ಪು ಮಾಹಿತಿ ನೀಡಿ ಹಣ ಪಡೆದರೆ ಕಾನೂನು ಕ್ರಮ
ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಯುವನಿಧಿ’ ನಿರುದ್ಯೋಗ ಭತ್ಯೆ ಯೋಜನೆಯ ನೋಂದಣಿಗೆ ಡಿಸೆಂಬರ್ 26ರಂದು ಚಾಲನೆ ನೀಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ನಮ್ಮ ಸರ್ಕಾರದ ಐದನೇ ಕಾರ್ಯಕ್ರಮ ನೋಂದಣಿ ಚಾಲನೆ ಮಾಡುತ್ತಿದ್ದೇವೆ. ಡಿ. 26 ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಲೋಗೋ ಅನಾವರಣ ಮಾಡಲಿದ್ದಾರೆ. ಅಂದಿನಿಂದ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ” ಎಂದರು.
“ಜನವರಿ 12 ರಂದು ವಿವೇಕಾನಂದ ಜಯಂತಿ ದಿನ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆಯಾಗಲಿದೆ. ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯಲಿದೆ. ನಮ್ಮ ಭರವಸೆಗಳಂತೆ ಪದವಿ, ಡಿಪ್ಲೋಮಾ ಮುಗಿಸಿ ಆರು ತಿಂಗಳು ಆಗಿದ್ರೆ ಅವರು ಈ ಯುವನಿಧಿಗೆ ಅರ್ಹರಾಗಿರುತ್ತಾರೆ” ಎಂದು ಹೇಳಿದರು.
“ಪದವಿ ಪಾಸ್ ಆದವರೆಗೆ 3 ಸಾವಿರ, ಡಿಪ್ಲೋಮಾ 1,500 ಸಾವಿರ ಎರಡು ವರ್ಷಗಳವರೆಗೆ ನೀಡುತ್ತೇವೆ. ಮಧ್ಯದಲ್ಲಿ ಯಾರಿಗೆ ಕೆಲಸ ಸಿಗುತ್ತೆ ಅವರಿಗೆ ಯುವನಿಧಿ ಸವಲತ್ತು ನಿಲ್ಲಿಸಲಾಗುತ್ತದೆ” ಎಂದು ಸಚಿವರು ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
ತಪ್ಪು ಮಾಹಿತಿ ನೀಡಿದರೆ ಕ್ರಮ
“ಯುವ ನಿಧಿ ಫಲಾನುಭವಿಗಳು ಕೆಲಸ ದೊರೆತಿದೆಯೋ ಇಲ್ಲವೋ ಎಂಬುದನ್ನು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡಬೇಕು. ಇದನ್ನು ಶೇ.100 ರಷ್ಟು ನಾವು ನೇರವಾಗಿ ಹುಡುಕಲು ಸಾಧ್ಯವಿಲ್ಲ. ಸಾಕಷ್ಟು ಸವಾಲು ಇದೆ. ಕೆಲಸ ಸಿಕ್ಕಿದವರು ಯುವನಿಧಿ ಪಡೆದುಕೊಂಡರೆ, ಆ ಹಣವನ್ನು ವಾಪಸ್ ಪಡೆಯುತ್ತೇವೆ. ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ, ನಮಗೆ ನಮ್ಮ ಯುವಕರ ಮೇಲೆ ನಂಬಿಕೆ ಇದೆ. ಸರ್ಕಾರದ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ” ಎಂದರು.
“10 ಲಕ್ಷಕ್ಕೂ ಹೆಚ್ಚು ಅರ್ಹರಿಗೆ ಪ್ರಯೋಜನ ಸಿಗಲಿದೆ. 250 ಕೋಟಿ ರೂ. ಹಣವನ್ನು ಯೋಜನೆಗೆ ನಿಗದಿ ಮಾಡಲಾಗಿದೆ. ಮುಂದಿನ ವರ್ಷ 1,250 ಕೋಟಿ ಬಜೆಟ್ ಅವಶ್ಯಕತೆ ಇದೆ. ಪತ್ರಿ ತಿಂಗಳು 25 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕ ಓನ್, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು” ಎಂದು ಸಚಿವರು ಹೇಳಿದರು.
ಯೋಜನೆಗೆ ಕೆಲವು ಮಾನದಂಡ ನಿಗದಿ
• ಕರ್ನಾಟಕದಲ್ಲಿ ವಾಸಿಸುವ ಕನ್ನಡಿಗ ಅಭ್ಯರ್ಥಿಗಳಿಗೆ ಮಾತ್ರ
• 2023ರ ವರ್ಷದಲ್ಲಿ ತೇರ್ಗಡೆಯಾಗಿದ್ದು, ಉತ್ತೀರ್ಣರಾಗಿ 180 ದಿನಗಳು ಕಳೆದರೂ ಉದ್ಯೋಗ ಲಭಿಸದವರು ಅರ್ಜಿ ಸಲ್ಲಿಸಬಹುದು
• ಅರ್ಜಿ ಸಲ್ಲಿಸಿದ ದಿನದಿಂದ ಉದ್ಯೋಗ ಸಿಗುವವರೆಗೆ ಮಾತ್ರ ಅಥವಾ ಎರಡು ವರ್ಷ ಗರಿಷ್ಠ ಅವಧಿವರೆಗೆ ಮಾತ್ರ ಈ ಭತ್ಯೆ ಸಿಗಲಿದೆ
• ‘ಸೇವಾ ಸಿಂಧು’ ಪೋರ್ಟಲ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಭತ್ಯೆಯನ್ನು ಡಿಬಿಟಿ ಮೂಲಕ ನೀಡಲಾಗುವುದು
• ನಿರುದ್ಯೋಗ ಸ್ಥಿತಿ ಬಗ್ಗೆ ಸ್ವಯಂ ಘೋಷಿಸಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು
• ಅಭ್ಯರ್ಥಿಗಳು ಅರ್ಜಿ ಹಾಕುವ ವೇಳೆ ತಾವು ಉತ್ತೀರ್ಣರಾದ ದಿನದಿಂದ 6 ತಿಂಗಳವರೆಗಿನ ತಮ್ಮ ಬ್ಯಾಂಕ್ ಖಾತೆಯ ವಹಿವಾಟು (ಸ್ಟೇಟ್‌ಮೆಂಟ್) ಪ್ರತಿ ನೀಡಬೇಕು
• ಪದವಿ, ಡಿಪ್ಲೊಮಾ ಬಳಿಕ ಉನ್ನತ ಶಿಕ್ಷಣ ಮುಂದುವರಿಸಿದರೆ ಈ ಭತ್ಯೆಗೆ ಅರ್ಹರಾಗಿರುವುದಿಲ್ಲ.