ಸವರ್ಣೀಯ ಸಮುದಾಯದ ಜಮೀನನಲ್ಲಿ ತರಕಾರಿ ಸೊಪ್ಪು ಕಿತ್ತಿದ್ದಕ್ಕಾಗಿ 14 ವರ್ಷದ ದಲಿತ ಬಾಲಕಿಯೊಬ್ಬಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಘಟನೆ ಬಿಹಾರದ ಕೈಮೂರ್ ಜಿಲ್ಲೆಯ ಗ್ರಾಮವೊಂದರಲ್ಲಿ ಬುಧವಾರ(ಡಿ.20) ರಂದು ನಡೆದಿದೆ
ದಲಿತ ಬಾಲಕಿಯನ್ನು ಕೊಂದ ಆರೋಪದ ಮೇಲೆ ಜಮೀನನ ಮಾಲೀಕ, ಆತನ ಮಗ ಮತ್ತು ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮೃತ ಬಾಲಕಿ ಸುಂದರಿ ಕುಮಾರಿ ಹಟ ಎಂಬ ಗ್ರಾಮದವಳಾಗಿದ್ದು, ತನ್ನ ಗ್ರಾಮದಿಂದ 1 ಕಿ.ಮೀ ದೂರದಲ್ಲಿರುವ ನಂದನ ಗ್ರಾಮದ ಜಮೀನಿನಲ್ಲಿ ಹಾದು ಬರುವಾಗ ಆಕಸ್ಮಿಕವಾಗಿ ತರಕಾರಿ ಸೊಪ್ಪು ಕೀಳುತ್ತಿದ್ದಳು. ಸ್ಥಳಕ್ಕೆ ಆಗಮಿಸಿದ ಜಮೀನಿನ ಮಾಲೀಕ ರಾಮಧರ್ ಯಾದವ್ ಮತ್ತು ಆತನ ಮಗ ಗೌರವ್ ಬಾಲಕಿಯನ್ನು ಹಿಡಿದು ಬಿದಿರಿನ ಕೋಲುಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರ ಹಲ್ಲೆಗೊಳಗಾದ ಬಾಲಕಿ ನೋವಿನಿಂದಲೇ ಮನೆ ತಲುಪುವ ಮಾರ್ಗಮಧ್ಯೆ ಕುಸಿದು ಬಿದ್ದಿದ್ದಾಳೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಾಕ್ಷಿ ಮಲಿಕ್ ʼಶೂʼಗಳು ಭಾರತದ ಆತ್ಮಸಾಕ್ಷಿಯನ್ನು ಅಣಕಿಸುವ ಸಂಕೇತವಾಗಿ ಉಳಿಯಲಿದೆ
ದಾರಿಯಲ್ಲಿ ಕುಸಿದು ಬಿದ್ದ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಬಾಲಕಿ ಸಾವನಪ್ಪಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದರು.
ಅಮಾನುಷ ಘಟನೆಯನ್ನು ವಿರೋಧಿಸಿ ಬಾಲಕಿಯ ಕುಟುಂಬಸ್ಥರು ಹಾಗೂ ಸ್ಥಳೀಯ ಗ್ರಾಮಸ್ಥರು ಸುಮಾರು ಆರು ಗಂಟೆಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಆಡಳಿತಾಧಿಕಾರಿಗಳ ಮನವೊಲಿಕೆ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಘಟನಾ ಸ್ಥಳಕ್ಕೆ ಆಗಮಿಸಿದ ಇನ್ಸ್‌ಪೆಕ್ಟರ್ ರಮಾನಂದ್ ಮಂಡಲ್ ಮಾತನಾಡಿ, ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗಿದ್ದು, ಆರೋಪಿಯ ಮನೆಗೆ ಬೀಗ ಹಾಕಲಾಗಿದೆ. ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಬಂಧಿಸುವುದಾಗಿ ತಿಳಿಸಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಪೊಲೀಸರು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.