ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ಅಪಘಾತ, ವ್ಹೀಲಿಂಗ್ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ತಡೆಗಟ್ಟಲು ದಕ್ಷಿಣ ವಿಭಾಗದ ಸಂಚಾರ ಉಪ ಪೊಲೀಸ್ ಆಯುಕ್ತ ಶಿವಪ್ರಕಾಶ್ ದೇವರಾಜು ಅವರು ಟ್ವಿಟರ್‌ನಲ್ಲಿ- ಎಕ್ಸ್‌ನಲ್ಲಿ #DCPSOUTHLISTENS (ಡಿಸಿಪಿ ಸೌಥ್ ಲಿಸನ್ಸ್) ಎಂಬ ಹ್ಯಾಶ್‌ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿದ್ದಾರೆ.
ಈ ಅಭಿಯಾನದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವೀಡಿಯೊಗಳನ್ನು ರೆಕಾರ್ಡ್ ಮಾಡಿ ಅವುಗಳನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳುವಂತೆ ಜನರನ್ನು ಪ್ರೋತ್ಸಾಹಿಸಿದ್ದಾರೆ.
“ಈ ಅಭಿಯಾನವು ಬೆಂಗಳೂರಿನಲ್ಲಿರುವ ಟ್ರಾಫಿಕ್ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಹೆಚ್ಚುತ್ತಿರುವ ಬೈಕ್ ಸ್ಟಂಟ್‌ಗಳು ಮತ್ತು ರೋಡ್ ರೇಜ್ ಘಟನೆಗಳ ನಿಯಂತ್ರಣಕ್ಕಾಗಿ ಸಂಚಾರ ಪೊಲೀಸರು ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಆದರೂ, ಹೆಚ್ಚು ಪರಿಣಾಮಕಾರಿ ನಿರ್ವಹಣೆಯ ಅಗತ್ಯವನ್ನು ಗುರುತಿಸಿ, ಆನ್‌ಲೈನ್ ಅಭಿಯಾನವನ್ನು ಪರಿಚಯಿಸಲಾಗಿದೆ” ಎಂದು ಶಿವಪ್ರಕಾಶ ದೇವರಾಜು ಹೇಳಿದರು.
@DCPSouthTrBCP #DCPSOUTHLISTENS #BengaluruPolice https://t.co/EIsrB358mO
— Kishore (@imKBengaluru) December 19, 2023
“ಹೊಸ ವರ್ಷಾಚರಣೆ ಸಮೀಪಿಸುತ್ತಿರುವುದರಿಂದ ಬೈಕ್ ಸ್ಟಂಟ್‌ಗಳು ಮತ್ತು ಕುಡಿದು ವಾಹನ ಚಲಾಯಿಸುವ ಪ್ರಕರಣಗಳು ಹೆಚ್ಚಾಗಲಿವೆ. ಪರಿಸ್ಥಿತಿಯನ್ನು ಪರಿಹರಿಸಲು ಮತ್ತು ರಸ್ತೆ ತೊಂದರೆಗಳು ಗಂಭೀರ ಅಪಾಯವಾಗುವುದನ್ನು ತಡೆಯಲು ನಿರ್ದಿಷ್ಟ ಹ್ಯಾಶ್‌ಟ್ಯಾಗ್ ಅನ್ನು ಪರಿಚಯಿಸಲಾಗಿದೆ” ಎಂದು ಹೇಳಿದರು.
“ಇಲಾಖೆಯಿಂದ ಸುಮಾರು 30 ಸಿಬ್ಬಂದಿ ಪ್ರಸ್ತುತ ದೂರುಗಳ ಮೇಲ್ವಿಚಾರಣೆಯಲ್ಲಿ ತೊಡಗಿದ್ದಾರೆ. ಅಧಿಕೃತವಾಗಿ ದೂರು ದಾಖಲಿಸುವ ಮೊದಲು ರೆಕಾರ್ಡಿಂಗ್ ಅನ್ನು ಪರಿಶೀಲಿಸುತ್ತಿದ್ದಾರೆ. ಮುಂದಿನ ಕ್ರಮ ಕೈಗೊಳ್ಳುವ ಮೊದಲು ಪ್ರತಿ ದೂರನ್ನು ಕೂಲಂಕಷವಾಗಿ ಪರಿಶೀಲಿಸಿ, ಮೌಲ್ಯೀಕರಿಸಲಾಗುತ್ತದೆ. ಇದು ಪ್ರಕ್ರಿಯೆಯಾಗಿದೆ” ಎಂದು ಅವರು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೆಎಸ್‌ಆರ್‌ಟಿಸಿ | ‘ನಮ್ಮ ಕಾರ್ಗೋ-ಟ್ರಕ್ ಸೇವೆ’ ಯೋಜನೆಗೆ ಚಾಲನೆ ನೀಡಿದ ರಾಮಲಿಂಗಾರೆಡ್ಡಿ
“ಅಭಿಯಾನದ ಅಂಗವಾಗಿ ಗುರುವಾರ 59 ಅತಿವೇಗದ ಮತ್ತು ನಿರ್ಲಕ್ಷ್ಯದ ಚಾಲನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಮಂಗಳವಾರ ಮತ್ತು ಬುಧವಾರದ ನಡುವೆ ಅಜಾಗರೂಕತೆಯಿಂದ ಚಾಲನೆ ಮಾಡಿದ 51 ಪ್ರಕರಣಗಳು ದಾಖಲಾಗಿವೆ. 692 ವಾಹನಗಳನ್ನು ಪರೀಕ್ಷಿಸಲಾಯಿತು. ಕುಡಿದು ವಾಹನ ಚಲಾಯಿಸಿದ 28 ಪ್ರಕರಣಗಳನ್ನು ದಾಖಲಾಗಿವೆ” ಎಂದರು.