ಸಂಸತ್ ಭವನದ ಮೇಲೆ ನಡೆದ ದಾಳಿಯ ಕುರಿತು ಪ್ರಶ್ನಿಸಿದ ಸಂಸದರಿಗೆ ಸಮಂಜಸವಾದ ಪ್ರತಿಕ್ರಿಯೆ ನೀಡದೇ 146 ಸಂಸದರನ್ನು ಅಮಾನತುಗೊಳಿಸಿ ಕೇಂದ್ರ ಸರ್ಕಾರ ತನ್ನ ಸರ್ವಾಧಿಕಾರಿ ಧೋರಣೆಯನ್ನು ಸಾಬೀತುಪಡಿಸಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್‌ವಾದಿ) ತೀವ್ರವಾಗಿ ಖಂಡಿಸಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ಸ್‌ವಾದಿ) ಹುಮನಾಬಾದ ತಾಲೂಕು ಶಾಖೆಯ ಪದಾಧಿಕಾರಿಗಳು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
“ಸಂಸತ್ತಿನ ಒಳಗೆ ಅಪರಿಚಿತರು ಪ್ರವೇಶಿಸಿದ ಹಿನ್ನೆಲೆಯಲ್ಲಿ ಸಂಸತ್ತಿನ ಭದ್ರತೆಯ ಕುರಿತು ಸದಸ್ಯರು ಎತ್ತಿದ ಪ್ರಶ್ನೆಯು ವಾಸ್ತವ ನೆಲೆಗಟ್ಟಿನ ಪ್ರಶ್ನೆಯಾಗಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಸಾಂವಿಧಾನಿಕ ಮೌಲ್ಯ ಅನುಸರಿಸಿ ಆಡಳಿತ ನಡೆಸಬೇಕು. ಆದರೆ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವ ಪ್ರಧಾನಿ ನರೇಂದ್ರ ಮೋದಿಯವರು ದಾಳಿಯ ಕುರಿತು ಪ್ರಶ್ನಿಸಿದವರನ್ನು ಕ್ರೌರ್ಯದ ರೀತಿಯಲ್ಲಿ ಹೊರಹಾಕಿದ್ದಾರೆ. ಇದರಿಂದ ತಮ್ಮದು ಫ್ಯಾಸಿಸ್ಟ್ ಪಕ್ಷವೆಂಬುದನ್ನು ಅವರು ಸಾಬೀತು ಮಾಡಿದ್ದಾರೆ” ಎಂದು ಪ್ರತಿಭಟನಾಕಾರರು ಕಿಡಿ ಕಾರಿದರು.
“ಸಂಸತ್ ದಾಳಿ ಘಟನೆ ಹಾಗೂ ಸಂಸದರನ್ನು ಅಮಾನತುಗೊಳಿಸಿದ ಕೇಂದ್ರದ ನಡೆಯನ್ನು ಭಾರತಿಯರೆಲ್ಲರೂ ತೀವ್ರವಾಗಿ ಖಂಡಿಸಬೇಕಾಗಿದೆ. ಕೇಂದ್ರ ಸರಕಾರದ ಈ ನಡೆ ಭಾರತದ ಒಕ್ಕೂಟ ವ್ಯವಸ್ಥೆಯನ್ನು ತಿರಸ್ಕರಿಸಿ ಭಾರತಕ್ಕೆ ಅಪಮಾನ ಮಾಡಿದಂತೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಮದುವೆಗೆ ಒಪ್ಪದ ಪೋಷಕರು : ನೇಣಿಗೆ ಶರಣಾದ ಪ್ರೇಮಿಗಳು
ಪ್ರತಿಭಟನೆಯಲ್ಲಿ ಸಿಪಿಐ(ಎಂ) ತಾಲೂಕು ಕಾರ್ಯದರ್ಶಿ ಬಸವರಾಜ ಮಾಳಗೆ ಸೇರಿದಂತೆ ಪ್ರಮುಖರಾದ ಗೌಸುದ್ದಿನ್, ಪ್ರಭು ಸಂತೋಷ್ಕರ್, ಶಶಿಕಾಂತ ಡಾಂಗೆ, ಅಂಬುಬಾಯಿ ಮಾಳಗೆ, ನಬಿಸಾಬ್ , ಜೇಮ್ಸ್, ರಾಜಪ್ಪ, ಶೇಖ ಅಲಿ ಅರ್ಜುನ್, ಕಿರಣಕುಮಾರ ಇದ್ದರು.