ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅನುಕರಣೆ ಮಾಡಿದ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪರ ಬ್ಯಾಟಿಂಗ್ ಮಾಡಿದ್ದಾರೆ.
“ಈ ವಿಡಿಯೋ ಮಾಡಿದ್ದರಲ್ಲಿ ತಪ್ಪೇನಿದೆ? ರಾಹುಲ್ ಅವರು ಘಟನೆಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ವಿಡಿಯೋವನ್ನು ಬಳಸಿಕೊಂಡಿಲ್ಲ. ಮಿಮಿಕ್ರಿ ಮಾಡುವವರು ಈ ಬಗ್ಗೆ ಯೋಚಿಸಬೇಕಿತ್ತು. ಇದು ರಾಜಕೀಯ ವಿಷಯವಲ್ಲ, ಏಕೆಂದರೆ ಸಾಂವಿಧಾನಿಕ ಹುದ್ದೆಗಳನ್ನು ಯಾವ ಮಟ್ಟಕ್ಕೆ ಅವಮಾನಿಸಲಾಗುತ್ತಿದೆ ಎಂಬುದು ಆತಂಕಕಾರಿಯಾದ ವಿಷಯವಾಗಿದೆ” ಎಂದು ಕಪಿಲ್ ಸಿಬಲ್ ತಮ್ಮ ಮಾಜಿ ಪಕ್ಷದ ನಾಯಕರನ್ನು ಸಮರ್ಥಿಸಿಕೊಂಡಿದ್ದಾರೆ.
ಘಟನೆಯಿಂದ ಅಸಮಾಧಾನಗೊಂಡಿದ್ದ ಜಗದೀಪ್ ಧನಕರ್, ತಮ್ಮ ಉಪ ರಾಷ್ಟ್ರಪತಿ ಹುದ್ದೆಯನ್ನು ಅವಮಾನಿಸಿದ ವಿಪಕ್ಷಗಳ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಇದು ತಮ್ಮನ್ನು ಮಾತ್ರವಲ್ಲ ತಮ್ಮ ಜಾಟ್ ಸಮುದಾಯ ಹಾಗೂ ತಮ್ಮಂತೆ ರೈತ ಸಮುದಾಯದಿಂದ ಬಂದವರಿಗೆ ಅವಮಾನ ಮಾಡಲಾಗುತ್ತಿದೆ ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಲಿಷ್ಠರೇ ಜಾತಿಗಣತಿಯನ್ನು ವಿರೋಧಿಸಿದರೆ ಬಾಯಿಲ್ಲದವರ ಪಾಡೇನು?
ಚಳಿಗಾಲದ ಅಧಿವೇಶನದಲ್ಲಿ ಅಶಿಸ್ತಿನ ವರ್ತನೆಯಿಂದ ಅಮಾನತ್ತಾದ ವಿಪಕ್ಷಗಳ ಸಂಸದರು ಸಂಸತ್ತಿನ ದ್ವಾರದ ಮುಂದೆ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಅನುಕರಣೆ ಮಾಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ವಿಡಿಯೋ ಮಾಡಿಕೊಳ್ಳುತ್ತಿದ್ದರು.
ಕಲ್ಯಾಣ್ ಬ್ಯಾನರ್ಜಿ ಮತ್ತೆ ಸಮರ್ಥನೆ
ತಾವು ಮಿಮಿಕ್ರಿ ಮಾಡಿರುವುದನ್ನು ಮತ್ತೆ ಸಮರ್ಥನೆ ಮಾಡಿಕೊಂಡಿರುವ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ, “ಅನುಕರಣೆಯು ಕಲಾ ರೂಪವಾಗಿದ್ದು, ಇದನ್ನು ಸಾವಿರ ಬಾರಿಯೂ ಬೇಕಾದರೆ ಮಾಡುತ್ತೇನೆ. ಇದು ನನ್ನ ಮೂಲಭೂತ ಹಕ್ಕು. ನಾನು ಮಿಮಿಕ್ರಿಯನ್ನು ಮಾಡುತ್ತಲೇ ಇರುತ್ತೇನೆ. ಸಾವಿರಾರು ಬಾರಿಯು ಬೇಕಾದರೂ ಮಾಡುತ್ತೇನೆ. ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ಎಲ್ಲ ಮೂಲಭೂತ ಹಕ್ಕುಗಳು ನನಗಿವೆ. ನನ್ನನ್ನು ಜೈಲಿಗೆ ತಳ್ಳಿದರೂ ನಾನು ಹಿಂದೆ ಸರಿಯುವುದಿಲ್ಲ” ಎಂದು ಹೇಳಿದ್ದಾರೆ.