ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಣಿಜ್ಯ ಅಂಗಡಿಗಳ ನಾಮಫಲಕ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ವಿರುದ್ದ ಮತ್ತೆ ಮೂರು ಪ್ರಕರಣ ದಾಖಲಾಗಿವೆ.
ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳ ಮುಂದಿನ ಬೋರ್ಡ್ ಒಡೆದು ಹಾಕಿದ್ದಕ್ಕೆ ಸಾದಹಳ್ಳಿಯ ಬ್ಲೂಂ ಹೋಟೆಲ್ ಸೇರಿದಂತೆ ಶೋರೂಂ ಮಾಲೀಕರು ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ಮತ್ತು ವಿಡಿಯೋ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
ಬೆಂಗಳೂರಿನಲ್ಲಿರುವ ವಾಣಿಜ್ಯ ಅಂಗಡಿಗಳ ನಾಮಫಲಕಗಳು ಶೇ.60 ರಷ್ಟು ಇರಬೇಕೆಂದು ಡಿ.27ರಂದು ಕರವೇ ಆಗ್ರಹಿಸಿ ಪ್ರತಿಭಟನೆ ನಡೆಸಿತ್ತು. ಈ ವೇಳೆ, ಹಲವು ಅಂಗಡಿ-ಮುಂಗಟ್ಟುಗಳ ಬೋರ್ಡ್ ಒಡೆದು ಹಾಕಲಾಗಿತ್ತು. ಅಲ್ಲದೇ, ಹೂ ಕುಂಡ ಸೇರಿದಂತೆ ಶೋ ರೂಂ ಗಾಜುಗಳು ಪುಡಿಪುಡಿಯಾಗಿದ್ದವು. ಈ ಘಟನೆಗೆ ಸಂಬಂಧಿಸಿದಂತೆ, ಈಗಾಗಲೇ, 10 ಎಫ್ಐಆರ್ ದಾಖಲಾಗಿದ್ದು, ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿ 53 ಜನರನ್ನ ಬಂಧಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಕೆಲವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ.
ಕರವೇ ಕಾರ್ಯಕರ್ತರನ್ನು ಬಂಧನ ಮಾಡಿದಕ್ಕೆ ಕನ್ನಡಪರ ಸಂಘಟನೆಗಳು ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸುತ್ತಿವೆ. ಸರ್ಕಾರದ ನಡೆಗೆ ಕಿಡಿಕಾರಿವೆ.
ಈ ಸುದ್ದಿ ಓದಿದ್ದೀರಾ? ‘ಶಾಲೆಗೆ ಬನ್ನಿ ಶನಿವಾರ, ಸ್ವಚ್ಛಗೊಳಿಸೋಣ ಸರಸರ’ ಆಂದೋಲನ ಪ್ರಾರಂಭಿಸಲು ಸಕಾಲ: ನಿರಂಜನಾರಾಧ್ಯ ವಿ.ಪಿ.
“ಬಂಧನದಲ್ಲಿರುವ ಎಲ್ಲರನ್ನು ಬಿಡುಗಡೆ ಮಾಡಬೇಕು. ಜತೆಗೆ, ಹೋರಾಟಗಾರರ ಮೇಲೆ ಹಾಕಲಾಗಿರುವ ಕೇಸ್ ಹಿಂಪಡೆಯಬೇಕು. ಒಂದು ವೇಳೆ ಬಿಡುಗಡೆ ಮಾಡದಿದ್ದರೆ, ಬೆಂಗಳೂರು ನಗರ ಬಂದ್ ಕರೆಗೆ ಮತ್ತೊಂದು ಸುತ್ತಿನ ಸಭೆ ಮಾಡಲಾಗುವುದು. ಇನ್ನು ಫೆ.28ಕ್ಕೆ ವಾಣಿಜ್ಯ ಅಂಗಡಿಗಳ ನಾಮಫಲಕ ಕನ್ನಡದಲ್ಲಿರಬೇಕು. ಇಲ್ಲದಿದ್ರೆ ಮತ್ತೆ ನಾಮಫಲಕಗಳ ವಿರುದ್ಧ ಹೋರಾಟ ಮಾಡಲಾಗುವುದು” ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.