ಮಣಿಪುರದಲ್ಲಿ ಮಂಗಳವಾರ (ಜ.2) ಮರುಕಳಿಸಿದ ಹಿಂಸಾಚಾರದಲ್ಲಿ ಬಂಡುಕೋರರು ದಾಳಿ ನಡೆಸಿದ ಪರಿಣಾಮ ನಾಲ್ವರು, ಒರ್ವ ಬಿಎಸ್‌ಎಫ್ ಸೈನಿಕ ಒಳಗೊಂಡು ಸ್ಥಳೀಯ ಪೊಲೀಸರು ಗಾಯಗೊಂಡಿದ್ದಾರೆ
ಮಣಿಪುರದ ತೌಬಾಲ ಜಿಲ್ಲೆಯ ಅಲ್ಪಸಂಖ್ಯಾತರು ಹೆಚ್ಚಿರುವ ಪ್ರದೇಶದಲ್ಲಿ ಅಪರಿಚಿತರಿಂದ ನಾಲ್ವರು ಸ್ಥಳೀಯರು ಹತ್ಯೆಯಾದ ಮರುದಿನ ಈ ಘಟನೆ ಸಂಭವಿಸಿದೆ.
ಡಿ.30 ರಂದು ಮಣಿಪುರದ ಮೊರೆಯಲ್ಲಿ ಪೊಲೀಸ್ ಕಮಾಂಡೊಗಳು ಹಾಗೂ ಅಪರಿಚಿತ ಬಂದೂಕುದಾರಿಗಳ ನಡುವೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಒರ್ವ ಪೊಲೀಸ್ ತೀವ್ರವಾಗಿ ಗಾಯಗೊಂಡಿದ್ದರು. ಅದೇ ದಿನ ಕಂಗೋಪೊಕ್ಪಿ ಜಿಲ್ಲೆಯಲ್ಲಿ ಮೈತೇಯಿ ಹಾಗೂ ಕುಕಿ ಗುಂಪುಗಳ ನಡುವೆ ನಡೆದ ಇನ್ನೊಂದು ಹಿಂಸಾಚಾರ ಘಟನೆಯಲ್ಲಿ ಮೈತೇಯಿ ಸಮುದಾಯದ ಯುವಕನೊಬ್ಬ ಮೃತಪಟ್ಟಿದ್ದ.
ಡಿಸೆಂಬರ್ 4ರಂದು ತೆಂಗೋಪಾಲ್ ಜಿಲ್ಲೆಯಲ್ಲಿ ನಡೆದ ಹಿಂಸಾಚಾರದಲ್ಲಿ 13 ಮಂದಿ ಸಾವಿಗೀಡಾಗಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅತ್ತ ಅತಿಥಿ ಉಪನ್ಯಾಸಕರು ಇತ್ತ ಸರಕಾರ; ನಡುವೆ ನಲುಗದಿರಲಿ ವಿದ್ಯಾರ್ಥಿಗಳು
ಇತ್ತೀಚಿಗೆ ಮತ್ತೆ ಮರುಕಳಿಸಿರುವ ಹಿಂಸಾಚಾರವನ್ನು ಖಂಡಿಸಿರುವ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಗಲಭೆಕೋರರನ್ನು ಬಂಧಿಸುವ ವಿಶ್ವಾಸವ್ಯಕ್ತಪಡಿಸಿದ್ದು ಕಾನೂನಿನ ನಿಯಮದಂತೆ ತಪ್ಪಿತಸ್ಥರನ್ನು ಬಂಧಿಸಿ ಶಿಕ್ಷೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಹಾಗೆಯೇ ಗಲಭೆಪೀಡಿತ ಪ್ರದೇಶಗಳಲ್ಲಿ ಶಾಂತಿಸ್ಥಾಪನೆಗೆ ಮನವಿ ಮಾಡಿದ್ದಾರೆ.
ಸದ್ಯ ಪೂರ್ವ ಇಂಪಾಲ್, ಪಶ್ಚಿಮ ಇಂಪಾಲ್, ಕಾಕ್ಚಿಂಗ್ ಹಾಗೂ ಬಿಷ್ಣೂಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಮುಂದುವರೆಸಲಾಗಿದೆ.
ಕಳೆದ 6 ತಿಂಗಳಿನಿಂದ ಮಣಿಪುರದಲ್ಲಿ ನಡೆದ ಎರಡು ಕೋಮುಗಳ ನಡುವೆ ಘರ್ಷಣೆಯಲ್ಲಿ 200 ಕ್ಕೂ ಹೆಚ್ಚು ಮಂದಿ ಮೃತಪಟ್ಟು 60 ಸಾವಿರಕ್ಕೂ ಹೆಚ್ಚು ಮಂದಿ ವಸತಿಯಿಲ್ಲದೆ ನಿರಾಶ್ರಿತರಾಗಿದ್ದಾರೆ. ಹಿಂಸಾಚಾರದಿಂದ ವಸತಿ ಕಳೆದುಕೊಂಡಿರುವವರೆಗೆ ಹಾಗೂ ಸ್ಥಳಾಂತರವಾದವರು ಹಿಂತಿರುಗಲು ಸಿಎಂ ಬಿರೇನ್ ಸಿಂಗ್ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.