ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಕ್ರೌರ್ಯಕ್ಕೆ ಸಾಕ್ಷಿಯಾಗಿದ್ದ ಬೆಳಗಾವಿ ಜಿಲ್ಲೆ, ಈಗ ಅಂತದ್ದೇ ಮತ್ತೊಂದು ಅಮಾನುಷ ಘಟನೆಗೆ ಸಾಕ್ಷಿಯಾಗಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಅರೆಬೆತ್ತೆಗೊಳಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಘಟನೆ ನವೆಂಬರ್ ತಿಂಗಳಿನಲ್ಲಿ ನಡೆದಿದ್ದು, ಇದೀಗ ಬೆಳಕಿಗೆ ಬೆಂದಿದೆ. ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಸೇರಿದಂತೆ 20 ಮಂದಿ ದುರುಳರು ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತ ಮಹಿಳೆಯ ಜಮೀನಿನಲ್ಲಿ ಪೈಪ್‌ಲೈನ್ ಹಾದುಹೋಗಿತ್ತು. ಆ ಪೈಪ್‌ಲೈನ್‌ನಿಂದ ಬೆಳೆಹಾನಿಯಾಗುತ್ತಿದೆ. ಅದನ್ನು ತೆರವುಗೊಳಿಸಬೇಕೆಂದು ಆಕೆ ಗ್ರಾಮ ಪಂಚಾಯತಿ ಅಧ್ಯಕ್ಷರಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೂ, ಯಾವುದೇ ಉಪಯೋಗ ಆಗಿರಲಿಲ್ಲ. ಇದೇ ವಿಚಾರಕ್ಕೆ ಮಹಿಳೆ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರ ನಡುವೆ ವಾಗ್ವಾದವೂ ನಡೆದಿತ್ತು ಎಂದು ತಿಳಿದುಬಂದಿದೆ.
ಗಲಾಟೆಯಾದ ಬಳಿಕ ಗ್ರಾಮ ಪಂಚಾಯತಿ ಸದಸ್ಯರೊಬ್ಬರು ಮಹಿಳೆ ವಿರುದ್ಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ದೂರು ನೀಡಿದ್ದರು. ಇದಾದ ಬಳಿಕ, ಮತ್ತೆ ಮಹಿಳೆ ಮತ್ತು ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರ ನಡುವೆ ಮತ್ತೆ ಗಲಾಟೆ ನಡೆಸಿದೆ. ಈ ವೇಳೆ, ಮಹಿಳೆಯನ್ನು ಅರೆಬೆತ್ತಲೆಗೊಳಿಸಿ ಅಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ಸಂತ್ರಸ್ತ ಮಹಿಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಅವರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಜಿಲ್ಲಾ ಮಹಿಳೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿ ಕಲ್ಲಪ್ಪ ಡೊಂಕನ್ನವರ್, ಕಲ್ಪನಾ ಡೊಂಕನ್ನವರ್, ಅಡಿವೆಪ್ಪ ದಳವಾಯಿ, ಸಾಧಿಕ್ ಸೇರಿದಂತೆ 20 ಮಂದಿ ವಿರುದ್ಧ ಐಪಿಸಿ ಸೆಕ್ಷನ್ 1860ರಡಿ 143, 147, 354(a), 354(b), 323, 324, 384, 201, 427, 342, 307, 504, 505, 149 ಅಡಿ ಎಫ್‌ಐಆರ್ ದಾಖಲಾಗಿದೆ.