ಕ್ರಿಮಿನಲ್‌ಗಳ ಪರವಾಗಿ ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಬಿಜೆಪಿ ನಾಯಕರು ಪ್ರತಿಭಟನೆ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ. ರಾಜಕೀಯಕ್ಕಾಗಿ ರೌಡಿಶೀಟರ್‌ಗಳ ಪರವಾಗಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ನಾನಾ ಸಮಸ್ಯೆಗಳಿವೆ. ಅವುಗಳ ಬಗ್ಗೆ ಬಿಜೆಪಿ ಗಮನ ಹರಿಸುತ್ತಿಲ್ಲ. ಬದಲಾಗಿ, ರಾಜಕೀಯಕ್ಕಾಗಿ ಕ್ರಿಮಿನಲ್‌ಗಳ ಪರವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇದು ಬಿಜೆಪಿಯ ಹತಾಶೆಯನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
“ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ್ ಪೂಜಾರ ಎಂಬಾತನ ಬಂಧನ ಅನಗತ್ಯವೆಂದು ಬಿಜೆಒಇ ಹೇಳುತ್ತಿದೆ. ಎಲ್ಲರೂ ಕಾನೂನನ್ನು ಪಾಲಿಸಬೇಕು. ಗೌರವಿಸಬೇಕು. ಅದರ ಅನ್ವಯ ಹಿಂದಿನ ಎನ್ಪಿಸಿ ಪ್ರಕರಣಗಳನ್ನು ತ್ವರಿತವಾಗಿ ಅಂತ್ಯಗೊಳಿಸಲು ಗೃಹ ಇಲಾಖೆ ಆದೇಶಿಸಿದೆ. ಪೊಲೀಸರು ಕ್ರಮಕೈಗೊಳ್ಳುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಬಿಜೆಪಿಗರಿಗೆ ಕ್ರಿಮಿನಲ್‌ಗಳ ಮೇಲೆ ಪ್ರೀತಿ ಇದ್ದರೆ, ತಮ್ಮದೇ ಸರ್ಕಾರ ಇದ್ದಾಗ ತಮ್ಮ ಭಕ್ತರ ಮೇಲಿನ ಪ್ರಕರಣಗಳನ್ನು ಖುಲಾಸೆ ಮಾಡಿಕೊಳ್ಳಬೇಕಿತ್ತು. ಅವರಿಗೆ ತಮ್ಮ ಕಾರ್ಯಕರ್ತರ ಮೇಲೆ ಪ್ರಕರಣಗಳು ಇರಬೇಕು. ತಮ್ಮಿಂದ ಅವರು ಓಡಾಡಬೇಕೆಂಬ ದುರುದ್ದೇಶವಿದೆ” ಎಂದು ಕಿಡಿಕಾರಿದ್ದಾರೆ.