ಸಮಾಜದಲ್ಲಿ ನೋವುಗಳಿಗೆ ಸ್ಪಂದಿಸಿ. ಅವುಗಳ ನಿವಾರಣೆಗೆ ಅನೇಕ ಮಹಾನ್ ವ್ಯಕ್ತಿಗಳು ತಮ್ಮನ್ನು ತಾವು ಅರ್ಪಿಸಿಕೊಂಡಿದ್ದಾರೆ. ಸುಮಾರು 150 ವರ್ಷಗಳ ಹಿಂದೆ ಮಹಿಳೆಯರನ್ನು ತೀವ್ರ ಸಂಕಷ್ಟದಲ್ಲಿ ಮುಳುಗಿಸಿದ್ದ ಕಾಲದಲ್ಲಿ, ಅವುಗಳ ವಿರುದ್ಧ ಧ್ವನಿ ಎತ್ತಿ ಮಹಿಳೆಯರ ಶಿಕ್ಷಣಕ್ಕಾಗಿ, ಉನ್ನತ ಸ್ಥಾನಮಾನಗಳಿಗಾಗಿ ಹೋರಾಡಿದ ಚೇತನ ಸಾವಿತ್ರಿಬಾಯಿ ಫುಲೆ ಎಂದು ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಸ್ನೇಹಾ ಕಟ್ಟಿಮನಿ ಹೇಳಿದ್ದಾರೆ.
ಕಲಬುರಗಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ಜ ಕಾಲೇಜಿನಲ್ಲಿ ಎಐಡಿಎಸ್‌ಒ ಆಯೋಜಿಸಿದ್ದ ‘ಸಾವಿತ್ರಿ ಬಾಯಿ ಫುಲೆ’ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “19ನೇ ಶತಮಾನದಲ್ಲಿ ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ವಯಸ್ಸಾದವರ ಜೊತೆ ಮದುವೆ ಮಾಡುತ್ತಿದ್ದರು. ಗಂಡ ಸತ್ತರೆ ತಲೆ ಬೋಳಿಸುವುದು ಮತ್ತು ಗಂಡನ ದೇಹದ ಜೊತೆನೆ ಚಿತೆಯನ್ನೆರಿಸಿ ಜೀವಂತವಾಗಿ ಸುಡುತ್ತಿದ್ದರು. ಇಂತಹ ಕೆಟ್ಟ ಪರಿಸ್ಥಿತಿಯ ವಿರುದ್ಧ ಸಾವಿತ್ರಿ ಬಾಯಿ ಫುಲೆ ಹೋರಾಟ ಕಟ್ಟಿದರು. ಸಮಾಜದ ವಿರೋಧ, ಅವಮಾನ, ಹಿಂಸೆಗಳ ನಡುವೆಯೂ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಸಾವಿತ್ರಿಬಾಯಿ ಅವರು ತಮ್ಮ ಜೀವನದುದ್ದಕ್ಕೂ ಹೋರಾಡಿದರು” ಎಂದು ತಿಳಿಸಿದರು.
“ಮಹಿಳೆಯರಿಗಾಗಿ ಸಾವಿತ್ರಿ ಬಾಯಿ ಫುಲೆ ಹೋರಾಟ ಮಾಡಿದರು. ಹಲವಾರು ಹಕ್ಕುಗಳನ್ನು ತಂದುಕೊಟ್ಟರು. ಆದರೆ, ಇಂದಿನ ಪರಿಸ್ಥಿತಿ ಮತ್ತೆ ಶೋಚನೀಯವಾಗುತ್ತಿದೆ. ಇಂದು ಮಹಿಳೆಯರ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. 06 ತಿಂಗಳ ಮಕ್ಕಳಿಂದ ವಯಸ್ಸಾದ ಅಜ್ಜಿಯವರೆಗೂ ಮಹಿಳೆಯರ ಮೇಲೆ ಪ್ರತಿದಿನ ಅತ್ಯಾಚಾರ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಅಶ್ಲೀಲ ಸಿನಿಮಾ ಸಾಹಿತ್ಯಗಳನ್ನು ಇಂದು ಅಡೆತಡೆ ಇಲ್ಲದೆ ಹರಿಬಿಡಲಾಗುತ್ತಿದೆ. ಮಹಿಳೆಯರು, ವಿದ್ಯಾರ್ಥಿನಿಯರು ಇಂತಹ ದುಸ್ಥಿತಿಯ ವಿರುದ್ಧ ಒಗ್ಗಟ್ಟಾಗಿ, ಘನತೆ ಗೌರವದ ಬದುಕಿಗಾಗಿ ಹೋರಾಡಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳಜರಾಮ ಎನ್.ಕೆ. ಸೇರಿದಂತೆ ಹಲವರು ಇದ್ದರು.