ದೇವೇಗೌಡರು ಮನಸ್ಸು ಮಾಡಿದರೆ, ತಮ್ಮ ಇಡೀ ಕುಟುಂಬವನ್ನು, ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಡಿಲಿಗೆ ಹಾಕಿ, ಅವರ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ, ನೈಸ್ ಯೋಜನೆಯ ಅಕ್ರಮಗಳನ್ನು ತನಿಖೆಗೊಳಪಡಿಸಿ, ಬಡವರಿಗೆ ಭೂಮಿ ಕೊಡಿಸಿ ಕಳಂಕದಿಂದ ಮುಕ್ತರಾಗಬಹುದಲ್ಲವೇ?
‘ನಾನು ನನ್ನ ಜೀವನದಲ್ಲಿ ಮಾಡಿದ ಒಂದೇ ಒಂದು ತಪ್ಪು ಅಂದರೆ ನೈಸ್ ಯೋಜನೆಗೆ ಅನುಮತಿ ಕೊಟ್ಟಿದ್ದು. ಬಡವರ ಭೂಮಿಯನ್ನು ದುರುಪಯೋಗ ಪಡಿಸಿಕೊಂಡಿರುವ ನೈಸ್ ಯೋಜನೆಯನ್ನು ರಾಜ್ಯ ಸರ್ಕಾರ ಕೂಡಲೇ ವಶಕ್ಕೆ ಪಡೆದುಕೊಳ್ಳಬೇಕು. ನೈಸ್ ಕಂಪನಿ ವಶದಲ್ಲಿರುವ 13,404 ಎಕರೆಯಷ್ಟು ರೈತರ ಭೂಮಿಯನ್ನು ಸರಕಾರ ವಶಪಡಿಸಿಕೊಳ್ಳಬೇಕು’ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮಣ್ಣಿನ ಮಗನಾದ ದೇವೇಗೌಡರು ಬಡ ರೈತರ ಭೂಮಿ ಬಗ್ಗೆ ಮಾತನಾಡಿರುವುದು ಸೂಕ್ತವಾಗಿದೆ. ಜೊತೆಗೆ ತಮ್ಮ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತ್ತ ಮಾಡಿಕೊಂಡಿರುವುದು ಕೂಡ ಸಕಾಲಿಕವಾಗಿದೆ. ಹಾಗೆಯೇ 90ರ ಈ ವಯಸ್ಸಿನಲ್ಲಿ, ಎಲ್ಲವನ್ನು ಬಿಟ್ಟು ನೈಸ್ ಬಗ್ಗೆ ಮಾತನಾಡಿದ್ದೇಕೆ ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ. ಕಾರಣವಿಲ್ಲದೆ ಗೌಡರು ಕಂಠ ಶೋಷಣೆಗೊಳಗಾಗುವವರಲ್ಲ ಎಂಬುದನ್ನು ಬಲ್ಲವರು, ಒಳಸುಳಿಗಳನ್ನು ಹುಡುಕುವಂತಾಗಿದೆ.
1996ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು, ಬೆಂಗಳೂರು-ಮೈಸೂರು ನಡುವೆ ಸಂಪರ್ಕ ಕಲ್ಪಿಸುವ ನೈಸ್ ಯೋಜನೆಗೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದು ಕಾರ್ಯರೂಪಕ್ಕಿಳಿಯುವ ಹೊತ್ತಿಗೆ ಅವರು ದೇಶದ ಪ್ರಧಾನಿಯಾಗಿ ದೆಹಲಿಗೆ ತೆರಳಿದ್ದರು. ಗೌಡರು ಅತ್ತ ತೆರಳುತ್ತಿದ್ದಂತೆ ಇತ್ತ ಅಶೋಕ್ ಖೇಣಿ ಜಾತಿ ಕಾರಣಕ್ಕೆ ಮುಖ್ಯಮಂತ್ರಿ ಜೆ.ಎಚ್.ಪಟೇಲರಿಗೆ ಹತ್ತಿರವಾದರು. ಆಗ ಚೀಫ್ ಸೆಕ್ರೆಟರಿಯಾಗಿದ್ದ ಬಿ.ಎಸ್.ಪಾಟೀಲ್ ಖೇಣಿಯ ಮಾರ್ಗದರ್ಶಕರಾದರು. ಹೀಗೆ ರಾಜಕಾರಣಿಗಳು, ಅಧಿಕಾರಿಗಳ ಸಂಪರ್ಕಕ್ಕೆ ಬಂದ ಖೇಣಿ, ಸರಕಾರದ ಸಹಕಾರದಿಂದ, ಜನ ಕೊಟ್ಟ ಜಮೀನಿನ್ನೇ ಬ್ಯಾಂಕಿಗೆ ಅಡವಿಟ್ಟು, ಅದರಿಂದ ಬಂದ ಹಣದಿಂದ ರಸ್ತೆ ಮಾಡಿ, ಟೋಲ್ ಸಂಗ್ರಹಕ್ಕಿಳಿದು, ಗಣಿಗಾರಿಕೆ-ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿದರು. ತಮ್ಮ ಅಕ್ರಮಗಳ ವಿರುದ್ಧ ಕೂಗಾಡುವವರಿಗೆ ಕಿಂಚಿತ್ ಕೊಟ್ಟು, ಕ್ರಿಕೆಟು-ಸಿನೆಮಾ-ಶೋಕಿಗಾಗಿ ದುಪ್ಪಟ್ಟು ಸುರಿಯುತ್ತಾ, ಭಾರೀ ಬ್ಯುಸಿನೆಸ್ ಮನ್ ಆಗಿ ಬೆಳೆದು ನಿಂತರು. ತನ್ನ ಅಕ್ರಮ ವ್ಯವಹಾರಗಳನ್ನು ಮುಚ್ಚಿಕೊಳ್ಳಲು ರಾಜಕಾರಣಕ್ಕೆ ಧುಮುಕಿ ಶಾಸಕರಾದರು. ಶಿವಕುಮಾರ್ ಕೈ ಕುಲುಕಿ ಕಾಂಗ್ರೆಸ್ ಪಕ್ಷ ಸೇರಿ ಸೇಫ್ ಆದರು.
2012ರಲ್ಲಿಯೇ ಸಾಮಾಜಿಕ ಕಾರ್ಯಕರ್ತ ಎ.ಜೆ. ಅಬ್ರಹಾಂ, ನೈಸ್ ಯೋಜನೆಯ ಅಕ್ರಮ ಕುರಿತು ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಅದರಲ್ಲಿ ಅವರು ರಾಜ್ಯದ 103 ರಾಜಕಾರಣಿಗಳು ಮತ್ತು 57 ಐಎಎಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂಬುದನ್ನು ದಾಖಲೆಗಳ ಸಮೇತ ಕೋರ್ಟಿನ ಮುಂದಿಟ್ಟಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್ 156/3ರಡಿ ಹಗರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ಆದೇಶ ನೀಡಿತ್ತು. ಆನಂತರ, ನೈಸ್ ಯೋಜನೆ ಕುರಿತು 2016ರಲ್ಲಿ ಅಂದಿನ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ, ಟಿ.ಬಿ.ಜಯಚಂದ್ರರ ಅಧ್ಯಕ್ಷತೆಯಲ್ಲಿ ಸದನ ಸಮಿತಿ ರಚಿಸಿತ್ತು.
ಸದನ ಸಮಿತಿ ತನ್ನ ವರದಿಯಲ್ಲಿ, ಅಶೋಕ್ ಖೇಣಿಯ ನೈಸ್ ಸಂಸ್ಥೆ ಅನಧಿಕೃತವಾಗಿ ಸಂಗ್ರಹ ಮಾಡಿರುವ 1,350 ಕೋಟಿ ರೂ.ಗಳನ್ನು ಸರಕಾರ ವಸೂಲಿ ಮಾಡಬೇಕು, ನೋಂದಣಿ ಮತ್ತು ಮುದ್ರಾಂಕ ಶುಲ್ಕದ ವಿನಾಯಿತಿಯನ್ನು 5,688 ಎಕರೆಗೆ ಬದಲಾಗಿ 14,337 ಎಕರೆಗೆ ನೀಡಲಾಗಿರುವುದನ್ನು ಹಿಂಪಡೆಯಬೇಕು, ತಮ್ಮ ಸುಪರ್ದಿಯಲ್ಲಿರುವ ಜಮೀನಿನಲ್ಲಿ ಅಕ್ರಮ ಗಣಿಗಾರಿಕೆಯನ್ನು ಉತ್ತೇಜಿಸಿ ಸರಕಾರಕ್ಕೆ 250 ಕೋಟಿ ರೂ. ನಷ್ಟವಾಗಿರುವುದನ್ನು ಸರಕಾರಕ್ಕೆ ಕಟ್ಟಬೇಕು, ನೈಸ್ ಸಂಸ್ಥೆ ಬೆಂಗಳೂರು ವ್ಯಾಪ್ತಿಯನ್ನು ಹೊರತುಪಡಿಸಿ ಯಾವುದೇ ಪ್ರಗತಿ ಮಾಡದೆ, 4,956 ಕೋಟಿ ರೂ. ವಹಿವಾಟು ಮಾಡಿದೆ, ಯೋಜನೆ ಅನುಷ್ಠಾನಗೊಂಡು 19 ವರ್ಷವಾದರೂ ನೈಸ್ ಕಂಪನಿ ನಿರ್ದಿಷ್ಟ ವಿವರಗಳನ್ನು ಇನ್ನೂ ನೀಡಿರುವುದಿಲ್ಲ ಎಂಬ ಅಕ್ರಮಗಳ ದೊಡ್ಡ ಪಟ್ಟಿಯನ್ನೇ ಮಾಡಿತ್ತು. ಜೊತೆಗೆ ಈ ಯೋಜನೆ ಜಾರಿಯ ವೇಳೆ ನಡೆದಿರುವ ಅಕ್ರಮದ ಸಂಪೂರ್ಣ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಜಾರಿ ನಿರ್ದೇಶನಾಲಯ, ಕೇಂದ್ರ ಜಾಗೃತ ಆಯೋಗಕ್ಕೆ ಒಪ್ಪಿಸಬೇಕೆಂದು ಸದನ ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು.
2018ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಗಿ, ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ದೇವೇಗೌಡರು ನಿಜವಾಗಲೂ ಮಣ್ಣಿನ ಮಗನಾಗಿದ್ದರೆ, ಬಡ ರೈತರ ಬಗ್ಗೆ ಕಾಳಜಿ ಕಳಕಳಿ ಹೊಂದಿದ್ದರೆ, ಅಂದೇ ಅವರ ಪುತ್ರ ಕುಮಾರಸ್ವಾಮಿಯವರ ಮೇಲೆ ಒತ್ತಡ ತಂದು, ನೈಸ್ ಯೋಜನೆಯ ಅಕ್ರಮಗಳಿಗೆ ಇತಿಶ್ರೀ ಹಾಡಬಹುದಿತ್ತಲ್ಲವೇ, ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ ಆಗ ಸುಮ್ಮನಿದ್ದ ಗೌಡರು ಈಗ, ‘ನೈಸ್ ಯೋಜನೆಯಲ್ಲಿ ಇಷ್ಟೊಂದು ಅಕ್ರಮ ಆಗಿದ್ದರೂ, ಕ್ರಮ ಕೈಗೊಳ್ಳಲು ಸಿದ್ದರಾಮಯ್ಯರಿಗೆ ಏನು ಕಷ್ಟ ಇದೆಯೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ. ಈಗಲೂ ದೇವೇಗೌಡರು ಮನಸ್ಸು ಮಾಡಿದರೆ, ತಮ್ಮ ಇಡೀ ಕುಟುಂಬವನ್ನು, ಪಕ್ಷವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಮಡಿಲಿಗೆ ಹಾಕಿ, ಅವರ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಈ ಹೊತ್ತಿನಲ್ಲಿ, ನೈಸ್ ಯೋಜನೆಯ ಅಕ್ರಮಗಳನ್ನು ತನಿಖೆಗೊಳಪಡಿಸಿ, ಬಡವರಿಗೆ ಭೂಮಿ ಕೊಡಿಸಿ ಕಳಂಕದಿಂದ ಮುಕ್ತರಾಗಬಹುದಲ್ಲವೇ ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.
1996ರಿಂದ 2023ರವರೆಗೆ ಬಂದ ಮುಖ್ಯಮಂತ್ರಿಗಳು, ಐಎಎಸ್ ಅಧಿಕಾರಿಗಳು ಹಾಗೂ ಎಲ್ಲ ಪಕ್ಷಗಳ ರಾಜಕೀಯ ನಾಯಕರು ರೈತರ ನೂರಾರು ಎಕರೆ ಜಮೀನನ್ನು ಖೇಣಿಗೆ ಕೊಟ್ಟಿದ್ದಾರೆ. ಆತನನ್ನು ಸಾವಿರಾರು ಕೋಟಿಗಳ ಕುಬೇರನನ್ನಾಗಿಸಿದ್ದಾರೆ. ಆತನಿಂದ ಸಿಕ್ಕಷ್ಟು ಕಿತ್ತ ಇವರೂ ತಣ್ಣಗಿದ್ದಾರೆ. ಆದರೆ, ನೈಸ್ ಯೋಜನೆಗಾಗಿ ಜಮೀನು ಬಿಟ್ಟುಕೊಟ್ಟ ಸಾವಿರಾರು ರೈತರು ಹೋಟೆಲ್ ಗಳಲ್ಲಿ, ಪೆಟ್ರೋಲ್ ಬಂಕ್ ಗಳಲ್ಲಿ, ಡಾಬಾಗಳಲ್ಲಿ, ಕಂಪನಿಗಳಲ್ಲಿ ಕನಿಷ್ಠ ಕಾಸಿಗೆ ಕೂಲಿಯಾಳುಗಳಾಗಿ ದುಡಿಯುತ್ತ, ದಿಕ್ಕೆಟ್ಟ ದರಿದ್ರ ಬದುಕು ನೂಕುತ್ತಿದ್ದಾರೆ.
ಭೂಮಿ ಕೊಟ್ಟ ಬಡವರ ಕರುಣಾಜನಕ ಸ್ಥಿತಿ ನಮ್ಮನ್ನಾಳುವವರ ಕರುಳ ಕಿವುಚದಿದ್ದರೆ; ಈ ಸ್ಥಿತಿ ಕೂಡ ತಮ್ಮ ಸ್ವಾರ್ಥ ರಾಜಕಾರಣಕ್ಕೆ ಬಳಕೆಯಾದರೆ; ಇವರನ್ನು ಮನುಷ್ಯರು ಎನ್ನಲಾಗುತ್ತದೆಯೇ?
