2016ರಲ್ಲಿ ರಾಷ್ಟ್ರಮಟ್ಟದ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ಮೈಸೂರು ನಗರ 2023ರ ಸಮೀಕ್ಷೆಯಲ್ಲಿ 27ನೇ ಸ್ಥಾನಕ್ಕೆ ಕುಸಿದಿರುವುದು ಕಂಡುಬಂದಿದೆ.
2022ರಲ್ಲಿ ಮೈಸೂರು 14ನೇ ಸ್ಥಾನದಲ್ಲಿತ್ತು. ರ‍್ಯಾಂಕಿಂಗ್ ವ್ಯವಸ್ಥೆಯಲ್ಲಿನ ಬದಲಾವಣೆ ಮತ್ತು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಸೌಲಭ್ಯದ ಕೊರತೆಯು ಕಳಪೆ ಸಾಧನೆಗೆ ಕಾರಣವಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.
“ಕೆಲವು ವರ್ಷಗಳ ಹಿಂದೆ ಪ್ರಸ್ತಾಪಿಸಲಾದ ಅವಶೇಷಗಳ ತ್ಯಾಜ್ಯ ಘಟಕವನ್ನು ನಿರ್ಮಿಸುವ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆದರೂ ಮೈಸೂರು ಕರ್ನಾಟಕದ ಮೊದಲ ಸ್ವಚ್ಛ ನಗರವಾಗಿದೆ. 3ರಿಂದ 10 ಲಕ್ಷ ಮಂದಿ ಜನಸಂಖ್ಯೆ ವಿಭಾಗದಲ್ಲಿ ಅಖಿಲ ಭಾರತ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವರ್ಷದ ಥೀಮ್ ‘ತ್ಯಾಜ್ಯದಿಂದ ಸಂಪತ್ತಿಗೆ’ ಆಗಿತ್ತು. ತ್ರೈಮಾಸಿಕ ಮೌಲ್ಯಮಾಪನಗಳು, ಪ್ರಮಾಣೀಕರಣಗಳ ಅಂಕಗಳು (ಬಯಲು ಮಲವಿಸರ್ಜನೆ ಮುಕ್ತ ಮತ್ತು ಕಸ ಮುಕ್ತ ನಗರಗಳು) ಮತ್ತು ಸ್ವಚ್ಛ ಸರ್ವೇಕ್ಷಣ್ (ನೇರ ವೀಕ್ಷಣೆ, ನಾಗರಿಕರ ಪ್ರತಿಕ್ರಿಯೆ ಮತ್ತು ಸೇವಾ ಮಟ್ಟದ ಪ್ರಗತಿ) ಆಧಾರದ ಮೇಲೆ ಶ್ರೇಯಾಂಕವನ್ನು ನಿರ್ಧರಿಸಲಾಗುತ್ತದೆ” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸ್ವಚ್ಛ ಸರ್ವೇಕ್ಷಣ್-2023 | ಬೆಂಗಳೂರಿಗೆ ರಾಷ್ಟ್ರಮಟ್ಟದಲ್ಲಿ 125ನೇ ಸ್ಥಾನ
“ರಾಷ್ಟ್ರಮಟ್ಟದ ರ‍್ಯಾಂಕಿಂಗ್‌ನಲ್ಲಿ ಮೈಸೂರು 27ನೇ ಸ್ಥಾನಕ್ಕೆ ಕುಸಿದಿದೆ. ಈ ವರ್ಷ ಶ್ರೇಯಾಂಕ ವ್ಯವಸ್ಥೆಯ ನಿಯಮಗಳು ಬದಲಾಗಿವೆ. ಅಲ್ಲದೆ, ಮೈಸೂರು ನಗರವು ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವ ಮೂಲಸೌಕರ್ಯಗಳನ್ನು ಮೈಸೂರು ನಗರವು ಇನ್ನೂ ರಚಿಸಿಲ್ಲ. ಅಂತಹ ಸೌಲಭ್ಯದ ಕೊರತೆಯು ಶ್ರೇಯಾಂಕದಲ್ಲಿ ನಗರಕ್ಕೆ ಪ್ರತಿಕೂಲವಾಗಿದೆ” ಎಂದು ಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಎನ್ ಪಿ ಹೇಳಿದರು.