“ಸ್ವಾಮಿ ವಿವೇಕಾನಂದರ ತತ್ವ ಸಂದೇಶಗಳು ಸಾರ್ವಕಾಲಿಕ. ಅವರ ತತ್ವ ಸಿದ್ಧಾಂತಗಳನ್ನು ಪ್ರಸ್ತುತ ಯುವಕರು ಇನ್ನೂ ಹೆಚ್ಚೆಚ್ಚು ಅರಿತುಕೊಳ್ಳಬೇಕು ಎಂದು ರಾಜ್ಯದ ಕಾನೂನು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಕೆ ಪಾಟೀಲ್ ತಿಳಿಸಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಶುಕ್ರವಾರದಂದು ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ 2023-24ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಶಾಲಾ ಮಕ್ಕಳಿಗೆ ಸ್ವಾಮಿ ವಿವೇಕಾನಂದರ ಆದರ್ಶ ಗುಣಗಳನ್ನು ತಿಳಿಸುವ ಕೆಲಸವಾಗಬೇಕು. ಸಮಾಜದ ಬಗ್ಗೆ ಚಿಂತನೆ ಮಾಡುವುದರ ಜತೆಗೆ ವಿವೇಕಾನಂದರ ಗುಣಗಳಾದ ದೇಶದ ರಕ್ಷಣೆ, ಸಹನೆ, ಔದಾರ್ಯ, ತಾಳ್ಮೆ ಇವುಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಬೇಕು. ವಿವೇಕಾನಂದರು ವಿದೇಶದಲ್ಲಿಯೂ ಕೂಡ ನಮ್ಮ ದೇಶದ ಸಂಸ್ಕೃತಿಯ ಕೀರ್ತಿ ಪತಾಕೆ ಹಾರಿಸಿದ ಮಹಾನುಭವರು” ಎಂದು ಸ್ಮರಿಸಿದರು.
“ಚಿಕಾಗೋ ಧರ್ಮ ಸಮ್ಮೇಳನದಲ್ಲಿಯ ಅವರ ಭಾಷಣವು ವಿದೇಶಿಗರಲ್ಲಿ ಭಾತೃತ್ವ ಭಾವನೆ ಮೂಡಿಸಿತು. ವಿವೇಕಾನಂದರು ಹೇಳಿದಂತೆ ಯುವಕರು ತಮ್ಮ ಏಳಿಗೆಗೆ ತಾವೇ ಶಿಲ್ಪಿಗಳಾಗಿರುತ್ತಾರೆ. ಗದಗ ಜಿಲ್ಲೆಯು ವಿವೇಕಾನಂದರ ಸಂದೇಶಗಳನ್ನು ವಿಶ್ವಕ್ಕೆ ಬಿತ್ತರಿಸುವ ಕೇಂದ್ರವಾಗಿ ಕೆಲಸ ಮಾಡುತ್ತಿದೆ. ʼಶಕ್ತಿಯೇ ಜೀವನ, ದೌರ್ಬಲ್ಯವೇ ಮರಣʼ ಎಂದು ಸ್ವಾಮಿ ವಿವೇಕಾನಂದರು ಹೇಳಿದಂತೆ ಇಂದಿನ ಯುವಕರು ಖಿನ್ನತೆಗೊಳಗಾಗದೆ, ಸಮಯ ವ್ಯರ್ಥ ಮಾಡದೆ ತಮ್ಮ ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಮಾಡಬೇಕು” ಎಂದು ಸಚಿವ ಡಾ ಎಚ್ ಕೆ ಪಾಟೀಲ್ ಅವರು ಸಲಹೆ ನೀಡಿದರು.
ಕೆವಿಎರ್‌ಆರ್ ಪಪೂ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯ ಅನಿಲ್ ವೈದ್ಯ ಮಾತನಾಡಿ, “ವಿವೇಕಾನಂದರ ಆದರ್ಶಗಳ ಮೂಲಕ ಸಾಕ್ಷಾತ್ಕಾರ ಮಾಡಿಕೊಳ್ಳಬೇಕು. ಇಂದಿನ ಯುವಜನರು ಜ್ಞಾನಾರ್ಜನೆ ಮಾಡಿ ಸಹನೆಯಿಂದ ಕೆಲಸ ನಿರ್ವಹಿಸಿದರೆ ಗುರಿ ಮುಟ್ಟಲು ಸಾಧ್ಯ. ಭವ್ಯ ಭಾರತ ಕಟ್ಟುವಲ್ಲಿ ವಿದ್ಯಾರ್ಥಿಗಳು ವಿವೇಕಾನಂದರ ಸಂದೇಶಗಳನ್ನು ಪಾಲಿಸಬೇಕು. ನಮ್ಮ ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರು ʼಯಾವುದೇ ವ್ಯಕ್ತಿಯೂ ತನ್ನ ಆತ್ಮ ಗೌರವವನ್ನು ಕಳೆದುಕೊಳ್ಳಬಾರದು ಹಾಗೂ ಯಾರ ಆತ್ಮ ಗೌರವವನ್ನು ಕಳೆಯುವ ಕೆಲಸ ಮಾಡಬಾರದುʼ ಎಂದು ಸಂದೇಶ ನೀಡಿದ್ದಾರೆ” ಎಂದು ವಿವರಿಸಿದರು.
ರಾಮಕೃಷ್ಣ–ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಾತನಾಡಿ, “ಯುವಶಕ್ತಿ ದೇಶದ ಸಂಪತ್ತಾಗಿದೆ. ಯುವಜನರು ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳವುದರ ಜತೆಗೆ ದೇಶಪ್ರೇಮ ಹೊಂದಿದವರಾಗಿರಬೇಕು. ದೇಶದ ಸುಧಾರಣೆಗೆ ಶ್ರೇಷ್ಠ ಶಿಕ್ಷಕರು ಅಗತ್ಯ. ಶಿಕ್ಷಣ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸಿದರೆ ಮಾತ್ರ ದೇಶದ ಸುಧಾರಣೆ ಸಾಧ್ಯವಾಗುತ್ತದೆ. ಅಜ್ಞಾನದ ಅಂಧಕಾರವನ್ನು ತೊಲಗಿಸಿ ಜ್ಞಾನದ ಬೆಳಕಿನ ಕಡೆಗೆ ದಾರಿ ತೋರುವವನೇ ಗುರುವಾಗಿರುತ್ತಾನೆ” ಎಂದರು.
“ಪ್ರಸ್ತುತ ತಾಯಂದಿರು ತಮ್ಮ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕು. ದೇಶದ ಪ್ರಜೆಗಳಲ್ಲಿ ಪ್ರಜ್ಞಾವಂತಿಕೆಯಿರುವುದು ಮುಖ್ಯವಾಗಿದೆ. ಇಂದಿನ ಯುವಕರು ನಿಸ್ವಾರ್ಥಿಗಳಾಗಿ ಸಮಾಜ ಸೇವೆಗೆ ತೊಡಗಬೇಕು. ವಿವೇಕಾನಂದರ ಸಂದೇಶಗಳು ಯುವಜನರಿಗೆ ಸೇರಿದಂತೆ ಪ್ರತಿಯೊಬ್ಬರಿಗೂ ಅನುಕರಣೀಯವಾಗಿವೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ವಿದ್ಯುತ್ ಬಳಕೆದಾರರು ಗ್ರಾಹಕ ಸುರಕ್ಷಾ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು: ಎಂ.ಎಂ ನದಾಫ್
ಇದೇ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ಹುಲಕೋಟಿ-ಗದಗದ ರಾಮಕೃಷ್ಣ ವಿವೇಕಾನಂದ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಬ್ರಹ್ಮಚಾರಿ ಅದ್ವೈತ ಚೈತನ್ಯ(ಪುನೀತ್ ಮಹಾರಾಜ್), ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ ಎಸ್ ನೇಮಗೌಡ, ಮಾಜಿ ಶಾಸಕ ಡಿ ಆರ್ ಪಾಟೀಲ್, ಗಣ್ಯರುಗಳಾದ ಗುರಣ್ಣಾ ಬಳಗಾನೂರ, ಬಸವರಾಜ ಕಟ್ಟಿಮನಿ, ಬಿ ಬಿ ಅಸೂಟಿ, ಪ್ರಭು ಬುರಬುರೆ, ಪೀರಸಾಬ ಕೌತಾಳ, ಶಾಲಾ ಕಾಲೇಜು ವಿದ್ಯಾರ್ಥಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.