ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಾಗಿದ್ದ ಹೆಸರನ್ನು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಾಗಿ ಬದಲಾಗಿ ಎರಡು ವರ್ಷ ಕಳೆದರೂ ಬಸ್ ನಿಲ್ದಾಣಗಳಲ್ಲಿ ಮಾತ್ರ ಇನ್ನೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ರಾರಾಜಿಸುತ್ತಿದೆ.
ಬೀದರ್ ನಗರದ ಕೇಂದ್ರ ಬಸ್ ನಿಲ್ದಾಣದ ಎರಡೂ ಕಡೆಯ ಪ್ರವೇಶ ದ್ವಾರಗಳ ಮೇಲೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲೋಗೊ ಹಾಗೂ ನಾಮಫಲಕ ಇನ್ನೂ ರಾರಾಜಿಸುತ್ತಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಎಂದು ಮರುನಾಮಕರಣವಾಗಿ ಎರಡು ವರ್ಷ ಕಳೆದರೂ, ಬಸ್ ನಿಲ್ದಾಣದ ದ್ವಾರ ಸೇರಿದಂತೆ ನಿಲ್ದಾಣದ ಆವರಣದ ಅಲ್ಲಲ್ಲಿ ಈ.ಕ.ರ.ಸಾ.ಸಂಸ್ಥೆಯ ನಾಮಫಲಕ ಬದಲಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣವಾದ ಬಳಿಕ ಸಾರಿಗೆ ಸಂಸ್ಥೆಯ ಹೆಸರೂ ಬದಲಾಯಿಸಬೇಕೆಂಬ ಈ ಭಾಗದ ಬೇಡಿಕೆಗೆ ಸ್ಫಂದಿಸಿದ ಕಳೆದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ, 2021ರ ಜುಲೈ 6ರಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರನ್ನು ʼಕಲ್ಯಾಣ ಕರ್ನಾಟಕ ಸಾರಿಗೆ ನಿಗಮ’ ಎಂದು ಸಂಸ್ಥೆಯಾಗಿ ಮರುನಾಮಕರಣ ಮಾಡಿ ಆದೇಶಿಸಲಾಗಿದೆ. ಇನ್ಮುಂದೆ ‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ(ಕೆಕೆಆರ್‌ಟಿಸಿ)’ ಎಂದು ಜಾರಿಗೆ ಬರಲಿದೆ ಎಂದು ತಿಳಿಸಿತ್ತು.
“ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರು ಕಲ್ಯಾಣ ಕರ್ನಾಟಕ ರಸ್ತೆ ಸಂಸ್ಥೆ (ಕೆಕೆಆರ್‌ಟಿಸಿ) ಎಂದು ಬದಲಾಗಿ ಎರಡು ವರ್ಷಗಳೇ ಕಳೆದಿವೆ. ಆದರೂ ಬೀದರ್ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ಎಂದು ಈ ಹಿಂದೆ ಬರೆಯಲಾದ ನಾಮಫಲಕ ಹಾಗೇ ಇದೆ. ಕೂಡಲೇ ಸಂಸ್ಥೆಯ ಅಧಿಕಾರಿಗಳು ಈಶಾನ್ಯ ಕರ್ನಾಟಕ ಹೆಸರಿನ ನಾಮಫಲಕ ತೆರವುಗೊಳಿಸಿ ಕಲ್ಯಾಣ ಕರ್ನಾಟಕ ಎಂದು ಬದಲಾಯಿಸಬೇಕು. ಇಲ್ಲವಾದಲ್ಲಿ ಬಸ್ ನಿಲ್ದಾಣ ಎದುರು ಪ್ರತಿಭಟನೆ ನಡೆಸಲಾಗುವುದು” ಎಂದು ಕರ್ನಾಟಕ ಯುವ ರಕ್ಷಣೆ ವೇದಿಕೆ ಯುವ ಘಟಕ ಜಿಲ್ಲಾಧ್ಯಕ್ಷ ಗುರುದಾಸ ಅಮದಲಪಾಡ ಈದಿನ.ಕಾಮ್ ಜೊತೆಗೆ ಮಾತನಾಡುತ್ತಾ, ಎಚ್ಚರಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರಂಟಿ ಇಲ್ಲದಾಗ, ನಿಮ್ಮ ಗ್ಯಾರಂಟಿಗಳು ಇನ್ನೆಷ್ಟು ಯೋಗ್ಯ: ಬಿಜೆಪಿ ಪ್ರಶ್ನೆ

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.