ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಸಿಐಟಿಯು ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಸಂಘಟನೆಯಿಂದ ಫೆ. 14ರವರೆಗೆ ಸಹಿ ಸಂಗ್ರಹ ಚಳುವಳಿ ಹಮ್ಮಿಕೊಂಡು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಮುಖಂಡ ಪೀರು ರಾಠೋಡ್ ಮಾತನಾಡಿ, “ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿಯವರ ಕನಸಿನ ಭಾರತ ಇಂದಿಗೂ ನಿರ್ಮಾಣವಾಗಲಿಲ್ಲ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ದೇಶಾದ್ಯಂತ ಸಿಐಟಿಯು ಸಹಿ ಸಂಗ್ರಹ ಚಳುವಳಿ ಹಮ್ಮಿಕೊಂಡಿದೆ. ಸಮಾಜದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋಮು ಗಲಭೆ ಅಳಿದು ಸೌಹಾರ್ದತೆ ಭಾರತ ಉಳಿಯಬೇಕಿದೆ. ದೇಶದ ಕಾರ್ಮಿಕರು, ಯುವಜನರ, ಕಾರ್ಮಿಕ ರೈತರು ಸಹಿ ಸಂಗ್ರಹ ಅಭಿಯಾನ ನಡೆಸುತ್ತಿದ್ದಾರೆ” ಎಂದು ಹೇಳಿದರು.
“ಕೇಂದ್ರದ ಮೋದಿ ನೇತ್ರತ್ವದ ಸರ್ಕಾರವು ಕಾರ್ಮಿಕ ವಿರೋದಿ ನೀತಿಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ಬಡ ಕೂಲಿಕಾರರ, ಮಹಿಳೆಯರ, ರೈತರ ಬದುಕು ಚಿಂತಾಜನಕವಾಗಿದೆ. ಸ್ಕೀಂ ಕೆಲಸಗಾರರಿಗೆ ಕನಿಷ್ಠ ವೇತನ ನೀಡಬೇಕು. ಕಾರ್ಮಿಕ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಸಿಗಬೇಕಾದರೆ ದುಡಿಯುವ ವರ್ಗದವರ ಪರ ನೀತಿಗಳನ್ನು ಜಾರಿಗೊಳಿಸಬೇಕು” ಎಂದು ಒತ್ತಾಯಿಸಿದರು.
ಸಿಐಟಿಯು ಮುಖಂಡ ಮಾರುತಿ ಚಟಗಿ ಮಾತನಾಡಿ, “ಕೇಂದ್ರ ಸರಕಾರವು ರೈತ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ಕಾನೂನು ಜಾರಿಗೊಳಿಸುತ್ತಿದೆ. ಜನರಿಗೆ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಅರಿವು ಮೂಡಿಸಲು ದೇಶದಲ್ಲಿ ಎರಡು ಕೋಟಿ ಸಹಿ ಸಂಗ್ರಹಕ್ಕೆ ಕರೆ ಕೊಟ್ಟಿದ್ದೇವೆ. ಗ್ಯಾಸ್, ತೈಲ್ ಸೇರಿದಂತೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದೆ. ರೈಲ್ವೆ, ವಿದ್ಯುತ್ ಖಾಸಗೀಕರಣಗೊಳಿಸಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ಇಂತಹ ಕೇಂದ್ರ ಸರಕಾರಕ್ಕೆ ಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರು ರಾಠೋಡ್, ಪೀರು ರಾಠೋಡ್, ಬಾಲು ರಾಠೋಡ್, ಮೆಹಬೂಬ್ ಹವಾಲ್ದಾರ್ ಸೇರಿದಂತೆ ಇತರರಿದ್ದರು.
ಬೇಡಿಕೆಗಳು:
1. ಬೆಲೆ ಏರಿಕೆ ತಡೆಗಟ್ಟಲು, ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಿ ಬಡವರ ಪರ ನೀತಿ ಜಾರಿ ಮಾಡಬೇಕು
2. ರೈತ ವಿರೋಧಿ ಕಾನೂನುಗಳ ವಾಪಸ್ಸಾತಿಗಾಗಿ ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ ಖಾತ್ರಿಗೊಳಿಸಬೇಕು.
3. ರೈಲ್ವೆ, ವಿದ್ಯುತ್ ಸೇರಿದಂತೆ ಸಾರ್ವಜನಿಕ ವಲಯದ ಖಾಸಗೀಕರಣ ನೀತಿಗಳನ್ನು ಕೈಬಿಡಲು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ವಾಪಸ್ ಪಡೆಯಬೇಕು.
4. ಕಾರ್ಮಿಕ ಕಾನೂನುಗಳ ಜಾರಿಗಾಗಿ ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯ ನಿಧಿ ಮುಂತಾದ ಕಲ್ಯಾಣ ಸೌಲಭ್ಯಗಳ ಜಾರಿಗೊಳಿಸಬೇಕು.
5. ಸ್ಕೀಂ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಟ ವೇತನ, ಸೇವಾ ಭದ್ರತೆಯನ್ನು ನೀಡಬೇಕು.